47 ವರ್ಷಗಳ ಸಿನಿ ಪಯಣ ಮುಗಿಸಿ ಬಾರದ ಲೋಕದ ಕಡೆದ ನಡೆದ ಅಪ್ಪು
ಬೆಂಗಳೂರು, ಅ ೨೯ ೪೫ ವರ್ಷಗಳ ಹಿಂದೆ ಡಾ. ರಾಜ್ ಕುಮಾರ್, ಆರತಿ ಹಾಗೂ ಜಯಮಾಲ ಅಭಿನಯದ ’ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಮಗುವಾಗಿ ಕಾಣಿಸಿದ್ದರು. ಈ ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚುವ ಸುಳಿವನ್ನು ಅಂದೇ ನೀಡಿದ್ದರು. ನಂತರ ಬಾಲ ಕಲಾವಿದನಾಗಿ, ಹೀರೋ ಆಗಿ ಪುನೀತ್ ಕರ್ನಾಟಕದ ಮನೆ ಮನಗಳಲ್ಲಿ ಹೆಸರುವಾಸಿಯಾಗಿದ್ದರು. ೪೫ ವರ್ಷಗಳ ಸಿನಿ ಪ್ರಯಾಣ ಮುಗಿಸಿ ಇದೀಗ ಬಾರದ ಲೋಕಕ್ಕೆ ನಡೆದು ಅಭಿಮಾನಿಗಳನ್ನು ಶೋಕದಲ್ಲಿ ಮುಳುಗಿಸಿದ್ದಾರೆ
’ಪ್ರೇಮದ ಕಾಣಿಕೆ’ ಸಿನಿಮಾ ತೆರೆಕಂಡ ನಂತರ ಪುನೀತ್ ’ಸನಾದಿ ಅಪ್ಪಣ್ಣ’ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ನಂತರದಲ್ಲಿ ತಾಯಿಗೆ ತಕ್ಕ ಮಗ, ವಸಂತ ಗೀತಾ, ಭೂಮಿಗೆ ಬಂದ ಭಗವಂತ, ಭಾಗ್ಯವಂತ, ಹೊಸ ಬೆಳಕು ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ಪುನೀತ್ ಅದ್ಭುತವಾಗಿ ನಟಿಸಿದ್ದರು. ಈ ಸಮಯದಲ್ಲಿ ಪುನೀತ್ ಮಾಸ್ಟರ್ ಲೋಹಿತ್ ಆಗಿ ಪರಿಚಯಗೊಂಡಿದ್ದರು. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಪ್ರಹ್ಲಾದನಾಗಿ ಜನಮನ ಸೂರೆಗೊಂಡಿದ್ದರು.
೧೯೮೫ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರಕ್ಕಾಗಿ ಪುನೀತ್ಗೆ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಚಲಿಸುವ ಮೋಡಗಳು ಹಾಗೂ ಎರಡು ಕನಸು ಚಿತ್ರದಲ್ಲಿ ಪುನೀತ್ ನಟನೆಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಕೂಡ ದೊರೆತಿತ್ತು. ೨೦೦೨ರಲ್ಲಿ ತೆರೆ ಕಂಡ ಅಪ್ಪು ಸಿನಿಮಾ ಮೂಲಕ ಪುನೀತ್ ಪೂರ್ಣ ಪ್ರಮಾಣದ ನಟನಾಗಿ ಚಂದನವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಈವರೆಗೆ ಸುಮಾರು ೨೫ ಸಿನಿಮಾಗಳಲ್ಲಿ ಪುನೀತ್ ನಟಿಸಿದ್ದಾರೆ. ಪ್ರೇಮದ ಕಾಣಿಕೆ ಸಿನಿಮಾ ತೆರೆಕಂಡು ಸುಮಾರು ೪೫ ವರ್ಷಗಳು ಕಳೆದಿವೆ.