ಬಳ್ಳಾರಿ

ಶ್ರಮದ ಜೀವನ ಶ್ರೇಯಸ್ಸಿಗೆ ಸೋಪಾನ: ರಂಭಾಪುರಿಶ್ರೀ ; ಲಿಂ. ಚಂದ್ರಮೌಳೀಶ್ವರ ಶ್ರೀಗಳ ಪುಣ್ಯ ಸ್ಮರಣೋತ್ಸವ, ವರಸದ್ಯೋಜಾತ ಶ್ರೀಗಳ ಪಟ್ಟಾಧಿಕಾರ

ಶ್ರಮದ ಜೀವನ ಶ್ರೇಯಸ್ಸಿಗೆ ಸೋಪಾನ: ರಂಭಾಪುರಿಶ್ರೀ ; ಲಿಂ. ಚಂದ್ರಮೌಳೀಶ್ವರ ಶ್ರೀಗಳ ಪುಣ್ಯ ಸ್ಮರಣೋತ್ಸವ, ವರಸದ್ಯೋಜಾತ ಶ್ರೀಗಳ ಪಟ್ಟಾಧಿಕಾರ

ಲೋಕದರ್ಶನ ವರದಿ 

ಹರಪನಹಳ್ಳಿ 19: ಜೀವನದ ವಿಕಾಸಕ್ಕೆ ಸಂಸ್ಕಾರ ಸದ್ಗುಣಗಳು ಮುಖ್ಯ. ಅರಿವು ಆದರ್ಶಗಳಿಂದ ಬದುಕು ಸಮೃದ್ಧಗೊಳ್ಳಬೇಕು. ಬೆವರು ಸುರಿಸಿ ದುಡಿಯುವ ವ್ಯಕ್ತಿಯ ಬದುಕು ಉಜ್ವಲ ಶ್ರೇಯಸ್ಸಿಗೆ ಅಡಿಪಾಯವೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ಅವರು ನಗರದ ಎಸ್‌.ಸಿ.ಎಸ್‌.ಓಷಧ ಮಹಾವಿದ್ಯಾಲಯದ ಜ್ಞಾನ ಗಂಗೋತ್ರಿಯಲ್ಲಿ ಸಂಯೋಜಿಸಿದ ಲಿಂ. ಚಂದ್ರಮೌಳೀಶ್ವರ ಶ್ರೀಗಳವರ 8ನೇ ವರ್ಷದ ಪುಣ್ಯ ಸ್ಮರಣೋತ್ಸವ, ವರಸದ್ಯೋಜಾತ ಶ್ರೀಗಳ ಪಟ್ಟಾಧಿಕಾರದ 7ನೇ ವರ್ಷದ ವರ್ಧಂತಿ ಹಾಗೂ ಟಿ.ಎಂ.ಚಂದ್ರಶೇಖರಯ್ಯನವರ ಜನ್ಮ ಅಮೃತ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.  

