ಸಮಾಜದ ಕರಾಳಮುಖ ದರ್ಶನ : ‘ನೀಲು’ನ ಕಥೆ
ಹುಟ್ಟಿ ಎರಡು ವರ್ಷ ಆಗುವಷ್ಟರಲ್ಲಿ ‘ಹೆಣ್ಣು’ ಮಗು ಎಂಬ ಒಂದೇ ಒಂದು ಕಾರಣಕ್ಕಾಗಿ ಅವಳಪ್ಪನಿಗೆ ಅವಳು ಹೊರೆಯಾದಳು.
ಆ ಹುಡುಗೆಯ ಸೋದರತ್ತೆ ಅವಳನ್ನು ಸಾಕುತ್ತೇನೆ ಎಂದು ಮುಂದೆ ಬಂದಳು. ಅತ್ಯಾನ ಮನೆಯ ಚಾಕರಿ ಮಾಡುತ್ತಾ ನೀಲು ಬೆಳೆಯತೊಡಗಿದಳು. ನೀಲುಗೆ 12-13 ವರ್ಷಗಳಾಗುವಷ್ಟರಲ್ಲಿ ಅತ್ತ್ಯಾ ಸತ್ತು ಹೋದಳು. ನೀಲುನ ಅವ್ವ ಅವಳನ್ನು ಮನೆಗೆ ಕರೆದುಕೊಂಡು ಬಂದಳು. ಅವಳಿಗಿಂತ ಹದಿನಾಲ್ಕು ವರ್ಷ ದೊಡ್ಡವನಾದ ರುದ್ರ್ಪನೊಂದಿಗೆ ಅವಳ ಮದುವೆ ಮಾಡಿಸಿ ಅವಳ ಅಪ್ಪ ತನ್ನ ಹೊರೆ ಇಳಿಸಿಕೊಂಡ. ಮಗಳ ಬಾಳುವೆಯನ್ನು ನೆನೆದು ನೀಲುನ ಅವ್ವ ಆ ಮದುವೆಯನ್ನು ತಡೆಯುವಂತೆ ಗಂಡನೊಂದಿಗೆ ತಕರಾರು ತೆಗೆದಳು. ಪ್ರತಿಯಾಗಿ ಮೈಮುರಿ ಬಾಸುಂಡೆ ಮೂಡುವಂತೆ ಹೊಡೆಸಿಕೊಂಡಳು. ನೀಲುನ ಅವ್ವನಿಗೆಲ್ಲಿ ಧ್ವನಿಯಿತ್ತು? ಅವಳಿಗೆ ಧ್ವನಿಯೇ ಏಳದಂತಹ ವಾತಾವರಣದಲ್ಲೇ ಅವಳನ್ನು ಬೆಳೆಯಿಸಲಾಗಿತ್ತು. ಇದರಲ್ಲಿ ಅವಳದೇನು ತಪ್ಪು?
ಮದುವೆ ಎಂದರೇನೆಂದು ತಿಳಿಯುವ ಮೊದಲೇ, ಮದುವೆಯ ಬಗ್ಗೆ ಕನಸು ಕಾಣುವ ತಿಳುವಳಿಕೆಯೂ ಬರುವ ಮೊದಲೇ ನೀಲುಗೆ ನಾಲ್ಕು ಮಕ್ಕಳಾಗಿದ್ದವು. ಬಸಿರಾಗುವುದನ್ನು ತಡೆಯಬಹುದು ಎನ್ನುವಷ್ಟು ತಿಳುವಳಿಕೆ ಅವಳೀಗೀಗ ಬಂದಿತ್ತು, ಆದರೆ ಹೇಗೆ ಎನ್ನುವುದು ಇನ್ನೂ ಗೊತ್ತಿರಲಿಲ್ಲ. ಅಷ್ಟರಲ್ಲಿ ಅವಳು ಮತ್ತೆ ಬಸುರಿಯಾದಳು. ಈ ಸಲ ಗಂಡು ಹುಟ್ಟದಿದ್ದರೆ ನಿನ್ನನ್ನು ಮನೆಯಿಂದ ಹೊರಹಾಕುತ್ತೇವೆ ಎಂದು ಗಂಡ ಅತ್ತೆ ಬೆದರಿಸುತ್ತಿದ್ದರು. ಗಾಬರಿಯಾದ ನೀಲವ್ವ ಉಪವಾಸ ಮಾಡುತ್ತಾ ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತ ನಡೆದಳು. ತನ್ನಲ್ಲಿರುವುದು ಕೇವಲ ಎಕ್ಸ ಕ್ರೋಮೋಸೋಮು. ಗಂಡು ಹುಟ್ಟಲು ಬೇಕಾದ ವಾಯ್ ಕ್ರೋಮೋಸೋಮು ಕೇವಲ ಗಂಡಿನಲ್ಲಿ ಮಾತ್ರ ಇರುವಂಥದ್ದು ಎನ್ನುವ ತಿಳುವಳಿಕೆ ನೀಲವ್ವನಿಗೆ ಇರಲಿಲ್ಲ. ಗಂಡ ತನ್ನನ್ನು ಹೊರಹಾಕಿದರೆ ತಾನೆಲ್ಲಿ ಹೋಗಲಿ ಎಂದು ಹೆದರಿಕೊಂಡು ಅವಳು ಮತ್ತಿಷ್ಟು ತಗ್ಗಿ ಬಗ್ಗಿ ನಡೆಯತೊಡಗಿದಳು.
ಗಂಡೇನೋ ಹುಟ್ಟಿತು. ಸಂತಸದ ಭರದಲ್ಲಿ ಮತ್ತೂ ಒಂದು ಗಂಡು ಹುಟ್ಟಿತು. ಆದರೆ ಆರು ಮಕ್ಕಳು, ತಾಯಿ, ಹೆಂಡತಿ ಇಷ್ಟೊಂದು ದೊಡ್ಡ ಸಂಸಾರ ನಡೆಸಲು ಹೆದರಿದ ಗಂಡ ಒಂದು ದಿನ ರಾತ್ರೋ ರಾತ್ರಿ ಮನೆಬಿಟ್ಟು ಓಡಿಹೋದ. ‘ನನ್ನ ಮಗನನ್ನು ಓಡಿಸಿದ ಪಾಪಿ’ ಎಂದು ಹಿಡಿಶಾಪ ಹಾಕಿದಳು ಅತ್ತೆ. ಮುಂದೆ ಕೆಲವೇ ದಿನಗಳಲ್ಲಿ ಅತ್ತೆಯೂ ಮನೆಬಿಟ್ಟು ಒಂದು ಗುಂಠೇ ಜಮೀನಿದ್ದ ತನ್ನ ಹಳ್ಳಿಗೆ ಹೊರಟು ಹೋದಳು. ದೊಡ್ಡ ಶಹರದೂರಿನಲ್ಲಿ ಆರು ಮಕ್ಕಳೊಂದಿಗೆ ನಿರಕ್ಷರ ಕುಕ್ಷಿಯಾದ, ಇಪ್ಪತ್ತಾರರ ತುಂಬು ಹರೆಯದ ನೀಲವ್ವ ಉಳಿದಳು. ಅವಳನ್ನು ಹಡೆದ ತಂದೆ, ಮಾಡಿಕೊಂಡ ಗಂಡ ಯಾರೂ ಅವಳ ಸಹಾಯಕ್ಕೆ ಬರಲಿಲ್ಲ. ಅವಳಿಗೆ ಗೊತ್ತಿದ್ದದ್ದೇ ಕಸಮುಸುರೆ, ಅಡುಗೆ ಕೆಲಸ. ಅದನ್ನೇ ಕಂಡವರ ಮನೆಯಲ್ಲಿ ಮಾಡತೊಡಗಿದಳು. ಅವಳಮೇಲೆ ಕಣ್ಣು ಹಾಕುವ ಸಭ್ಯಸ್ಥ ಮನೆಯಜಮಾನರೆಲ್ಲ ಅವಳು ಎಡವಿದರೆ ಸಾಕು. ಅವಕಾಶದ ಸದುಪಯೋಗ ಮಾಡಿಕೊಳ್ಳಲು ಸನ್ನದ್ಧರಾಗಿ ಕುಳಿತಿದ್ದರು. ಕೆಲಸದಿಂದ ತೆಗೆದು ಹಾಕಲು ಯಜಮಾನಿತಿಯರು ಸಜ್ಜಾಗಿದ್ದರು.
