ಶ್ರೀಮತಿ ಪಾರ್ವತಿ ಎಸ್ ಬೂದೂರ ಅವರ ಕವನ ಸಂಕಲನ ‘ನನ್ನೊಳಗಿನ ನಾನು’
ಕಾವ್ಯ ಎಂದೆಂದಿಗೂ ಮನಸ್ಸನ್ನು ಆಕರ್ಷಿಸುವ ಸಾಹಿತ್ಯ ಪ್ರಕಾರ. ತನ್ನ ಮನದಾಳದ ಭಾವಗಳನ್ನು ಅಭಿವ್ಯಕ್ತಿಸಲು ಪ್ರತಿಯೊಬ್ಬ ಕವಿ ಬಳಸುವ ಮೊದಲ ಮಾಧ್ಯಮವೇ ಕವಿತೆಯಾಗಿದೆ. ಸಾಹಿತ್ಯದ ಇತಿಹಾಸದ ಕಾಲಘಟ್ಟದಿಂದಲೂ ಮಹಿಳೆ ತನ್ನಮನದಾಳದ ಆಲೋಚನೆಗಳನ್ನು ಕವಿತೆಯ ಮಾಧ್ಯಮದಲ್ಲಿ ವ್ಯಕ್ತ ಮಾಡುತ್ತ ಬಂದಿದ್ದಾಳೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿಯಂತೂ ಮಹಿಳಾ ಕಾವ್ಯ ತುಂಬ ಸಮೃದ್ಧಿಯಾಗಿ ಬೆಳೆದು ಬಂದಿದೆ.
ಕೆಂಭಾವಿ ಕವಯಿತ್ರಿ ಶ್ರೀಮತಿ ಪಾರ್ವತಿ ಎಸ್. ಬೂದುರು ಅವರು ತಮ್ಮ ಮೊದಲ ಕವನ ಸಂಕಲನ ‘ನನ್ನೊಳಗಿನ ನಾನು’ ಪ್ರಕಟಿಸಿದ್ದಾರೆ. ಇದಕ್ಕೆ ಹಿರಿಯ ಕವಿ ಪತ್ರಕರ್ತರಾದ ಶ್ರೀ ಮಹಿಪಾಲರೆಡ್ಡಿ ಮುನ್ನೂರ್ ಅವರು ‘ಪುಟ್ಟ ಊರಿನ ಗಟ್ಟಿ ಬರಹಗಾರ್ತಿ’ ಎಂದು ಬಣ್ಣಿಸುವ ಮೂಲಕ ಸಂಕಲನಕ್ಕೆ ಮುನ್ನುಡಿ ಬರೆದು ಹಾರೈಸಿದ್ದಾರೆ. ವಿಭಿನ್ನವಾದ ವಿಷಯ ವಸ್ತು ಗಳನ್ನೊಳಗೊಂಡ 82 ಕವಿತೆಗಳು ಇಲ್ಲಿವೆ.
ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವಂತೆ ಕಾವ್ಯ ಕ್ಷೇತ್ರದಲ್ಲಿಯೂ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ಕೆಂಭಾವಿಯಂತಹ ಊರಿನಲ್ಲಿ ಸದ್ಗೃಹಿಣಿಯಾಗಿ ಕುಟುಂಬ ಕಟ್ಟುತ್ತಿರುವ ಶ್ರೀಮತಿ ಪಾರ್ವತಿ ಯವರಂಥವರು ಕಾವ್ಯ ಕ್ಷೇತ್ರಕ್ಕೆ ಬಂದಿರುವದು ಅಪರೂಪದ ಸಂಗತಿಯಾಗಿದೆ. ಕವಿಯತ್ರಿ ಹೆಣ್ಣಿನ ವ್ಯಕ್ತಿತ್ವದ ಬಗ್ಗೆ ಬರೆದ ಕವಿತೆಗಳು ಅಭಿಮಾನ ಮೂಡಿಸುತ್ತವೆ. ಮಹಿಳೆ ಹೆಸರಿನ ಕವಿತೆಯೆ ಇದ್ದು ಅವಳ ವ್ಯಕ್ತಿತ್ವವನ್ನು ಕಟ್ಟಿಕೊಡುವ ಯತ್ನ ಮಾಡಿದೆ.
ಪ್ರತಿಯೊಬ್ಬರಿಗೂ ತನ್ನದೇ ಆದ ಭಾವನೆಗಳಿರುತ್ತವೆ ಅವನ್ನು ಮುಕ್ತವಾಗಿ ವ್ಯಕ್ತ ಮಾಡಲು ಪ್ರಯತ್ನಿಸಬೇಕಷ್ಟೇ. ಮಹಿಳೆಗೆ ವಿಶಿಷ್ಟವಾದ ಬಾವನೆ ಬಹಳ ಮಹತ್ವದವು. ಇಲ್ಲಿ ಗ್ರಾಮೀಣ ಮಹಿಳೆ ಯೊಬ್ಬಳ ಮನದಾಳದ ಮಾತುಗಳು ಕವಿತೆಯಾಗಿವೆ.
ಇವು ಭಾವಗೀತೆಯಂತಹ ಸರಳವಾದ ಕವಿತೆಗಳು.ಮೊದಲ ನೋಟಕ್ಕೆ ಮೆಚ್ಚಿಕೆಯಾಗುವ ಅಂಶವೆಂದರೆ ಕವಿಯತ್ರಿಪದ ಕಟ್ಟಲು ಎಲ್ಲೂ ತೊಂದರೆ ಅನುಞಬವಿದುವ್ಇಲಗಲ ಅವರ ಕೈಗೆ ಪದಗಳು ಅನಾಯಾಸ ದೊರಕುತ್ತವೆ. ಕವಿತೆ ತನ್ನಿಂದ ತಾನೇ ಮುಂದುವರಿಯುತ್ತದೆ ಬಹಳಷ್ಟು ಜನರಿಗೆ ಈ ಕೌಶಲ್ಯ ಸಿದ್ದಿಸದು.
ಇಲ್ಲಿ ಬಹಳ ಚಂದದ 84 ಕವಿತೆಗಳು ಇವೆ. ತನಗೆ ದೊರಕಿದ ಪ್ರತಿ ವಸ್ತುವನ್ನು ಕವಯಿತ್ರಿ ಕವಿತೆ ಯಾಗಿಸಿದ್ದಾರೆ. ಇಲ್ಲಿನ ಕವಿತೆಗಳು ಬದುಕಿನ ಪ್ರತಿಯೊಂದು ವಸ್ತುವನ್ನು ಬಳಸಿಕೊಂಡಿದ್ದಾರೆ. ಇಲ್ಲಿ ದೇಶಭಿಮಾನ, ನಮ್ಮ ಮೂಲ ಸಂಸ್ಕೃತಿ ಹೆಣ್ಣಿನ ಮಹತ್ವ ಹೀಗೆ ಹಲವು ವಿಷಯಗಳು ಕವಿತೆಯ ವಸ್ತುವಾಗಿವೆ. ಮೂಲ ಸಂಸ್ಕೃತಿಯನ್ನು ಚಿತ್ರಿಸುತ್ತ ಅದು ನಮ್ಮ ಗ್ರಾಮೀಣ ಸಂಸ್ಕೃತಿ ಯಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇಂದು ಐಷಾರಾಮಿ ಜೀವನವಿಧಾನವನ್ನು ರೂಢಿಸಿಕೊಂಡಿರುವ ನಾವು ಶ್ರಮ ಸಂಸ್ಕೃತಿಯನ್ನು ಮರೆತಿದ್ದೇವೆ ಎನ್ನುವದನ್ನು ವಿರಿಸಿದೆ. ‘ನಮ್ಮ ಸಂಸ್ಕೃತಿ’ ಎಂಬ ಹೆಸರಿನ
ಕವಿತೆ ನಸು ಬೆಳಗಾಗಲು ನನ್ನಜ್ಜಿ
ಬೀಸಲು ಶುರು ಮಾಡಲು ಸಜ್ಜಿ
ಕಲ್ಲಿನ ಗೂಟವ ತಿರುಗಿಸಿ
