892ನೇ ಶಿವಶರಣ ಹಡಪದ ಅಪ್ಪಣ್ಣವರ ಜಯಂತಿ
ಲೋಕದರ್ಶನ ವರದಿ
ಕೊಲ್ಹಾರ 29: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ 892ನೇ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸಲಾಯಿತು.ತಹಶೀಲ್ದಾರ್ ಸಂತೋಷ ಮ್ಯಾಗೇರಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, 12ನೇ ಶತಮಾನದ ವಚನಕಾರ ಹಾಗೂ ಜಗಜ್ಯೋತಿ ಬಸವಣ್ಣನವರ ಆಪ್ತ ಒಡನಾಡಿಯಾಗಿದ್ದ ಹಡಪದ ಅಪ್ಪಣ್ಣ ಅವರು ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಶರಣ ಚಳವಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.’ಕ್ಷೌರ ವೃತ್ತಿಯನ್ನು ಭಕ್ತಿ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದ ಅಪ್ಪಣ್ಣ ಅವರು, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು.
ತಮ್ಮ ವಚನಗಳ ಮೂಲಕ ಡಂಭಾಚಾರ, ತಾರತಮ್ಯ ಹಾಗೂ ಅಜ್ಞಾನವನ್ನು ಖಂಡಿಸಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು’ ಎಂದು ತಿಳಿಸಿದರು.ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ ಹಡಪದ ಅಪ್ಪಣ್ಣ ಅವರು ’ಬಸವಪ್ರಿಯ ಕೂಡಲಚನ್ನಸಂಗಮದೇವ’ ಎಂಬ ಅಂಕಿತನಾಮದಡಿ ಅನೇಕ ವಚನಗಳನ್ನು ರಚಿಸಿದ್ದು, ಶರಣ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಎನ್.ಕೆ. ನದಾಫ್, ಗ್ರಾಮ ಆಡಳಿತಾಧಿಕಾರಿ ಬಿ.ಎನ್. ಜಿಡ್ಡಿಮನಿ, ಆನಂದ ಇಂಡಿ ಹಾಗೂ ಸಮಾಜದ ಮುಖಂಡರಾದ ಲಕ್ಷ್ಮಣ ಹಡಪದ, ಮಲ್ಲಪ್ಪ ಹಡಪದ, ಯಲ್ಲಪ್ಪ ಹಡಪದ, ಮಂಜು ಹಡಪದ, ಅರ್ಜುನ್ ಹಡಪದ, ಕಾಂತು ಹಡಪದ, ಬಸು ಹಡಪದ, ಪುಂಡಲೀಕ ಹಡಪದ, ಭೀಮಸಿ ಹಡಪದ, ಈರ್ಪ ಹಡಪದ, ಕಲಮೇಶ ಹಡಪದ, ಹಂಪಣ್ಣ ಹಡಪದ, ಹಣಮಂತ ಹಡಪದ, ಶಿವು ಹಡಪದ, ಇಸು ಹಡಪದ, ನಾಗಪ್ಪ ಹಡಪದ ಸೇರಿದಂತೆ ಹಲವರು ಭಾಗವಹಿಸಿದ್ದರು.