ಅತ್ತ ಅವ್ವನ ಆಶ್ರಯ ಬೇಡಿ ಹೋದ ರುದ್ರ್ಪ ಅವ್ವನಿಗೆ ಹೊಲದ ಕೆಲಸದಲ್ಲಿ ಸಹಾಯ ಮಾಡುತ್ತ, ಅಡುಗೆಗೂ ಸ್ವಲ್ಪ ನೆರವು ನೀಡುತ್ತ ಅವ್ವನನ್ನು ಒಲಿಸಿ ಅಲ್ಲಿಯೇ ಇರತೊಡಗಿದ. ಮತ್ತೊಂದು ಮದುವೆಯನ್ನೂ ಮಾಡಿಕೊಂಡ. ಅವನಿಗೆ ಸಂಗಾತಿ ದೊರೆತಳು. ಅವಳಿಗೆ ದುಡಿಯಲು ಒಂದು ಆಳು ದೊರಕಿದಳು. ಹೆಂಡತಿ ಇರಲಿಕ್ಕೂ ಬೇರೆ ಮದುವೆ ಯಾಕೆ ಮಾಡಿಕೊಂಡೆ ಎಂದು ಅವನನ್ನು ಈ ಸಮಾಜದಲ್ಲಿ ಯಾರೂ ಕೇಳಲಿಲ್ಲ. ಕೇಳಿದರೂ ಮೊದಲ ಹೆಂಡತಿಗೆ ಹುಚ್ಚು ಹಿಡಿದಿತ್ತು ಎಂದು ಇವರೇ ಸುದ್ದಿಯನ್ನು ಬಿಟ್ಟರು.
ಸುದ್ದಿ ತಿಳಿದ ನೀಲವ್ವ ಹೋಗಿ ಜಗಳಾಡಿದಳು, ಬಡಿಸಿಕೊಂಡು ಬಂದಳು. ರೊಚ್ಚಿಗೆದ್ದು ತಾನೂ ಇನ್ನೊಂದು ಮದುವೆಯಾಗಲು ನೋಡಿದಳು. ಆದರೆ ಆರು ಮಕ್ಕಳ ತಾಯಿಯನ್ನು ಯಾರು ಮದುವೆಯಾಗುವವರು?
ಆರು ಜನರ ಭಾರವನ್ನು ಕಸಮುಸುರೆಯ, ಅಡುಗೆಯ ನೀಲವ್ವ ಎಷ್ಟುದಿನ ಹೊತ್ತಾಳು? ಅವಳೂ ಅದೇ ವಿಷಚಕ್ರದಲ್ಲಿ ಬಿದ್ದಳು. ತನ್ನ ಹೆಣ್ಣುಮಕ್ಕಳನ್ನೆಲ್ಲ ಬಾಲ್ಯದಲ್ಲೇ ಮದುವೆಮಾಡಿ ಆಡುವ ಓದುವ ವಯಸ್ಸಿನಲ್ಲಿ ಅವರು ತಾಯಂದಿರಾಗುವಂತೆ ಮಾಡಿದಳು, ಗಂಡು ಮಕ್ಕಳಂತೂ ಗಂಡುಗಳು. ಅವರು ಉಂಡಾಡಿ ಗುಂಡರಾದರು. ಮನೆಯ ಜವಾಬ್ದಾರಿಯನ್ನಂತೂ ಅವರು ತೆಗೆದುಕೊಳ್ಳಲೇ ಇಲ್ಲ. ಅವ್ವ ಹೆಂಗಸು ಅವಳಿಗೇನು ತಿಳಿಯುತ್ತದೆ ಎನ್ನುವ ಅಸಡ್ಡೆ ಬೇರೆ. ಅವರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ. ಬಂದರೂ ಇವರೂ ತಮ್ಮ ಅಪ್ಪನಂತೆ ಸಂಸಾರವನ್ನು ಅರ್ಧಕ್ಕೇ ಬಿಟ್ಟು ಓಡಿಹೋದರೆ ಎಂದು ನೀಲವ್ವ ಹೆದರುತ್ತಿದ್ದಳು. ತಾಯಿಯ ಭಾವನೆಯನ್ನು ತುಸುವೂ ಅರ್ಥಮಾಡಿಕೊಳ್ಳದ ಅವರಿಬ್ಬರೂ ತಾವು ಚೂರು ಚಾರುಗಳಿಸಿದರೂ ಇವಳ ಕೈಗೆ ಏನೂ ಕೊಡುತ್ತಿರಲಿಲ್ಲ. ಹೆಣ್ಣು ಮಕ್ಕಳೇ ಆಗೀಗ ಬಂದು ಹೋಗುತ್ತಿದ್ದರೂ ಅವರಿಗೂ ಅಂತಹ ಸ್ವಾತಂತ್ರ್ಯವಿರಲಿಲ್ಲ. ಅಲ್ಲದೆ ತವರಿಗೆ ಹೋಗುವದು ಎಂದರೆ ಏನಾದರೂ ತೆಗೆದುಕೊಂಡು ಬರಲಿ ಎಂದು ಗಂಡ ಹಾಗೂ ಅವನ ಮನೆಯವರು ಅಪೇಕ್ಷಿಸುತ್ತಿದ್ದುದರಿಂದ ಹೆಣ್ಣು ಮಕ್ಕಳು ತವರಿಗೆ ಬರಲು ಹಿಂದೇಟು ಹಾಕುತ್ತಿದ್ದರು.