ರವೆ ಹಿಟ್ಟುಗಳ ತಯಾರಿಸಿ
ಇದು ನಮ್ಮ ಹಿಂದಿನ ಜೀವನ. ಆದರೆ ಇಂದು ನಮ್ಮ ಜೀವನ ಯಂತ್ರಗಳಿಗೆ ಎಲ್ಲವನ್ನು ಕೊಟ್ಟು ಶ್ರಮವನ್ನೇ ಮರೆತಿದ್ದೇವೆ ಎನ್ನುವದನ್ನು ಕವಿತೆ ಹೇಳುತ್ತದೆ. ತಮ್ಮ ಹಳೆಯ ನೆನಪುಗಳನ್ನು ತುಂಬ ಅಭಿಮಾನದಿಂದ ನೆನಯುವ ಕವಯಿತ್ರಿ ಅವು ಬಂಗಾರದ ದಿನಗಳು ಎಂದು ಕರೆಯುವದು ಸರಿಯಾದದ್ದೇ ಆಗಿದೆ. ಕವಿಯತ್ರಿ
ಕಳಚಲಿ ವಿಕೃತ ಮನಸ್ಸುಗಳ ಪೊರೆ
ಬೀಳಲಿ ವಿನಾಶದ ಹಸಿವುಗಳಿಗೆ ತೆರೆ
ಹಬ್ಬಿದರೆ ಸದೃಡ ಸಂಸ್ಕೊತಿಯ ಮೊರೆ
ನೀಗುವುದು ಎಲ್ಲಾ ಬಗೆ ಹಸಿವಿನ ಕರೆ
ಎನ್ನುತ್ತಾರೆ
ತಮ್ಮ ತಮ್ಮ ಮಕ್ಕಳನ್ನು ಅಭಿಮಾನದಿಂದ ಬಣ್ಣಿಸಿಲಾರದ ಕವಿಗಳು ಇಲ್ಲ. ಈ ಮಾತಿಗೆ ಶ್ರೀಮತಿ ಪಾರ್ವತಿಯವರು ಹೊರತಲ್ಲ. ತೊಟ್ಟಿಲ ಕಂದನನ್ನು ಮೃದುಲ ಗಿಳಿಯೆ, ಎನ್ನುವದು ಅವನ ತಪ್ಪು ಹೆಜ್ಜೆಗಳ ಸೊಬಗನ್ನು ಬಣ್ಣಿಸುವದು ಇವೆಲ್ಲ ಸೊಗಸಾಗಿವೆ. ಹೆತ್ತೊಡಲು ಕವಿತೆ ಕೂಡ ಇದೇ ವಸ್ತುವನ್ನು ಹೊಂದಿದೆ.
ಅಕ್ಕರೆಯ ಮಗುವೆ
ಸಕ್ಕರೆಯ ನಗುವೆ
ಹೆತ್ತೊಡಲಿನ ವಜ್ರದ ಉಂಗುರವೇ
ಎನ್ನುವ ಸಾಲುಗಳಲ್ಲಿ ವಾತ್ಸಲ್ಯವೇ ತುಂಬಿದೆ.
ಕವನ ಸಂಕಲನದ ಶೀರ್ಷಿಕೆಯ ಕವಿತೆಯನ್ನೇ ನೋಡಿ. ಬದುಕಿನ ಬಗೆಗೆ ಅಷ್ಟೇನು ಮಹಾತ್ವಾ ಕಾಂಕ್ಷೆ ಇಲ್ಲದೆ ಅದನ್ನು ಸ್ವೀಕರಿಸಬೇಕು ಎನ್ನುವ ಮಧ್ಯಮ ಬದುಕಿನ ಮನೋಭಾವವೇ ಎದ್ದು ಕಾಣುತ್ತದೆ. ಇಲ್ಲಿ ಅನುಭಾವಿಕ ಎತ್ತರವನ್ನು ಕವಿಯತ್ರಿ ಮುಟ್ಟಿದ್ದಾರೆ ಎಂದು ಮುನ್ನುಡಿಕಾರರು ಗಮನಿಸಿದ್ದಾರೆ.
