ಮುಂದಗೋಡ

68ನೇ ಕನ್ನಡ ರಾಜ್ಯೋತ್ಸವ: ತಹಶೀಲ್ದಾರ ಶಂಕರ ಗೌಡಿ ಧ್ವಜಾರೋಹಣ

68ನೇ ಕನ್ನಡ ರಾಜ್ಯೋತ್ಸವ: ತಹಶೀಲ್ದಾರ ಶಂಕರ ಗೌಡಿ ಧ್ವಜಾರೋಹಣ

ಮುಂಡಗೋಡ 02:  68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಪಟ್ಟಣ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಧ್ವಜಾರೋಹಣವನ್ನು ತಹಶೀಲ್ದಾರ ಶಂಕರ ಗೌಡಿ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು.      

ಜಿ.ಪಂ.ಮಾಜಿ ಸದಸ್ಯ ಎಲ್‌.ಟಿ.ಪಾಟೀಲ ಮತ್ತು ಪ.ಪಂ.ಸದಸ್ಯ ಅಶೋಕ ಚಲವಾದಿ ಮಾತನಾಡಿದರು. ಸ್ತಬ್ಧಚಿತ್ರಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ನಗದು ಬಹುಮಾನ ನೀಡಲಾಯಿತು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಗೀತ ಶಿಕ್ಷಕ ಸುರೇಶ ಹುದ್ಲೂರ ಮತ್ತು ಶಿಕ್ಷಕಿಯರು ನಾಡಗೀತೆ ಹೇಳಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಮರುನಾಮಕರಣವಾಗಿ 50 ವರ್ಷವಾದ ಸುಸಂದರ್ಭದಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು, ಒಂದೇ ಒಂದೇ ಒಂದೇ ಕರ್ನಾಟಕ ಒಂದೇ, ಹೊತ್ತಿತೊ ಹೊತ್ತಿತೊ ಕನ್ನಡದ ದೀಪ ಹೆಸರಾಯಿತು ಕರ್ನಾಟಕ ಮತ್ತು ಉಸಿರಾಗಲಿ ಕನ್ನಡ ಎಂಬ 5 ಕನ್ನಡ ಗೀತೆಗಳನ್ನು ಸಾಮೂಹಿಕವಾಗಿ ಹೇಳಿ ಕನ್ನಡಾಂಬೆಗೆ ನುಡಿ ನಮನ ಸಲ್ಲಿಸಲಾಯಿತು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.    

ಬಿಇಒ ಜಕಣಾಚಾರಿ ಸ್ವಾಗತಿಸಿದರು. ಶಿಕ್ಷಕ ಕೆ.ಕೆ.ಕರುವಿನಕೊಪ್ಪ ನಿರೂಪಿಸಿ ವಂದಿಸಿದರು. ಈ ವೇಳೆ ಪ.ಪಂ.ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಕಸಾಪ ತಾಲೂಕು ಅಧ್ಯಕ್ಷ ವಸಂತ ಕೊಣಸಾಲಿ, ನಿಕಟಪೂರ್ವ ಅಧ್ಯಕ್ಷ ಸಹದೇವಪ್ಪ ನಡಿಗೇರ, ಪ.ಪಂ.ಸದಸ್ಯರು, ಜ್ಞಾನೇಶ್ವರ ಗುಡಿಯಾಳ, ವಿವಿಧ ಸಂಘಟನೆಗಳ ಮುಖ್ಯಸ್ಥರು, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.    

ಇದಕ್ಕೂ ಮುನ್ನ ಪಟ್ಟಣದ ಪರೀವೀಕ್ಷಣಾ ಮಂದಿರದಿಂದ ಹೊರಟ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ತಹಶೀಲ್ದಾರ ಶಂಕರ ಗೌಡಿ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ತಾಲೂಕಿನ ಚಿಗಳ್ಳಿಯ ಶ್ರೀಹುಲಿಗೆಮ್ಮದೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ 200ಮೀ. ಉದ್ದದ ಕನ್ನಡ ಬಾವುಟ ಮತ್ತು ಒನಕೆ ಓಬವ್ವ, ಭಕ್ತ ಕನಕದಾಸ, ಯಕ್ಷಗಾನ, ಕ್ರಾಂತಿಯೋಗಿ ಬಸವಣ್ಣ, ಸಂಗೊಳ್ಳಿ ರಾಯಣ್ಣ, ನಾಡದೇವತೆ ಹಾಗೂ ಇನ್ನಿತರ ಸ್ತಬ್ಧಚಿತ್ರಗಳು ಗಮನ ಸೆಳೆದವು. 


ಸುದ್ದಿ ಓದಿ