ಮಾನವ ಜೀವನ ಶಾಶ್ವತವಲ್ಲ. ಮಾಡಿದ ಸತ್ಕಾರ್ಯಗಳು ಸದಾ ಸ್ಮರಣೀಯ. ನಿರಂತರ ತಮ್ಮ ಶ್ರಮ ಸಾಧನೆಯಿಂದ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮಿಗಳು ಅದ್ಭುತ ಸಾಧನೆಗೈದ ಸಹ್ಯಾದ್ರಿ. ಕಷ್ಟಗಳು ಸುಖಾಮನದ ಹೆಗ್ಗುರುತು. ಸಜ್ಜನರಿಗೆ ಬರುವ ಆಪತ್ತು ದುರ್ಜನರಿಗೆ ಬರುವ ಸಂಪತ್ತು ಬಹಳ ದಿನ ಉಳಿಯುವುದಿಲ್ಲ. ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಮೂಡಿಸಿದ ಕೀರ್ತಿ ಚಂದ್ರಮೌಳೀಶ್ವರ ಶ್ರೀಗಳವರಿಗೆ ಸಲ್ಲುತ್ತದೆ. ಅವರ ಕ್ರಿಯಾಶೀಲ ಬದುಕನ್ನು ಕಂಡು 2003ರಲ್ಲಿ ರಂಭಾಪುರಿ ಪೀಠ ಅತ್ಯುನ್ನತ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ ಪ್ರದಾನ ಮಾಡಿ ಅನುಗ್ರಹಿಸಿದ್ದು ಮರೆಯದ ಸಂಗತಿ. ಅವರ 8ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಂಭ್ರಮದಿಂದ ಜರುಗುತ್ತಿರುವುದಕ್ಕೆ ಹರುಷ ವ್ಯಕ್ತಪಡಿಸಿದ ಜಗದ್ಗುರುಗಳು ಇಂದಿನ ಪಟ್ಟಾಧ್ಯಕ್ಷ ವರಸದ್ಯೋಜಾತ ಶ್ರೀಗಳು ಅವರ ಗುರುತರವಾದ ಜವಾಬ್ದಾರಿ ಹೊತ್ತು ಸವಾಂಗೀಣ ಪ್ರಗತಿಗಾಗಿ ಶ್ರಮಿಸುತ್ತಿರುವುದು ಭಕ್ತ ಸಂಕುಲಕ್ಕೆ ಹರುಷ ತಂದಿದೆ. ಕಿರಿಯ ವಯಸ್ಸಿನಲ್ಲಿ ಹಿರಿದಾದ ಮಹತ್ಕಾರ್ಯಗಳನ್ನು ಸಮತೋಲನದಿಂದ ನಿರ್ವಹಿಸುತ್ತಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ. ಚಂದ್ರಮೌಳೀಶ್ವರ ಶ್ರೀಗಳವರ ನೆರಳಿನ ನೆರಳಾಗಿ ಸದಾ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯನವರ ಕೊಡುಗೆ ಅಪಾರವಾದುದು. ರಂಭಾಪುರಿ ಜಗದ್ಗುರುಗಳು ವರಸದ್ಯೋಜಾತ ಶ್ರೀಗಳಿಗೆ ಮತ್ತು ಟಿ.ಎಂ.ಚಂದ್ರಶೇಖರಯ್ಯನವರಿಗೆ ರೇಶ್ಮೆ ಮಡಿ ಫಲ ಪುಷ್ಪ ಸ್ಮರಣಿಕೆಯನ್ನಿತ್ತು ಶುಭ ಹಾರೈಸಿದರು.  

ಸಾನ್ನಿಧ್ಯ ವಹಿಸಿದ ಹಿಮವತ್ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶೀರ್ವಚನದಲ್ಲಿ ಮನುಷ್ಯ ಜೀವನದಲ್ಲಿ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದರೆ ವ್ಯರ್ಥ. ಲಿಂ. ಚಂದ್ರಮೌಳೀಶ್ವರ ಶಿವಾಚಾರ್ಯರು ನಾಲ್ಕು ಪುರುಷಾರ್ಥಗಳನ್ನು ತಮ್ಮದಾಗಿಸಿಕೊಂಡಿದ್ದರು. ಅವರ ದೂರದೃಷ್ಟಿ ಮತ್ತು ಕರ್ತವ್ಯದಿಂದಾಗಿ ಶ್ರೀ ಮಠ ಅದ್ಭುತವಾಗಿ ಬೆಳೆದಿದೆ. ಇದೇ ದಾರಿಯಲ್ಲಿ ವರಸದ್ಯೋಜಾತ ಶ್ರೀಗಳು ಮುನ್ನಡೆದು ಮಠದ ಪ್ರಗತಿ ಕಾರ್ಯ ನಿರ್ವಹಿಸುತ್ತಿರುವುದು ಸ್ತುತ್ಯಾರ್ಹವಾದುದು. ಟಿ.ಎಂ.ಚಂದ್ರಶೇಖರಯ್ಯನವರ ಕಾರ್ಯ ಯೋಜನೆಗಳು ಶಿ ಮಠದ ಸರ್ವಾಂಗೀಣ ಶ್ರೇಯಸ್ಸಿಗೆ ಕಾರಣವಾಗಿವೆ. ಇನ್ನೂ ಅವರ ಸೇವೆ ಮುಂದುವರಿಯಲೆಂದು ಶುಭ ಹಾರೈಸಿದರು. 

ದಾವಣಗೆರೆ ಕಂಬಾಳಿಮಠದ ಗಂಗಾಧರಸ್ವಾಮಿ ಅವರು ಶ್ರೀಮಠ ನಡೆದು ಬಂದ ದಾರಿ, ಶ್ರೀಗಳ ಸಾಧನೆ ಮತ್ತು ಸಹಕರಿಸಿ ದುಡಿದ ಟಿ.ಎಂ.ಚಂದ್ರಶೇಖರಯ್ಯನವರ ಬಗೆಗೆ ಸದಾಶಯ ನುಡಿ ಸಲ್ಲಿಸಿದರು. ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಮತ್ತು ಗುರು ಪರಂಪರೆಯ ಆದರ್ಶ ಮೌಲ್ಯಗಳ ಬಗ್ಗೆ ಉಪದೇಶಾಮೃತವನ್ನಿತ್ತರು.  

ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಲಿಂ.ಚಂದ್ರಮೌಳೀಶ್ವರರ ಕೃಪಾದೃಷ್ಟಿ- ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಬಲದಿಂದ ತೆಗ್ಗಿನಮಠ ಸಂಸ್ಥಾನದ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸುತ್ತಿರುವುದು ತಮಗೆ ತೃಪ್ತಿ ತಂದಿದೆ. ಭವಿಷ್ಯತ್ತಿನ ದಿನಗಳಲ್ಲಿ ಶ್ರೀಮಠದ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಸಂಕಲ್ಪ ನಮ್ಮದಾಗಿದೆ ಎಂದರು.  

ಹಾವೇರಿ ಅಪರ ಜಿಲ್ಲಾಧಿಕಾರಿ ಎ.ವೀರಮಲ್ಲಪ್ಪ, ಹರಪನಹಳ್ಳಿ ಡಿ.ವೈ.ಎಸ್‌.ಪಿ.ಹಾಲಮೂರ್ತಿರಾವ್, ಅಳವಂಡಿ ಗುರುಮೂರ್ತಿಸ್ವಾಮಿ ಇನಾಂದಾರ್, ಗಂಗಾವತಿ ಬಿ.ಎಂ.ತಿಪ್ಪೇರುದ್ರಸ್ವಾಮಿ, ಧಾರವಾಡದ ಗುರುಸಿದ್ಧಯ್ಯ ಹಿರೇಮಠ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು. ಪ್ರೊ.ಹೆಚ್‌.ಎ.ಭಿಕ್ಷಾವರ್ತಿಮಠ ಹರಿಹರ ಅವರು ಅಭಿನಂದನಾ ಗ್ರಂಥದ ಬಗೆಗೆ ಮಾತನಾಡಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಅತ್ಯಂತ ಪ್ರಾಚೀನವಾಗಿದ್ದು ಸಕಲರಿಗೂ ಒಳಿತನ್ನೇ ಬಯಸುತ್ತಾ ಬಂದಿದೆ ಎಂದರು. ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯನವರು ಮಾತನಾಡಿ ಇಂದಿನ ಎಲ್ಲ ಸಂಭ್ರಮಕ್ಕೆ ಲಿಂ. ಚಂದ್ರಮೌಳೀಶ್ವರ ಶ್ರೀಗಳು ಕಾರಣರು. ಅವರ ಸಾಧನೆ ಸಿದ್ಧಿ ಇಂದಿನ ಜನ ಸಮುದಾಯಕ್ಕೆ ಆಶಾ ಕಿರಣವಾಗಿದೆ. ಅವರ ನೆರಳಿನಡಿಯಲ್ಲಿ ಸೇವೆ ಸಲ್ಲಿಸಿದ ಸಂತೃಪ್ತಿಯ ಮನೋಭಾವ ನನ್ನದಾಗಿದೆ ಎಂದು ನೆನಪಿಸಿಕೊಂಡರು.  

ಹೊಸಪೇಟೆ ಟಿ.ಎಂ.ಶಿವದೇವಸ್ವಾಮಿ, ಗೊಗ್ಗ ಚನ್ನಬಸವರಾಜ, ಬೆಂಗಳೂರಿನ ಡಾ.ರವೀಂದ್ರ ಬಣಕಾರ, ಹರಪನಹಳ್ಳಿ ಪಿ.ಬಿ.ಗೌಡ್ರು, ಹೂವಿನ ಹಡಗಲಿ ಪ್ರಶಾಂತ ಜೈನ್ ಅವರಿಗೆ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಶುಭ ಹಾರೈಸಿದರು.  

ಶಿವಮೊಗ್ಗದ ಉಸ್ತಾದ ಹುಮಾಯೂನ ಹರ್ಲಾಪುರ ಮತ್ತು ಸಂಗಡಿಗರಿಂದ ಸಂಗೀತ ಸೌರಭ ಜರುಗಿತು. ಶಾಲಾ ಕಾಲೇಜ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಿ.ಎಂ.ಕೊಟ್ರಯ್ಯ ಸ್ವಾಗತಿಸಿದರು. ಎಸ್‌.ದ್ವಾರಕೀಶರೆಡ್ಡಿ ಮತ್ತು ನಾಗವೇಣಿ ನಿರೂಪಿಸಿದರು. ಸಮಾರಂಭದ ನಂತರ ಪ್ರಸಾದ ವಿನಿಯೋಗ ಜರುಗಿತು. 


ಸುದ್ದಿ ಓದಿ