ಅಪ್ಪು ಅಮರಶ್ರೀ : ಶಿವರಾಜ್ ಕುಮಾರ್
ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಪ್ಪು ಪತ್ನಿ ಅಶ್ವಿನಿ ಮತ್ತು ಮಕ್ಕಳು ಆಗಮಿಸಿ ನಮನ ಸಲ್ಲಿಸಿ, ಪುನೀತ್ ಗೆ ಇಷ್ಚವಾದ ಆಹಾರವನ್ನು ನಿವೇದಿಸಲಾಯಿತು.
ಈ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳಿಗೆ ಪುಲಾವ್ ಮತ್ತು ಕೇಸರಿಬಾತ್ ವಿತರಿಸಲಾಯಿತು. 11ನೇ ಕಾರ್ಯ ಹಿನ್ನೆಲೆ ದೊಡ್ಮನೆ ಕುಟುಂಬಸ್ಥರು, ನಟ ಮುರಳಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿಂತೆ ಅತ್ಯಾಪ್ತರು ಉಪಸ್ಥಿತರಿದ್ದರು.
ಇದೇ ವೇಳೆ ಮಾತನಾಡಿದ ಶಿವರಾಜ್ ಕುಮಾರ್, ಇವತ್ತು ಬೆಳಗ್ಗೆ ಅಪ್ಪುಗೆ ಈ ಎಲ್ಲ ಕಾರ್ಯ ಮಾಡಬೇಕಾ ಅಂತ ಬಂದಾಗ ತುಂಬಾ ನೋವಾಯ್ತು. ಅಭಿಮಾನಿಗಳಲ್ಲಿಯೇ ಆತನನ್ನು ಕಾಣುತ್ತಿದ್ದೇವೆ,ಯಾರೂ ಸಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಅದರ ಬದಲು ಅಪ್ಪುವಿನಂತೆಯೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಚಿಕ್ಕ ವಯಸ್ಸಿನಿಂದಲೂ ಅಪ್ಪು ಬೆಳವಣಿಗೆಯನ್ನು ನೋಡಿಕೊಂಡು ಬಂದಿದ್ದೇನೆ. ಅಭಿಮಾನಿಗಳು ಅಪ್ಪುನನ್ನು ಆರಾಧಿಸುತ್ತಿದ್ದರು. ಅವರ ನೋವು ಏನು ಎಂಬವುದು ಎಂದು ನಮಗೆ ಅರ್ಥವಾಗುತ್ತದೆ. ನಾಳೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ತಿಥಿ ಕಾರ್ಯದ ಅಂಗವಾಗಿ ಅನ್ನ ಸಂತರ್ಪಣೆ ನೆರವೇರಿಸಿ, ