ಸೂಚ್ಯಂಕಗಳ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು: ದೀಪಾ
ಮುಂಡಗೋಡ 14: ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳ ಬಗ್ಗೆ ಒತ್ತು ಕೊಡುವ ಕುರಿತು ಇರುವ ಸೂಚ್ಯಂಕಗಳ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದು ಪ್ರಭಾರ ಸಿಡಿಪಿಒ ದೀಪಾ ಬಂಗೇರ ಹೇಳಿದರು.
ಇಲ್ಲಿನ ತಾಲೂಕು ಪಂಚಾಯತ ಸಭಾಭವನದಲ್ಲಿ ಜರುಗಿದ ಸಂಕಲ್ಪ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಈಗಾಗಲೆ ಅನುಷ್ಠಾನದಲ್ಲಿರುವ ಗರ್ಭಿಣಿಯರಿಗೆ ನಿಯಮಿತವಾಗಿ ಪೌಷ್ಟಿಕ ಆಹಾರ ವಿತರಣೆ, 6 ತಿಂಗಳಿಂದ 6 ವರ್ಷದವರೆಗಿನ ಮಕ್ಕಳು ನಿಯಮಿತವಾಗಿ ಪೂರಕ ಆಹಾರ ಸೇವನೆ ಮಾಡುವ ಕುರಿತು, ಅಂಗನವಾಡಿ ಕೇಂದ್ರಗಳಿಗೆ ದಾಖಲಾದ ಮಕ್ಕಳ ತೂಕ, ಎತ್ತರ, ಮಾಪನ ಕ್ರಿಯೆ, ತೀವ್ರ ಅಪೌಷ್ಟಿಕತೆ ಹೊಂದಿರುವ 5 ವರ್ಷದೊಳಗಿನ ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆ, ಆರೋಗ್ಯ ತಪಾಸಣೆ, ಪೌಷ್ಟಿಕ ಮೇಳ, ಸಮತೋಲಿತ ಆಹಾರದ ಕುರಿತು ತಾಯಂದಿರಿಗೆ ಮತ್ತು ಬಾಣಂತಿಯರಿಗೆ ಕಾರ್ಯಾಗಾರ, ಅನೆಮಿಯಾ, ಅಪೌಷ್ಟಿಕತೆ ನಿವಾರಣೆ ಕುರಿತು ಜಾಗೃತಿ, ಜಾಥಾ ಕಾರ್ಯಕ್ರಮ, ಸೀಮಂತ, ಅನ್ನಪ್ರಾಸನಗಳ ಕುರಿತು ಇರುವ ಸೂಚ್ಯಂಕಗಳ ಬಗ್ಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಇಒ ಜಕಣಾಚಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರಾಜೇಶ್ವರಿ ಕದಂ, ಕೆಎಚ್ಪಿಟಿ ಜಿಲ್ಲಾ ಸಂಯೋಜಕ ಮಹೇಂದ್ರ, ತಾ.ಪಂ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಡಿ ಟಿ.ವೈ.ದಾಸನಕೊಪ್ಪ, ತಾಲೂಕಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಎನ್.ಆರ್.ಎಲ್.ಎಂ. ಸಿಬ್ಬಂದಿ, ವಲಯ ಆರೋಗ್ಯ ಕಾರ್ಯಕರ್ತರು, ಎಎನ್ಮ್ಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.