ತಾಳಿಕೋಟಿ

ತಾಳಿಕೋಟಿ ಅಭಿವೃದ್ಧಿಗೆ 40 ಕೋಟಿ ಅನುದಾನ ; ಎಸ್‌.ಎಫ್‌.ಸಿ. ಅನುದಾನದ ಕಾಮಗಾರಿಗೆ ಶಾಸಕ ನಡಹಳ್ಳಿ ಚಾಲನೆ

ತಾಳಿಕೋಟಿ ಅಭಿವೃದ್ಧಿಗೆ 40 ಕೋಟಿ ಅನುದಾನ ; ಎಸ್‌.ಎಫ್‌.ಸಿ. ಅನುದಾನದ ಕಾಮಗಾರಿಗೆ ಶಾಸಕ ನಡಹಳ್ಳಿ ಚಾಲನೆ

ತಾಳಿಕೋಟಿ: ಪಟ್ಟಣವನ್ನು ಒಂದು ಸ್ವಚ್ಛ ಸುಂದರ ಹಾಗೂ ಹಸಿರು ನಗರವನ್ನಾಗಿ ಮಾಡುವ ಉದ್ದೇಶದಿಂದ ಒಟ್ಟು ಇಲ್ಲಿಯವರೆಗೆ ರೂ. 40 ಕೋಟಿ ಅನುದಾನವನ್ನು ಮಂಜೂರು ಮಾಡಿಸಿ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸಿದ್ದೇನೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು. 

ಬುಧವಾರ ಪಟ್ಟಣದ ವಿವಿಧ ವಾರ್ಡಗಳಲ್ಲಿ ಪೌರಾಡಳಿತ ಇಲಾಖೆಯ 2022-23ನೇ ಸಾಲಿನ ಎಸ್‌.ಎಫ್‌.ಸಿ. ವಿಶೇಷ ಅನುದಾನದ ರೂ. 793 ಲಕ್ಷಗಳ ಮೊತ್ತದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಇವತ್ತು ಒಟ್ಟು ರೂ. 9.50 ಕೋಟಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಇದಕ್ಕಿಂತ ಮುಂಚೆ ನಗರೋತ್ಥಾನ ಯೋಜನೆಯಲ್ಲಿ ಹಂತ 1, 2 ಹಾಗೂ 3 ರಲ್ಲಿ ಹಾಕಿಕೊಂಡ ಸುಮಾರು ರೂ. 25 ಕೋಟಿ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಇದರ ಜೊತೆಗೆ ಎಸ್‌.ಕೆ. ಕಾಲೇಜಿನಿಂದ ಡಿಪೋದವರೆಗಿನ ಮುಖ್ಯರಸ್ತೆಗಾಗಿ ರೂ. 5 ಕೋಟಿಯ ಕಾಮಗಾರಿ ಪ್ರಗತಿ ಹಂತದಲ್ಲಿದೆ ಹಾಗೂ ರೂ. 1.50 ಕೋಟಿ ವಿಶೇಷ ಅನುದಾನದಲ್ಲಿ 3ನೇ ವಾರ್ಡ್‌ನಲ್ಲಿ ಕೆಲವು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಮುಗಿದಿವೆ. 

ಇಡೀ ಪಟ್ಟಣಕ್ಕೆ 24?7 ನೀರಿನ ಪೂರೈಕೆಯ ಯೋಜನೆಗೆ ಮಂಜೂರಾತಿ ಸಿಕ್ಕಿದೆ ಅದಕ್ಕೂ ಶೀಘ್ರದಲ್ಲಿಯೇ ಚಾಲನೆ ನೀಡಲಿದ್ದೇನೆ. ಇದರ ಜೊತೆಗೆ ಪಟ್ಟಣದ ಪಶುಚಿಕಿತ್ಸಾಲಯದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವದರಿಂದ ಹೊಸ ಕಟ್ಟಡಕ್ಕಾಗಿ ರೂ. 22 ಲಕ್ಷ ಮಂಜೂರು ಮಾಡಿಸಿ ಅದಕ್ಕೂ ಚಾಲನೆ ಕೊಟ್ಟಿದ್ದೇನೆ.  

ಮಾ. 21ಕ್ಕೆ ಮಾನ್ಯ ಮುಖ್ಯಮಂತ್ರಿಗಳು ನಾಲತವಾಡಕ್ಕೆ ಆಗಮಿಸುತ್ತಿದ್ದು ಅಂದು ಹಲವಾರು ಕಾಮಗಾರಿಗಳಿಗೆ ಚಾಲನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ತಾವೆಲ್ಲರೂ ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. 

ಈ ಸಮಯದಲ್ಲಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಸದಸ್ಯರಾದ ವಾಸುದೇವ ಹೆಬಸೂರ, ಡಿ.ವಿ. ಪಾಟೀಲ, ಮುಖಂಡ ಶಿವಶಂಕರ ಹಿರೇಮಠ, ಪರಶುರಾಮ ತಂಗಡಗಿ, ಅಣ್ಣಪ್ಪ ಜಗತಾಪ, ಜಯಸಿಂಗ್ ಮೂಲಿಮನಿ, ನಿಂಗು ಕುಂಟೋಜಿ, ನಮೋ ರಾಘು, ಮುಖಂಡರಾದ ದತ್ತು ಹೆಬಸೂರ, ಕಾಶಿನಾಥ ಮುರಾಳ, ಎಂ.ಎಸ್‌. ಸರಶೆಟ್ಟಿ, ಸಂಭಾಜಿ ವಾಡ್ಕರ್, ವೆಂಕಣ್ಣ ತಾಳಪಲ್ಲೆ, ಬಸನಗೌಡ ವಣಿಕ್ಯಾಳ, ಎಂ.ಎಂ. ಪೊಲೀಸ್ ಪಾಟೀಲ, ಗುತ್ತಿಗೆದಾರ, ಬಿ.ಎಸ್‌. ಪಾಟೀಲ (ವಣಿಕ್ಯಾಳ), ಮುಖ್ಯಾಧಿಕಾರಿ ಸುರೇಶ ನಾಯಕ ಮತ್ತಿತರರು ಇದ್ದರು. 


ಸುದ್ದಿ ಓದಿ