ವಿಜಯಪುರ

ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಪ್ರತಿಭೆಗಳ ಹೊಸ ಹೆಜ್ಜೆ: ‘ಮೆರಾಕಿಫೈ’ ಎಐ ವೇದಿಕೆ ಉದ್ಘಾಟನೆ

ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಪ್ರತಿಭೆಗಳ ಹೊಸ ಹೆಜ್ಜೆ: ‘ಮೆರಾಕಿಫೈ’ ಎಐ ವೇದಿಕೆ ಉದ್ಘಾಟನೆ

ವಿಜಯಪುರ 28: ಯುವ ಪ್ರತಿಭೆಗಳು ನವೋದ್ಯಮಗಳ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.  

ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರ ಪುತ್ರಿ ಸಾನ್ವಿ ಪಾಟೀಲ ಹಾಗೂ ಯುವ ಸ್ನೇಹಿತರೊಂದಿಗೆ ಆರಂಭಿಸಿರುವ ‘ಪ್ರವಾಹ ಲ್ಯಾಬ್ಸ್‌ ಪ್ರೈವೇಟ್ ಲಿಮಿಟೆಡ್‌’ ಸಂಸ್ಥೆಯ ಆನ್ಲೈನ್ ಕೃತಕ ಬುದ್ಧಿಮತ್ತೆ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಕೃತಕ ಬುದ್ಧಿಮತ್ತೆ ಆಧಾರಿತ ಇಂತಹ ವೇದಿಕೆಗಳು ಯುವ ಪ್ರತಿಭೆಗಳ ಕನಸುಗಳಿಗೆ ರೆಕ್ಕೆ ನೀಡಲಿವೆ. ತಂತ್ರಜ್ಞಾನ ಆಧಾರಿತ ಈ ನವೋದ್ಯಮವು ಕಥೆಗಾರರು, ಸಿನಿಮಾ ನಿರ್ಮಾಪಕರು, ಲೇಖಕರು, ಸೃಜನಶೀಲರು ಹಾಗೂ ಉದ್ಯಮಿಗಳಿಗೆ ಉಪಯುಕ್ತ ವೇದಿಕೆಯಾಗಲಿದೆ ಎಂದು ಸಚಿವರು ಹೇಳಿದರು.  

ಮನಸ್ಸಿನಲ್ಲಿರುವ ಹೊಸ ಆಲೋಚನೆಗಳನ್ನು ಕೃತಕ ಬುದ್ಧಿಮತ್ತೆಯ ನೆರವಿನಿಂದ ಗುಣಮಟ್ಟದ ವಿಡಿಯೋಗಳಾಗಿ ಪರಿವರ್ತಿಸುವ ಸಾಮರ್ಥ್ಯ ಈ ವೇದಿಕೆ ಹೊಂದಿದೆ. ಶಿಕ್ಷಣ, ಜಾಹೀರಾತು, ಉದ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಅಗತ್ಯವಿರುವ ವಿವಿಧ ರೀತಿಯ ವಿಡಿಯೋ ವಿಷಯಗಳನ್ನು ಸುಲಭವಾಗಿ ಸೃಷ್ಟಿಸಲು ಇದು ನೆರವಾಗಲಿದೆ ಎಂದರು.  

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಯುವಕರ ಈ ಹೊಸ ಪ್ರಯತ್ನ ವಿನೂತನವಾಗಿದ್ದು, ಅವರು ತಮ್ಮ ಕಾರ್ಯದಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.  

ಇದೇ ಸಂದರ್ಭದಲ್ಲಿ ಸಂಸ್ಥೆ ರೂಪಿಸಿರುವ ಬಂತನಾಳ ಸಂಗನಬಸವ ಶಿವಯೋಗಿಗಳು, ಶಿಕ್ಷಣ ಪ್ರೇಮಿ ಡಿ.ಬಿ.ಎಂ. ಪಾಟೀಲ ಹಾಗೂ ಬಿಎಲ್ಡಿಇ ಅಧ್ಯಕ್ಷ ಎಂ.ಬಿ. ಪಾಟೀಲ ಅವರ ಜೀವನ ಕುರಿತ ಎಐ ಆಧಾರಿತ ಕಿರುಚಿತ್ರ ಪ್ರದರ್ಶನಕ್ಕೆ ಸಚಿವರು ಚಾಲನೆ ನೀಡಿದರು.  

ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠ-ಶಿವಮೊಗ್ಗ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಸಾಗರ ಸಂಸ್ಥಾನ ಮಠದ ಜಡೆ ಡಾ. ಮಹಾಂತ ಸ್ವಾಮೀಜಿ, ವಿಜಯಪುರ ಶಾಂತಾಶ್ರಮದ ಹುಬ್ಬಳ್ಳಿಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ, ಹುಬ್ಬಳ್ಳಿ-ನಿಡೋಣಿ ಎರೆಡೆತ್ತಿನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಮಾಣಕವಾಡ ದೇವಮಂದಿರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮುಖಂಡರಾದ ಹಮೀದ್ ಮುಶ್ರಿಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಪ್ರವಾಹ ಲ್ಯಾಬ್ಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕಿ ಸಾನ್ವಿ ಪಾಟೀಲ, ಪ್ರದೀಪ್ ಮಳಗಿ, ವಿಜಯ ತಿತ್ತಿ, ಸಮರ್ಥ ದತ್ತರ್ಗಿ, ದತ್ತಾ ಕಂಬಾಗಿ, ಹರೀಶ್ ಸೇರಿದಂತೆ ಸಂಸ್ಥೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