ಸದ್ಯ ಐವತ್ತು ವರ್ಷದ ನೀಲವ್ವ ಲೈಂಗಿಕ ತೃಪ್ತಿಯನ್ನು ಎಂದೂ ಪಡೆಯದೇ, ಪಡೆಯುವ ಆಸೆಯೂ ಇಲ್ಲದೇ, ಗಂಡ ಬಿಟ್ಟವಳು ಎಂದು ಈ ಸಮಾಜದ ನಿಂದನೆಗೊಳಗಾಗುತ್ತ, ತಾನು ಕೆಲಸಮಾಡುವ ಮನೆಯವರು ಕಳೆಯುವ ಈ ರಂಗುರಂಗಿನ ಜಗತ್ತನ್ನು ನಿತ್ಯ ನೋಡುತ್ತಿದ್ದರೂ ಅಂಥ ಯಾವ ಆಸೆಯನ್ನೂ ಇಟ್ಟುಕೊಳ್ಳದೇ ಇನ್ನುಳಿದ 20,30,40 ವರ್ಷಗಳ ಜೀವನವನ್ನೂ ’ನಾಲ್ಕು ಜನ ಏನಂದಾರು’ ಎಂಬ ಹೆದರಿಕೆಯಲ್ಲೇ ಸವೆಸುತ್ತಿದ್ದಾಳೆ.
ಅವಳನ್ನು ಈ ಸ್ಥಿತಿಗೆ ನೂಕಿದ ಅವಳ ಅಪ್ಪ, ಗಂಡ, ಅತ್ತೆ, ಗಂಡು ಮಕ್ಕಳು ಇವರೆಲ್ಲ ಹಾಯಾಗಿದ್ದಾರೆ. ಮೂಕ ಕುರಿಯಂತೆ ಬಂದದ್ದನ್ನೆಲ್ಲ ಸಹಿಸುತ್ತ, ದೈಹಿಕ ಮಾನಸಿಕ ಆಸೆಗಳನ್ನೆಲ್ಲ ಅದುಮಿಟ್ಟು ದಿನ ನೂಕುತ್ತಿರುವ ನೀಲವ್ವ ನಿತ್ಯ ನರಕದ ಶಿಕ್ಷೆ ಅನುಭವಿಸುತ್ತಿದ್ದಾಳೆ. ಇವಳ ಸಂಕಟವನ್ನು ನೋಡಲಾಗದ ತಾಯಿಯೂ ಶಿಕ್ಷೆ ಅನುಭವಿಸುತ್ತಿದ್ದಾಳೆ. ತನ್ನದೇನೆ ಇರಲಿ ನಮ್ಮ ಜೀವನ್ನೇಕೆ ಹಾಳು ಮಾಡಬೇಕು ಎಂದು ಹೆಣ್ಣು ಮಕ್ಕಳೂ ಕೆಲ ಕೆಟ್ಟ ಗಳಿಗೆಯಲ್ಲಿ ಒಳಗಿಂದೊಳಗೇ ನೀಲವ್ವನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮತ್ತೆ ಇಂಥದೇ ಸಂಸಾರವನ್ನು ಸೃಷ್ಟಿಸಲಿರುವ ನೀಲವ್ವನ ಗಂಡುಮಕ್ಕಳು ತಮ್ಮ ನಿರಾಶಮಯ ಜೀವನಕ್ಕೆ ಕಣ್ಣೆದುರಿಗೆ ಕಾಣುವ ಅವ್ವನೇ ಕಾರಣ. ಎಂದು ಬಲವಾಗಿ ನಂಬಿದ್ದಾರೆ. ಕಣ್ಮರೆಯಾಗಿರುವ ಅಪ್ಪನ ನೆನಪೇ ಅವರಿಗೆ ಆಗುವುದಿಲ್ಲ.