ತುಂಬ ಸಮಕಾಲಿನ ವಸ್ತುಗಳನ್ನು ಕುರಿತು ಇವರ ಕವಿತೆ ಧ್ಯಾನಿಸುವ ರೀತಿ ಖುಷಿ ಕಡುತ್ತದೆ ಉದಾಹರಣೆಗೆ ಮೊಬೈಲ್ ಎನ್ನು ವಿಚಿತ್ರ ವಸ್ತು ಕೈಗೆ ದೊರೆತ ಮೇಲೆ ಆಧುನಿಕರ ಜಗತ್ತು ಬೇರೆಯೆ ಆಗಿದೆ ಕಲಿತವರು ಹೋಗಲಿ, ಕಲಿಯವದವರು, ವೃದ್ಧರು, ಮಕ್ಕಖು ಅದರ ಹಿಡಿತದಿಂದ ಪಾರಾಗಿಲ್ಲ ಇದನ್ನು ಬಳಸುವದರ ಬಗ್ಗೆ ಒಳತಾದ ರೀತಿಯಲ್ಕಿ ಉಪಯೋಗಿಸುವದರ ಬಗ್ಗೆ ಯಾರದೂ ತಕರಾರಿಲ್ಲ ಆದರೆ ಅದು ಸಂಬಂಧಗಳನ್ನು ಕೆಡಿಸುವ, ಮನೆಮನಗಳನ್ನು ಮುರಿಯುವ ಕಾರ್ಯವನ್ನುಮಾಡಲು ಅದು ಉಪಯುಕ್ತ ವಾಗಿರುವದನ್ನು ಕವಯಿತ್ರಿ ವಿಷಾದದಿಂದಲೇ ದಾಖಲಿಸುತ್ತಾರೆ. ಈಗಲೇ ಒಂದು ನಿಯಮ ವನ್ನು ಮಾಡದೇ ಹೋದರೆ ನಮ್ಮಯುವ ಜನಾಂಗ ನಾಶವಾಗುವದು ಖಚಿತ ಎನ್ನುವದು ಅವರ ಸ್ಪಷ್ಟ ವಿಚಾರವಾಗಿದೆ. ಹಾಗೆಯೇ ಮುಖಪುಟ ಎಂಬುದು ದೊರೆತ ಮೇಲೆ ಜಗತ್ತಿನ ಬೇರೆಬೇರೆ ಬರಹಗಾರರು ಹೇಗೆ ತಮ್ಮ ಕವಿತೆಗಳನ್ನು ಓದುವರೋ ಹಾಗೆಯೇ ಸಮಾಧನವನ್ನು ಕೊಡುತ್ತಾರೆ ಎನ್ನುತ್ತಾರೆ. ಅದರ ನೆಗೆಟಿವ್ ಅಂಶಗಳ ಬಗ್ಗೆ ಅವರು ಗಮನ ಕೊಡುವದಿಲ್ಲ.
