ಸಂತಕವಿ, ಸರ್ವಜ್ಞರ 501ನೇ ಜಯಂತಿ ಆಚರಣೆ
ಬಳ್ಳಾರಿ, ಫೆ.19: ಮಂಜಮ್ಮ ಜೋಗತಿ ಅವರ ಹೆಸರು ಮಂಗಳಮುಖಿಯರಲ್ಲಿ ಬಹಳ ಪ್ರಮುಖವಾದದ್ದು. ಮಂಜಮ್ಮ ಜೋಗತಿ ಅವರ ಈ ಸಾಧನೆಯ ಹಿಂದೆ ಸ್ಪೂರ್ತಿದಾಯಕ ಕತೆಯಿದೆ. ತೃತೀಯ ಲಿಂಗಿಯಾಗಿ ಗುರುತಿಸಿಕೊಂಡ ಇವರು ಕೌಟುಂಬಿಕ ಬಹಿಷ್ಕಾರದ ನಡುವೆಯೂ ಬದುಕುಕಟ್ಟಿಕೊಂಡ ಸಾಹಸಿ. ಅವರು ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗುವ ವೇಳೆಗಾಗಲೇ ಸ್ವೀಕರಿಸಿದ್ದ 'ಜೋಗತಿ' ವೃತ್ತಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡು, 18ನೇ ವಯಸ್ಸಿಗೆ ಆರಂಭಿಸಿದ ಕಲಾಸೇವೆ ಇಂದಿಗೂ ನಿಂತಿಲ್ಲ. ಜಾನಪದ ಕಲಾ (‘ಜೋಗತಿ’ ನೃತ್ಯ) ಕ್ಷೇತ್ರಕ್ಕೆ ಇವರು ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ ರಾಜ್ಯ ಸರಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಆಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದ್ದು, ಇದೀಗ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಇವರು ಭಾಜನರಾಗಿದ್ದು ಹಮ್ಮೆಯ ವಿಷಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ಕೆ.ರಂಗಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಬಳ್ಳಾರಿ ಹೋಟೆಲ್ ಬಾಲಾ ರೀಜೆನ್ಸಿಯಲ್ಲಿ ಕರ್ನಾಟಕ ಜನಸೈನ್ಯ ಸಂಘಟನೆಯು ಹಮ್ಮಿಕೊಂಡ ತ್ರಿಪದಿಬ್ರಹ್ಮ ಸಂತಕವಿ, ಸರ್ವಜ್ಞರ 501ನೇ ಜಯಂತಿಯ ಅಂಗವಾಗಿ ಸರ್ವಜ್ಞನಿಗೆ ವಚನಾಭಿಷೇಕ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಬಿ.ಮಂಜಮ್ಮ ಜೋಗತಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರು, ಅವರು ಬಾಲ್ಯದಿಂದಲೂ ನಡೆದುಬಂದ ಹಾದಿಯನ್ನು ನೆನೆಯುತ್ತಾ, ನಾವು ಎಷ್ಟು ಎತ್ತರಕ್ಕೆ ಬೆಳೆದರೂ ನಡೆದು ಬಂದ ದಾರಿಯನ್ನು ಮರೆಯಬಾರದು. ಯಾವುದೇ ಕಾರಣಕ್ಕೂ ಅಹಂಕಾರವನ್ನು ಬಿಟ್ಟಾಗ ಮಾತ್ರ ಜೀವನದಲ್ಲಿ ಉನ್ನತ ಮಟ್ಟಕ್ಕೆ ಸೇರಲು ಸಾಧ್ಯ ಎಂದರು.