ನೀಲವ್ವನ ಅಪ್ಪ ಎನ್ನಿಸಿಕೊಂಡ ಗಂಡು ತಪ್ಪು ಮಾಡಿದವ. ಹಡೆದವನು ಅವನು. ಇದರಲ್ಲಿ ನೀಲವ್ವನದೇನು ತಪ್ಪು? ಆದರೆ ಅವನು ನೀಲವ್ವನಿಗೆ ಶಿಕ್ಷೆ ವಿಧಿಸಿದ. ಆದರೂ ಸಮಾಜ ಅವನನ್ನು ಬಿಟ್ಟು ನೀಲವ್ವನನ್ನೇ ಬಲಿಪಶುವನ್ನಾಗಿ ಮಾಡಿದೆ.
ಹೆಣ್ಣು ಹುಟ್ಟಿದರೂ ಅವಳಪ್ಪ ಅವಳಿಗೂ ಬಾಳುವೆ ನೀಡಿದ್ದರೆ , ಕಸ-ಮುಸುರೆಯನ್ನೇ ಮಾಡುವದಿದ್ದರೆ ಮದುವೆಯಾಗಿ ಒದ್ದಾಡುವುದರ ಬದಲು ಸ್ವತಂತ್ರವಾಗಿ ಗಳಿಸಿಕೊಂಡಿರಬಹುದಾಗಿತ್ತಲ್ಲ ಎನ್ನುವಷ್ಟು ತಿಳುವಳಿಕೆ ನೀಲುಗೆ ಇದ್ದರೆ, ಗಂಡುಹುಟ್ಟುವದು ಹುಟ್ಟದಿರುವುದು ಯಾರ ಕೈಯಲ್ಲೂ ಇಲ್ಲ ಹೆಣ್ಣಿನ ಕೈಯಲ್ಲಂತೂ ಸುತರಾಂ ಇಲ್ಲ ಎಂಬ ತಿಳುವಳಿಕೆ ಸಂಬಂಧ ಪಟ್ಟ ಎಲ್ಲರಿಗೂ ಇದ್ದರೆ, ಗಂಡು ಹುಟ್ಟಿ ವಂಶದ ಕೀರ್ತಿಪತಾಕೆಯನ್ನು ಹಾರಿಸಲು ತನ್ನದೇನು ಅಂಥ ಮಹಾನ್ ವಂಶ ಎಂಬ ತಿಳುವಳಿಕೆ ಆ ಅಪ್ಪನಿಗಿದ್ದರೆ? ತನ್ನ ವಂಶದ ಕೀರ್ತಿಪತಾಕೆಯನ್ನುಹಾರಿಸಲು ಬೇಕಾದಂತಹ ಗಂಡು ಹುಟ್ಟಿದ ಮೇಲೆಯೂ ಮತ್ತೇಕೆ ಹೆದರಿ ಓಡಿಹೋದೆ ಎಂದು ರುದ್ರ್ಪನನ್ನು ಹಿಡಿದು ಯಾರಾದರೂ ಕೇಳಿದ್ದರೆ. ರೇ..ರೇ..,ರೇ,.. ಸಮಾಜದ ಎಲ್ಲ ನಿಯಮಗಳನ್ನು ಪಾಲಿಸಿ, ಅದಕ್ಕೆಲ್ಲೂ ಕುಂದುಬರದಂತೆ ನಡೆದುಕೊಂಡರೂ ಅದೇ ಸಮಾಜದಿಂದ ಶಿಕ್ಷೆ ಅನುಭವಿಸುತ್ತಿರುವ ನೀಲವ್ವನನ್ನು ಉಳಿಸಲು ಈ ಸಮಾಜ ಸಹಾಯಕ್ಕೆ ಬಂದಿತೇ?
- ಭಾರತಿ ತೊರಗಲ್ಲ
9481521150
- * * * -