ಮುಂದಗೋಡ

ಇ-ಕೆವೈಸಿ ಮಾಡಿಸಲು ಜು.31 ಕೊನೆಯ ದಿನಾಂಕ

ಇ-ಕೆವೈಸಿ ಮಾಡಿಸಲು ಜು.31 ಕೊನೆಯ ದಿನಾಂಕ

ಮುಂಡಗೋಡ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇ-ಕೆವೈಸಿ ಮಾಡಿಸಲು ಜುಲೈ31 ಕೊನೆಯ ದಿನಾಂಕವಾಗಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್‌.ಎಸ್‌.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಭಾರತ ಸರ್ಕಾರದ ಪಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು  01.02.2019ರಿಂದ ಅನುಷ್ಠಾನಗೊಳಿಸಲಾಗಿದೆ. ಯೋಜನೆಯಡಿ ವಾರ್ಷಿಕ 6ಸಾವಿರ ರೂ.ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ಮೂಲಕ ವರ್ಗಾವಣೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ನೆರವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಬೇಕಾದರೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಶೇ.16ರಷ್ಟು ರೈತರು ಮಾತ್ರ ಇ-ಕೆವೈಸಿ ಮಾಡಿಸಿದ್ದು ಶೇ.84ರಷ್ಟು ರೈತರು ಬಾಕಿ ಇರುತ್ತಾರೆ. ಇ-ಕೆವೈಸಿ ಮಾಡಿಸಲು 31.07.2022 ಕೊನೆಯ ದಿನಾಂಕವಾಗಿರುವುದರಿಂದ ರೈತರು ಓಟಿಪಿ ಆಧಾರಿತ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸಬೇಕು ಎಂದು ಅವರು ತಿಳಿಸಿದ್ದಾರೆ. 

ರೈತರಿಗೆ ಸಲಹೆ 

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಗೋವಿನಜೋಳ, ಭತ್ತ ಮತ್ತು ಕಬ್ಬಿನ ಬೆಳೆಗಳಿಗೆ ರೈತರು ಕೇವಲ ಡಿಎಪಿ ರಸಗೊಬ್ಬರಕ್ಕೆ ಅವಲಂಬಿತರಾಗಿರದೆ ಕಾಂಪ್ಲೆಕ್ಸ್‌ ಮತ್ತು ಪೊಟ್ಯಾಷ್ ಗೊಬ್ಬರವನ್ನು ಆಯಾ ಬೆಳೆಗಳಿಗೆ ಅವಶ್ಯಕವಾಗಿ ಬೇಕಾಗುವ ಪ್ರಮಾಣದಲ್ಲಿ ಬಳಸಿದ್ದಲ್ಲಿ ಸಮೃದ್ಧ ಬೆಳೆಯೊಂದಿಗೆ ನೀರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗಲಿದೆ. ವೈಜ್ಞಾನಿಕ ಪದ್ಧತಿಯಲ್ಲಿ ರಸಗೊಬ್ಬರ ಬಳಸುವುದರಿಂದ ನೀರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗುವುದು.   

ಭತ್ತ ಬಿತ್ತನೆ ಸಮಯದಲ್ಲಿ 10:26:26, 19:19:19, 17:17:17 ಈ ಮೂರರಲ್ಲಿ ಯಾವುದಾದರೂ ಒಂದನ್ನು ಪ್ರತಿ ಎಕರೆಗೆ 100ಕೆ.ಜಿ. ಮತ್ತು 45ಕೆ.ಜಿ. ಯೂರಿಯಾ ಅಥವಾ 20:20:0:13, 100 ಕೆ.ಜಿ. ಮತ್ತು 25 ಕೆ.ಜಿ. ಪೊಟ್ಯಾಷ್ ಕೂಡ ಬಳಸಬೇಕು.  

ಮೆಕ್ಕೆಜೋಳ ಬಿತ್ತನೆ ಸಮಯದಲ್ಲಿ 15:15:15, 17:17:17 ಮತ್ತು 19:19:19 ಈ ಮೂರರಲ್ಲಿ ಯಾವುದಾದರೂ ಒಂದನ್ನು ಪ್ರತಿ ಎಕರೆಗೆ 100ಕೆ.ಜಿ. ಇಲ್ಲವೇ 20:20:0:13 ಅಥವಾ 16:20:0:13 ಬಳಸುವುದಾದಲ್ಲಿ ಪ್ರತಿ ಎಕರೆಗೆ 100ಕೆ.ಜಿ. ಜೊತೆಗೆ 25 ಕೆ.ಜಿ. ಪೊಟ್ಯಾಷ್ ಕೂಡ ಬಳಸುವುದರಿಂದ ಎಲ್ಲ ರೈತರಿಗೂ ಸಮರ​‍್ಕವಾಗಿ ರಸಗೊಬ್ಬರವನ್ನು ಮಾರುಕಟ್ಟೆಯಲ್ಲಿ ಪೂರೈಸಲು ಸಹಕಾರಿಯಾಗಲಿದೆ. ಯಾವುದಾದರೂ ಒಂದು ರಸಗೊಬ್ಬರವನ್ನು ಮಾತ್ರ ಬಿತ್ತನೆ ಸಮಯದಲ್ಲಿ ಉಪಯೋಗಿಸಬೇಕು. ಹೆಚ್ಚಿನ ಮಾಹಿತಿಗೆ ರೈತ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್‌.ಎಸ್‌.ಕುಲಕರ್ಣಿ ರೈತರಿಗೆ ಸಲಹೆ ನೀಡಿದ್ದಾರೆ. 


ಸುದ್ದಿ ಓದಿ