ಆಗ ಕನಕದಾಸರು ಹೇಳಿದ ಮಾತು "ಅಲ್ಲ ತಾಯಿ, ನಿನಗೆ ಕೊಡುವ ಮನಸ್ಸಿಲ್ಲ, ಕೇವಲ ನಿನ್ನ ಕೈ ಎಂಜಲು ಆಗಿಲ್ಲ, ಕೊಡುವ ಮನಸ್ಸು ಎಂಜಲು ಆಗಿದೆ ಎಂದು ಅವರು ಹೇಳಿದ ಮಾತನ್ನು ಅವರ ತಾಯಿಗೆ ವಿವರಿಸಿದರು. ಅದಕ್ಕಾಗಿ ಇಂದಿನ ಯುವ ಪೀಳಿಗೆಯಲ್ಲಿ ದಾನ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಮನವಿ ಮಾಡಿದರು.ಕರ್ನಾಟಕ ಜನಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ ಅವರು ಮಾತನಾಡುತ್ತಾ, ಯಾವುದೇ ಸಂತರ ಜಯಂತಿಗಳನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತ ಮಾಡದೇ, ಸರ್ಕಾರಿ ಮತ್ತು ಖಾಸಗೀ ಶಾಲೆಗಳಲ್ಲಿ ಆಯಾ ಜಯಂತಿ ದಿನಗಳಂದು ಮಕ್ಕಳಿಗೆ ಸಿಹಿ ಊಟವನ್ನು ಕೊಡಿಸಿ, ಸಂತರ ಜೀವನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದಾಗ ಮಕ್ಕಳಿಗೆ ಅಂತಹ ಸಂತರ ಬಗ್ಗೆ ತಿಳುವಳಿಕೆ ಬರುತ್ತದೆ ಎಂದು, ಹೇಳಿ ನನ್ನ ವೈಯಕ್ತಿಕ ಜೀವನದಲ್ಲಿ ಬಾಲ್ಯದಲ್ಲಿದ್ದಾಗ, ಧೈರ್ಯವನ್ನು ನೆನೆಸಿಕೊಂಡಾಗ ಭಗತ್ಸಿಂಗ್ರವರನ್ನು ಮಾದರಿಯಾಗಿಸಿಕೊಂಡಿದ್ದೆ, ತದನಂತರ ಸರಳತೆಯನ್ನು ಡಾ. ಎ.ಪಿ.ಜೆ.ಅಬ್ದುಲ್ ಕಲಾಂರವರನ್ನು ಮಾದರಿಯಾಗಿ ತೆಗೆದುಕೊಂಡು, ಆದರೆ ಇದೀಗ ಸಹನೆ ಎನ್ನುವ ಪದ ಬಂದಾಗ ಸಹನೆಯಿಂದಲೇ ಮಾತಾ ಮಂಜಮ್ಮನವು ಈ ಮಟ್ಟಕ್ಕೆ ಬಂದಿದ್ದು, ಆದಕಾರಣ ಮಾತಾ ಮಂಜಮ್ಮನವರನ್ನೇ ಸ್ವೀಕರಿಸುತ್ತೇನೆ ಎಂದು ಹೇಳುತ್ತಾ, ಸಹನೆಯನ್ನು ಕಳೆದುಕೊಂಡರೆ ನಾಯಕತ್ವದ ಲಕ್ಷಣಗಳು ಇರುವುದಿಲ್ಲ ಎಂದು ತಿಳಿಸಿದರು.ಕಮ್ಮರಚೇಡು ಸಂಸ್ಥಾನಮಠದ ಕಲ್ಯಾಣ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ತಮ್ಮ ಆಶೀರ್ವಚನ ನೀಡಿದರು. ಬಳ್ಳಾರಿಯ ದೊಡ್ಡಬಸವ ಗವಾಯಿಗಳ ತಂಡದವರಿಂದ ವಚನಾಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ಮಾತಾ ಮಂಜಮ್ಮ ಜೋಗತಿ ಅವರನ್ನು ಕರ್ನಾಟಕ ಜನಸೈನ್ಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಜನಸೈನ್ಯದ ಕಾರ್ಯಕರ್ತರು, ನಗರದ ವಿವಿಧ ಕಲಾವಿದರು ಭಾಗವಹಿಸಿ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಲಾಯಿತು.