ಎದೆಯಲ್ಲಿ ಮೂಡಿದೆ ಸಂತಸದ ಹೊಂಗಿರಣ
ಎದೆಯಲ್ಲಿ ಸಂತೋಷದ ಬೀಜ ಬಿತ್ತಿದೆ. ಹೃದಯವು ಖುಷಿಯಿಂದ ತುಂಬಿಕೊಂಡಿದೆ. ಮಾತು ಮೌನವಾಗಿದೆ. ಅಗಾಧ ಆನಂದ ಮೈಮನಗಳಲ್ಲಿ.... ಕುಣಿದು ಕುಪ್ಪಳಿಸುವಂತಿದೆ. ಕಣ್ಣಾಲಿಗಳಿಂದ ಆನಂದ ಅಶ್ರುಗಳು ತನ್ನಿಂದ ತಾನೇ ಹರಿದು ಬರುತ್ತಿವೆ. ಯಾಕೆ ಹೀಗಾಗುತ್ತಿದೆ? ಹೀಗಾಗಲು ಕಾರಣವೇನು? ಇದಕ್ಕೆಲ್ಲ ಅರ್ಥವೇನು?
ಅಗಸ್ಟ್ ತಿಂಗಳ 23ನೇ ತಾರೀಖು ಎಂದೆಂದೂ ನೆನಪಿನಲ್ಲಿಡುವಂತಹ ದಿನ. ಜಗತ್ತಿನ ಎಲ್ಲ ದೇಶಗಳು ನಿಬ್ಬೆರಗಾಗಿ ಭಾರತದೆಡೆಗೆ ನೋಡುತ್ತಿವೆ. ನಭೋ ಮಂಡಲದಲ್ಲಿ ಅಚ್ಚರಿಘಟಿಸುತ್ತಿದೆ. ಚಂದಮಾಮ ಇವತ್ತು ಅಕ್ಕನನ್ನು ಸಂಧಿಸುವ ಸಮಯ ಬಂದಿದೆ. ವರಮಹಾಲಕ್ಷ್ಮಿ ಪೂಜೆಗೆ ಅಕ್ಕನನ್ನು ತಮ್ಮ ತವರುಮನೆಗೆ ಕರೆಸಿಕೊಂಡಿದ್ದಾನೆ. ರಾಕಿ ಕಟ್ಟಿಸಿಕೊಳ್ಳುವ ಉಮ್ಮೇದು ಹೆಚ್ಚಾಗಿದೆ. ಎಲ್ಲ ಪ್ರೀತಿ ಅಕ್ಕರೆ ವಾತ್ಸಲ್ಯಗಳು ಮೇಳೈಸಿವೆ. ಹಿರಿಯಣ್ಣಂದಿರೆಲ್ಲ ಸೋತು ಸುಣ್ಣಾದಾಗ ಮಾಭಾರತೀಯ ಮಡಿಲಲ್ಲಿ ತೂಗುಯ್ಯಾಲಿ ಆಡುವ ತಮ್ಮನ ಕನಸು ನನಸು ಗೊಂಡಿದೆ ಎಂದೆಲ್ಲ ಕಲ್ಪನೆಗಳು ಹರಿಬಿಡಬಹುದು... ಯಾಕೆಂದರೆ ಭಾರತ ದೇಶದ ಜೊತೆಗಿನ ಚಂದ್ರನ ಸಂಬಂಧ ಅಕ್ಕ ತಮ್ಮನ ಸಂಬಂಧ...ಇದನ್ನು ನಾನು ಹೇಳ್ತಾ ಇಲ್ಲ...ರಾಮಾಯಣ ಕಾಲದಿಂದಲೂ ನಡೆದು ಬಂದಂಥಹದು.ರಾಮನಿಗೆ ಬಾಲ್ಯದಲ್ಲಿ ಊಟ ಮಾಡಿಸುವಾಗ ಕೌಸಲ್ಯ ಚಂದಾಮಾಮಾನನ್ನು ತೋರಿಸಿಯೇ ತುತ್ತು ಉಣಿಸುತ್ತಿದ್ದಳಂತೆ. ಆಗ ರಾಮನು ಚಂದಾಮಾಮಾ ನನ್ನು ತಂದುಕೊಡು ಎಂದು ದುಂಬಾಲುಬೀಳುತ್ತಾನೆ.ಊಟಮಾಡದೇ ಹಟ ಮಾಡುತ್ತಾನೆ.ಆಗ ಅವನನ್ನು ಸಂಬಾಳಿಸಿದ್ದು ಮಂತ್ರಿಯಾದ ಸುಮಂತನು.ಒಂದು ಕನ್ನಡಿಯನ್ನು ಚಂದ್ರಮನೆಡೆಗೆ ಹಿಡಿದು ಅದರ ಪ್ರತಿಬಿಂಬ ತಾಟಿನಲ್ಲಿ ಮೂಡುವಂತೆ ಮಾಡಿ ಚಾಣಾಕ್ಷತೆ ಮೆರೆದಿದ್ದ ಸುಮಂತ್.ಚಂದ್ರನನ್ನು (ಚಂದ್ರನ ಪ್ರತಿಬಿಂಬ) ಕೈಯಲ್ಲಿ ಸ್ಪರ್ಷಿಸಿ ಆನಂದಿತಗೊಂಡ ರಾಮ ಊಟ ಮಾಡಿದ್ದ!. ಪ್ರತಿಯೊಬ್ಬ ತಾಯಿಯೂ ತನ್ನ ಮಗು ಉಣ್ಣುವಾಗ, ಹಾಲು ಕುಡಿಯುವಾಗ ಚಂದ್ರನನ್ನು ತೋರಿಸದೇ ಇರುವುದಿಲ್ಲ. ಹೀಗಾಗಿ ಅವನನ್ನು ಕರೆಯುವುದೇ ಚಂದಾಮಾಮಾ ಎಂದು.! ಅಂದರೆ ತನ್ನ ತಮ್ಮನನ್ನಾಗಿಸಿ ಸಂಬಂಧ ಕಲ್ಪಿಸಿದವಳು ತಾಯಿ.ಹಾಗಾಗಿಯೇ ನಮ್ಮೆಲ್ಲರಲ್ಲಿ ಚಂದ್ರನ ನೆಡೆಗೆ ಒಂದು ರೀತಿಯ ಭಾವನಾತ್ಮಕ ಸಂಬಂಧವಿದೆ ಎಂದರೆ ತಪ್ಪಲ್ಲ.
ಬಯಸಿ ಬಯಸಿ ದಕ್ಷಿಣದ ಕತ್ತಲ ಸಾಮ್ರಾಜ್ಯಕ್ಕೆ ಕಾಲಿಟ್ಟಾಗ ಅಲ್ಲಿ ಬೆಳ್ಳನೆಯ ಬೆಳಕು.... ತಗ್ಗುದಿನ್ನೆಯ ಅಂಗಳದಲ್ಲಿ ಮಹಾಭಾರತೀಯ ವಿಕ್ರಮ ಗೆದ್ದಿದ್ದಾಗಿದೆ.6 ಗಂಟೆ ನಾಲ್ಕು ಮಿನಿಟಿಗೆ ಚಂದ್ರನ ಅಂಗಳದಲ್ಲಿ ಚಂದ್ರಯಾನ 3 ನೆಲೆ ಊರಿ ನಿಂತಿದೆ. ವಿಕ್ರಮನ ತೆಕ್ಕೆಯಲ್ಲಿರುವ ಬಂಗಾರಬಣ್ಣದ ಪ್ರಜ್ಞಾನ್ ಸಾವಕಾಶವಾಗಿ ಹೊರಗಿಣುಕಿ ಚಂದಿರನನ್ನು ಸ್ಪರ್ಶಿಸಿದೆ... ಚುಂಬಿಸಿದೆ... ಇಂಚ್ ಇಂಚು ಪರೀಕ್ಷಿಸುತ್ತಾ ಫೋಟೋ ಕ್ಲಿಕ್ಕಿಸಿ ಮಾಹಿತಿ ಹೊರಗಿಡುತ್ತಿದೆ..
ಒಂದಾನೊಂದು ಕಾಲವಿತ್ತು.. ಭಾರತದ ವಿಜ್ಞಾನಿಗಳಲ್ಲಿ ಜ್ಞಾನವಿತ್ತು, ವಿಜ್ಞಾನ ವಿತ್ತು, ವಿಚಾರವಿತ್ತು, ತರ್ಕವಿತ್ತು, ಸಾಧಿಸುವ ಛಲವಿತ್ತು... ಆದರೆ ದುಡ್ಡಿನ ಕೊರತೆ ,ಬಡತನ, ದೂರದಿಂದಲೇ ತನ್ನ ಪ್ರೀತಿಯನ್ನು ಅರುಹಿ ಕುಳಿತುಕೊಳ್ಳಲೂ ಆಗದಂತಹ ಸ್ಥಿತಿ.. ತಯಾರಿಸಿದ ಬಿಡಿ ಭಾಗಗಳನ್ನು ಸೈಕಲ್ ಮೇಲೆ, ಎತ್ತಿನ ಗಾಡಿಯ ಮೇಲೆ ಹೊತ್ತೊಯ್ಯುವ ಸ್ಥಿತಿ...! ಆದರೇನಂತೆ ಎದೆಯಲ್ಲಿ ಉಮ್ಮಳಿಸುವ ಛಲವೊಂದಿತ್ತಲ್ಲ... ಬಡತನದಲ್ಲೂ ವೈಜ್ಞಾನಿಕ ವಿಚಾರಕ್ಕೆ ತಿದಿವತ್ತಿ ಅಂಬಿಗಾಲ್ ಇಡುತ್ತಾ ನಡೆದು ಬಿಡ್ತು ಭಾರತ! ಅಪಹಾಸ್ಯಗೈದವರು ಎಷ್ಟು ಜನ? ಅಸಹ್ಯ ಪಟ್ಟವರೆಷ್ಟು ಜನ? ಅಸಹಕಾರ ತೋರಿದವರೆಷ್ಟು ಜನ? ಯಾವುದಕ್ಕೂ ಕ್ಯಾರೆಯನ್ನದೆ ಮುನ್ನಡೆದು ಬಿಡ್ತು, ತನ್ನ ಗುರಿಯಡಿಗೆ ನಡೆಯುವುದನ್ನು ನಿಲ್ಲಿಸಲಿಲ್ಲ ಭಾರತದ ವಿಜ್ಞಾನಿಗಳು.ತನ್ನ ಜ್ಞಾನ, ವಿಜ್ಞಾನ ದ ಮೇಲೆ ಭರವಸೆ ಇಟ್ಟು ನಡೆದುಬಿಟ್ಟರು.
ವಾಜಪೇಯಿ ಅವರು ಪ್ರಧಾನಿಯಾದಾಗ ಚಂದ್ರಯಾನ ಪ್ರಥಮಕ್ಕೆ ಸೂಚನೆ ಕೊಟ್ಟರು. ಮಿಷನ್ ಪೂರೈಸಬೇಕೆಂಬಷ್ಟರಲ್ಲಿ ಅವರ ಸರ್ಕಾರ ಬದಲಾಗಿತ್ತು.2008ರಲ್ಲಿ ಪ್ರಥಮ ಚಂದ್ರಯಾನ ಪೂರೈಸಿದಾಗ ಅಸಹ್ಯ ಪಟ್ಟ ವಿದೇಶಿ ಕಣ್ಣುಗಳು ಅಸೂಯೆ ಪಡುವಂತಾಯಿತು! ಮೊಟ್ಟ ಮೊದಲಿಗೆ ಚಂದ್ರನಲ್ಲಿ ನೀರಿದೆ ಎಂದು ಅರುವಿದ್ದೇ ಭಾರತದ ವಿಜ್ಞಾನಿಗಳು. ಈಗಾಗಲೇ ಅಮೆರಿಕ ,ರಷ್ಯಾ, ಚೈನಾ ತಮ್ಮ ತಮ್ಮ ನೌಕೆಗಳನ್ನು ಚಂದ್ರನಲ್ಲಿ ಕಳಿಸಿಯಾಗಿತ್ತು ಮತ್ತು ಅಷ್ಟೇ ಗರ್ವದಿಂದ ಬೀಗುತ್ತಿದ್ದವು. ಭಾರತ ತನ್ನ ಚಂದ್ರಯಾನ ಪೂರೈಸುತ್ತಿದೆ ಎಂದಾಗ ಅಪಹಾಸ್ಯಗೈದಿದ್ದವು. ಕ್ರಯೋಜನಿಕ ತಂತ್ರಜ್ಞಾನದ ಅವಶ್ಯಕತೆ ಇದ್ದಾಗ ಅಮೇರಿಕಾ ಕೈ ತಿರುಗಿಸಿ ಬಿಟ್ಟಿತ್ತು. ಆಗ ಸಹಾಯ ಹಸ್ತ ಚಾಚಿದ್ದೇ ರಷ್ಯಾ. ಆದರೆ ನಮ್ಮ ವಿಜ್ಞಾನಿಗಳು ಸ್ವಾಭಿಮಾನಿಗಳು ಯಾರ ಮುಂದೆ ಯಾಕೆ ನಾವು ಕೈವಡ್ಡಬೇಕು ಎಂಬ ಭಾವ ಅವರಲ್ಲಿ. ತಾವೇ ಕ್ರಯೋಜನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದಾಗ ಹಿಂತಿರುಗಿ ನೋಡಲೇ ಇಲ್ಲ. ಒಂದಾದ ಮೇಲೆ ಒಂದರಂತೆ ಸೆಟ್ ಲೈಟ್ ಆಕಾಶಕ್ಕೆ ಬಿಟ್ಟಿದ್ದೇ ಬಿಟ್ಟಿದ್ದು!! ಅದೂ ಸ್ವಸ್ತದಲ್ಲಿ ಮಸ್ತ್!! ಹೀಗಾಗಿ ಅನೇಕ ದೇಶಗಳು ಈಗ ಇಸ್ರೋಕ್ಕೆ ದುಂಬಾಲು ಬಿದ್ದು ತಮ್ಮ ಸೆಟಲೈಟ್ಗಳನ್ನು ಕೂಡ ಭಾರತದ ಸಹಾಯದಿಂದ ಹಾರಿಸುತ್ತಿವೆ... ಈಗ ನಮ್ಮ ಇಸ್ರೋ ಲಾಭಗಳಿಸುತ್ತಿದೆ... ಜ್ಞಾನವನ್ನು ಎಕ್ಸ್ ಪೋರ್ಟ್ ಮಾಡುತ್ತಿದೆ... ಇದಲ್ಲವೇ ಗರ್ವ ಪಡಬೇಕಾದ ಕ್ಷಣ.. ಬೀಗ ಬೇಕಾದ ಕ್ಷಣ... ಕೈ ತಿರುಗಿಸಿದ ದೇಶಗಳೇ ಇಂದು ಪಾಲುದಾರರಾಗಲು ಹಂಬಲಿಸುತ್ತಿವೆ, ಬಯಸುತ್ತಿವೆ, ಬಡಬಡಿಸುತ್ತಿವೆ... ಇರಲಿ ಏನಾದರೂ ಆಗಲಿ ಭಾರತದ ಬಾವುಟ ಚಂದ್ರನಲ್ಲಿ ಅದು ಯಾರೂ ಇಡದ ಹಾದಿಯಲ್ಲಿ , ಯಾರೂ ಮುಟ್ಟದ ಪ್ರದೇಶದಲ್ಲಿ... ಚಂದ್ರನ ದಕ್ಷಿಣ ಭಾಗ ಕರ್ರಗಿನ ಭಾಗ, ಅಲ್ಲಿ ವೈಚಿತ್ರ್ಯಗಳಿವೆ, ನಿಗೂಢತೆ ಇದೆ, ನಿಕ್ಷೇಪಗಳಿವೆ, ನೀರಿದೆ, ಏಲಿಯನ್ಸ್ಗಳಿವೆ... ಅಬ್ಬಬ್ಬಾ ಬಗೆದಷ್ಟು ದೊರೆಯುವ ರಹಸ್ಯಗಳಿವೆ. ಮುಖ್ಯವಾಗಿ ಹೀಲಿಯಂ ಹೇರಳವಾಗಿದೆ ಎಂಬ ಮಾತಿದೆ ಮತ್ತು ಭಾರತದ ವಿಕ್ರಮ ಹೆಜ್ಜೆ ಇಟ್ಟದ್ದು ಗಿನ್ನೆಸ್ ದಾಖಲೆ ಮೂಡಿಸಿದೆ. ಮತ್ತು ಎಂದು ಎಂದೆಂದಿಗೂ ನನ್ನ ದೇಶದ ಹೆಸರು ಮೊದಲ ನಂಬರಾಗಿ ಅಲ್ಲಿರುತ್ತದೆ ಎಂಬುದೇ ಸಂತಸದ ವಿಷಯ. ಮುಂದಿನ ಸಂಶೋಧನೆಗಳೇನೇ ಇರಲಿ ಮೊದಲ ಪ್ರೀತಿ, ಮೊದಲ ಚುಂಬನ, ಮೊದಲ ಮಗು ಎಷ್ಟು ಅಪ್ಯಾಯಮಾನವೋ ಹಾಗೆ ಚಂದ್ರನ ಮೊದಲ ನಡೆ ದಕ್ಷಿಣದಲ್ಲಿ ಊರಿದ್ದು ಮರೆಯದ ಕ್ಷಣ.
ಯಾಕೆ 140 ಕೋಟಿ ಜನರು ಹುಚ್ಚೆದ್ದು ಕುಣಿದಿದ್ದು ಅರ್ಥವಾಯಿತೇ? ಅನುಭವಿಸಿದ ಅಪಮಾನ, ಅಸಹ್ಯಗಳಿಗೆಲ್ಲ ನಮ್ಮ ವಿಜ್ಞಾನಿಗಳು ದಿಟ್ಟ ಉತ್ತರ ನೀಡಿದ್ದಾರಲ್ಲ, ನನ್ನ ದೇಶದ ಮಾನ ಕಾಯ್ದಿದ್ದಾರಲ್ಲ, ನನ್ನ ದೇಶದ ಬಾವುಟ ಎತ್ತರಕ್ಕೆ ಏರಿಸಿದ್ದಾರಲ್ಲ. ಎಲ್ಲರ ಎದೆ ತುಂಬಾ ಸಂತಸದಹೊನಲು ಹರಿದಿದೆ ಕೆಲವು ಹಳವಂಡಗಳನ್ನು ಹೊರತುಪಡಿಸಿ...!!
ಯಾವುದೇ ಒಂದು ಸಿನಿಮಾಕ್ಕೆ ಬೇಕಾಗುವ ಬಂಡವಾಳಕ್ಕಿಂತ ಕನಿಷ್ಠ ಖರ್ಚಿನಲ್ಲಿ ಠಠಡಿಛಿಟಿರ ನಿಯಮವನ್ನನುಸರಿಸಿ ತಯಾರಿಸಿದ ಚಂದ್ರಯಾನ 3 ಆಗಲಿ, ಮಂಗಳಯಾನವಾಗಲಿ ಇನ್ನು ಮುಂದಿನ ಸೂರ್ಯನೆಡೆಗಿನ ಆದಿತ್ಯ ಮತ್ತು ಶುಕ್ರಗ್ರಹದೆಡಗಿನ ಇಸ್ರೋದ ನಡೆ ನಿರಂತರವಾಗಿರಲಿ, ಸಂಶೋಧನೆಗಳಲ್ಲಿ ಮುಂಚೂಣಿಯಲ್ಲಿರಲಿ, ವಿಶ್ವಗುರುವಾಗಲಿ ಹಾಗೂ ನಾವೆಲ್ಲಾ ಹೆಮ್ಮೆಯಿಂದ ಬಿಗುವಂತಾಗಲಿ ಎಂದು ಹಾರೈಸುವೆ.
ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡ ರಾಣಿಯರ ಕುರಿತಾಗಿ ಬರೆಯುವುದನ್ನು ಬಿಟ್ಟು ಚಂದ್ರಯಾನ ಮೂರರ ಬಗ್ಗೆ ಬರೆಯುವಂತೆ ಮಾಡಿದ್ದು ನನ್ನ ದೇಶದ ಮೇಲಿನ ಅಭಿಮಾನ, ನನ್ನ ದೇಶದ ವಿಜ್ಞಾನಿಗಳ ಮೇಲಿನ ಅಭಿಮಾನ, ನನ್ನ ದೇಶದ ಬಾವುಟ ಹೊತ್ತ ಚಂದ್ರಯಾನ ಮೂರರ ಮೇಲಿನ ಅಭಿಮಾನ.ಹೀಗಾಗಿ ಈ ಲೇಖನ ವಿಜ್ಞಾನಿಗಳಿಗೆ ಅರ್ಿತ.....
- ದೀಪಿಕಾ ಚಾಟೆ
ಬೆಳಗಾವಿ
-*)=()=(*-