ಕೆಆರ್ಸಿಯು ಸಿಂಡಿಕೇಟ್ ಸದಸ್ಯರಾಗಿ ಎ.ಎಸ್. ಪಾಟೀಲ ನೇಮಕ
ವಿಜಯಪುರ 1: ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಕೆಆರ್ಸಿಯು) ಸಿಂಡಿಕೇಟ್ ಸದಸ್ಯರಾಗಿ ಎ.ಎಸ್. ಪಾಟೀಲ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಎ.ಎಸ್. ಪಾಟೀಲ, ಕಳೆದ 45 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಸರ್ಕಾರ ಈ ಜವಾಬ್ದಾರಿ ನೀಡಿದೆ ಎಂದು ಹೇಳಿದರು. ಈ ಗೌರವ ತಮ್ಮೊಬ್ಬರದ್ದಲ್ಲ, ಶಿಕ್ಷಣ ಸಂಸ್ಥೆಯ ಎಲ್ಲರದ್ದಾಗಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಕಂಡುಹಿಡಿದು ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವುದು ತಮ್ಮ ಆದ್ಯತೆಯಾಗಿರಲಿದೆ ಎಂದು ತಿಳಿಸಿದರು. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಡೀನ್ ಎನ್.ಎಸ್. ಭೂಸನೂರ, ಸಂಸ್ಥೆಯ ಬೆಳವಣಿಗೆಯಲ್ಲಿ ಹಿರಿಯ ಶಿಕ್ಷಣತಜ್ಞರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಲಾವುದ್ದೀನ್ ಅಯ್ಯುಬಿ ಎಸ್. ಪುಣೆಕರ, ಎ.ಎಸ್. ಪಾಟೀಲ ಅವರ ಶೈಕ್ಷಣಿಕ ಸೇವೆ ಹಾಗೂ ವಿದ್ಯಾರ್ಥಿ ಹಿತಾಸಕ್ತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಅವಧಿಯಲ್ಲಿ ವಿಶ್ವವಿದ್ಯಾಲಯ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಎಂ.ಎಂ. ಗುರಡಿ, ಯು.ಎನ್. ಕುಂಟೋಜಿ, ಎನ್.ಜೆ. ಪಠಾಣ್, ಎಂ.ಎ. ಹೆಬ್ಬಳಕರ, ಎ.ಎನ್. ರಿಸಾಲ್ದಾರ್, ಡಾ. ಬಿ.ಎ. ಧಪೇದಾರ್, ರಿಯಾಜ್ ಗೀರಗಾಳ, ಎ.ಜೆ. ನಮಾಜಿ, ಎ.ಸಿ. ಸುಕ್ಕಿ, ಎಫ್.ಎಸ್. ಜಾಹಗೀರ್, ಎಂ.ಎ. ದೊಡ್ಡಮನಿ, ಎಂ.ಆರ್. ತಪಶೆಟ್ಟಿ, ಬಿ.ಎಂ. ಭಂಡಾರಿ, ಆರ್.ಎಲ್. ಕಣ್ಣಿ, ಮಂಜುಳಾ ಘಟೇಗಾರ, ರತ್ನಾ ಕಾಂಬಳೆ, ವಿ.ಎಸ್. ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.