ಇಲ್ಲಿನ ಸಾಮಾಜಿಕ ಕವಿತೆಗಳು ಮುಖ್ಯ ಎನ್ನಿಸುತ್ತವೆ. ಮನುಜ ಮತದ ನಡುವೆ ದ್ವೇಷ ಅಸೂಯೆ ಇಲ್ಲವಾಗಲಿ ಎನ್ನುವ ಕವಿಯತ್ರಿ “ಹಬ್ಬಿ ತಬ್ಬಲಿ ನಾಡಭಕ್ತಿ” ಎನ್ನುತ್ತಾರೆ. ಅವರ ಸಾತ್ವಿಕ ರೋಷ ಮಹಿಳಯನ್ನು ಹೀನಾಯವಾಗಿ ಕಾಣುವವರ ವಿರುದ್ಧ ಇದೆ ಹಾಗೆ ನೋಡಿ ಸಂಕಲನದ ತುಂಬ ಮಹಿಳ ಅಸ್ಮಿತೆ ತುಸು ಢಳಾಗಿಯೆ ಕಾಣಿಸುತ್ತದೆ ಅದು ಅನಪೇಕ್ಷಣೀಯವೇನೂ ಅಲ್ಲ. ಅವರ ಅಕ್ರೋಸ ಎಷ್ಟು ಗಾಢವಾಗಿದೆ ಎಂದರೆ
ದೇವನೊಬ್ಬನೇ ನಿರ್ಮಿಸಿದನೇ ಈ ಜಗ
ದೆವತೆಯರು ಇರಲಿಲ್ಲವೇ ಯುಗ ಯುಗ
ಮಂದಿರಕೆ ನಿಷೇದವಂತೆ ಮಹಿಳೆಯಾದ ಕಾರಣ
ನವಮಾಸ ಉದರದಿ ಹೊರಳಾಡಿದ ಕಣ
ಮಹಿಳೆಯಾದ ಕಾರಣ ಆಕೆಯನ್ನು ದೇವಾಲಯದ ಒಳಗೆ ಬಿಡಲಾರದ್ದು ಕವಿಯತ್ರಿಗೆ ಸಿಟ್ಟು ತರಿಸಿದೆ. ಹೆಣ್ಣು ಎಂಬ ಕಾರಣಕ್ಕೆ ದೇವಾಲಯ ಪ್ರವೇಶಕ್ಕೆ ನಿರಾಕರಿಸುವ ಗಂಡಸರು ತಾಯಿಯ ಉದರದಲ್ಲಿ ಜನಿಸಿಲ್ಲವೇ ಎಂದು ಪ್ರಶ್ನಿಸುವ ಅವರ ಧ್ವನಿ ಸರಿಯಾದದ್ದೇ ಆಗಿದೆ.
ಪ್ರೀತಿ ಇಲ್ಲದ ಕಾವ್ಯ ಇರಲು ಸಾಧ್ಯವೇ? ಪ್ರೀತಿಯ ರಮ್ಯ ಚಿತ್ರಗಳನ್ನು ನೀಡಲೂ ಕವಿಯತ್ರಿ ಹಿದೆ ಸರಿಯುವದಿಲ್ಲ. ಪ್ರೀತಿಯಿಲ್ಲದಮೇಲೆ ಹೂವು ಅರಳೀತು ಹೇಗೆ ಎಂದು ಕೇಳುವ ಜಗತ್ತಿನ ಎಲ್ಲ; ಎಡೆ ಪ್ರೀತಿಯನ್ನು ಕಾಣು ತ್ತಾನೆ. ಮದುವೆಯ ನಂತರದ ಗಂಡ ಹೆಂಡಿರ ಪವಿತ್ರ ಪ್ರೀತಿಯೂ ಇಲ್ಲಿ ಹಾಡಾಗಿದೆ. ಕವಯಿತ್ರಿ ತುಂಬ ರಮ್ಯವಾಗಿ
ರವಿ ಶಶಿಯರು ನಾವಿಬ್ಬರೇ
ಮಿಂದೇಳುತ ಸುನೀಲ ಬಾನ
ಎದೆ ನೆಲದಿ ಖುಷಿಯುಬ್ಬರ
ಸರಿದೂಗಿದೆ ಒಳೆ ವೇದನ
ಎಂದು ತಮ್ಮಿಬ್ಬರ ಒಲವ ಬಗ್ಗೆ ಕವಿತೆ ಕಟ್ಟುತ್ತಾರೆ.ಈ ಪ್ರೀತಿಯ ಪಲಕುಗಳು ಸಂಕಲನದಲ್ಲಿ ಅಲ್ಲಲ್ಲಿ ಜಿನುಗುತ್ತವೆ.
