ನಿತೀಶ್ ಗೆ ರಾಜಕೀಯ ಮರ್ಮಾಘಾತ- 6 ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆ
ಪಾಟ್ನಾ,
ಡಿಸೆಂಬರ್ 25: ಬಿಹಾರ ಮುಖ್ಯಮಂತ್ರಿ ನಿತೀಶ್
ಕುಮಾರ್ ನೇತೃತ್ವದ ಜೆಡಿಯು ಗೆ ಅರುಣಾಚಲ ಪ್ರದೇಶದಲ್ಲಿ
ಭಾರಿ ಹೊಡೆತ ಬಿದ್ದಿದೆ.
ಅರುಣಾಚಲ
ಪ್ರದೇಶದ 7 ಜೆಡಿಯು ಶಾಸಕರ ಪೈಕಿ 6 ಮಂದಿ ಶಾಸಕರು
ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಬಿಜೆಪಿಯ ನೆರವಿನಿಂದ ಮುಖ್ಯಮಂತ್ರಿ
ಗಾದಿಯನ್ನು ಮತ್ತೆ ಪಡೆದುಕೊಂಡಿರುವ ನಿತೀಶ್ ಕುಮಾರ್ ಅವರಿಗೆ ಇದು ರಾಜಕಿಯವಾಗಿ ಬಹಳ ಮಜುಗರವಾಗಿದೆ.
ಪಂಚಾಯಿತಿ
ಮತ್ತು ಮುನ್ಸಿಪಲ್ ಚುನಾವಣೆಗಳ ಫಲಿತಾಂಶ ಪ್ರಕಟವಾದ ಮರುದಿನವೇ ಈ ಬೆಳವಣಿಗೆ ನಡೆದಿದೆ. 60 ಸದಸ್ಯರ
ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯು ತನ್ನ ಬಲವನ್ನು ಈಗ 48ಕ್ಕೆ ಹೆಚ್ಚಿಸಿಕೊಂಡಿದೆ. ಆದರೆ ಜೆಡಿಯುನಲ್ಲಿ ಒಬ್ಬ ಶಾಸಕ ಮಾತ್ರ ಉಳಿದುಕೊಂಡಿದ್ದಾರೆ.ಪೀಪಲ್ಸ್
ಪಾರ್ಟಿ ಆಫ್ ಅರುಣಾಚಲ್ (ಪಿಪಿಎ) ಏಕೈಕ ಶಾಸಕರಾದ ಲಿಕಾಬಲಿ ಕ್ಷೇತ್ರದ ಕರ್ಡೊ ನೈಗ್ಯಾರ್ ಕೂಡ ಬಿಜೆಪಿ
ಸೇರ್ಪಡೆಯಾಗಿದ್ದಾರೆ. ಪಿಪಿಎ ಶಾಸಕನನ್ನು ಈ ತಿಂಗಳ ಆರಂಭದಲ್ಲಿ ಪಕ್ಷದ ಪ್ರಾದೇಶಿಕ ಘಟಕ ಅಮಾನತು
ಮಾಡಿತ್ತು.