ಇವು ತುಂಬ ಸಹಜವಾದ ಸರಳವಾದ ರಚನೆಗಳು, ಆದರೆ ಸರಳವಾದ ರಚನೆಗಳೆಲ್ಲ ಕವಿತೆಗಳಾಗಿ ಯಶಸ್ವಿಯಾಗುತ್ತವೆ ಎನ್ನಲು ಬರುವಂತಿಲ್ಲ. ಸಹವಾಸ ಎನ್ನುವ ಕವಿತೆಯನ್ನು ನೋಡಿದಾಗ
ಬೀಡಿ ಸಿಗರೇಟ್ ಸಹವಾಸ
ಉಸಿರಾಟಕೆ ಕೊಡುತಿದೆ ತ್ರಾಸ
ವಿವಿಧ ಖಾಯಿಲೆಗಳಿಗೆ ಆವಾಸ
ಮಡದಿ ಮಕ್ಕಳಿಗೆ ಉಪವಾಸ
ಹೀಗೆ ಪ್ರಾಸಬದ್ಧವಾಗಿ ಕವಿತೆಯನ್ನೇನೋ ಬರೆಯುತ್ತಾರೆ. ಆದರೆ ಹೀಗೆ ಪ್ರಾಸಬದ್ಧವಾಗಿ ಕವಿ ಕವಿತೆಯನ್ನು ಬರೆಯಬಹುದು ಆದರೆ ಅದು ಶ್ರೇಷ್ಠ ಕಾವ್ಯವಾಗುವದು ಕಷ್ಟ ಎನ್ನುವದನ್ನು ಮೊದಲ ಕವಿ ಅರಿಯಬೇಕು. ಕವಿತೆಯ ನಿರೂಪಣೆಯ ಹಾಗೆ ಎಲ್ಲ ವಿವರಿಸುತ್ತ ನಡೆದರೆ ಅದು ವಾ ಚ್ಯವಾಗುತ್ತದೆ. ಅಂತಹ ಅಪಾಯಕ್ಕೊಳಗಾದ ಎಷ್ಟೋ ರಚನೆಗಳಿ ಇಲ್ಲಿವೆ.
ಆದರೆ ಪರಿಙದ್ಮಖ ದಂತಹ ಕವಿತೆಗಳು ಅವರ ಕಾವ್ಯಶಕ್ತಿಗೆ ನಿದರ್ಶನ ವಾಗಿವೆ ಪದ ದುಂದು ವೆಚ್ಚ ಮಾಡದೇ
ಆಂತರ್ಯವ ಬಗೆದು
ಇಣುಕು ನನ್ನೆದೆಯಲಿ
ಅಮಿತದಿ ಮಿನುಗೋ
ನಕ್ಷತ್ರವೇ ನೀ
ಎಂದು ತುಂಬ ಸಾಂಕೇತಿಕವಾಗಿ ಬರೆದ ಕವಿತೆಗಳೂ ಇರುವದು ಕವಿಯ ಅಗ್ಗಳಿಕೆಯಾಗಿದೆ.
ಶ್ರೀಮತಿಪಾರ್ವತಿ ಎಸ್ ಬೂದೂರ ಅವರು ಇನ್ನೂ ಸಾಗಬೇಕಾದ ದಾರಿ ಬಹಳಷ್ಟಿದೆ. ಇದು ಒಂದು ಸಂಕಲನದಲ್ಲಿ ಮುಗಿಯುವ ಮಾತಲ್ಲ, ಅವರ ಕವಿಯ ಮಾತು ಓದಿದಾಗ ಅವರಲ್ಲಿ ಇನ್ನೂ ಕಲಿಯುವ ಕಾವ್ಯದ ದಾರಿಯಲ್ಲಿ ಬಹುದೂರ ಸಾಗಬೇಕೆನ್ನುವ ಆಸಕ್ತಿ ಇರುವದು ತುಂಬ ಸಂತೋಷದ ಸಂಗತಿ. ಅವರಿಂದ ಇನ್ನೂ ಹತ್ತಾರು ಸಂಕಲನ ಬರಲಿ ಎಂದು ನಾನು ಹಾರೈಸುತ್ತೇನೆ.
- ಡಾ.ವೈ.ಎಂ.ಯಾಕೊಳ್ಳಿ, ಸವದತ್ತಿ
ಮೊ. 9731970857
- * * * -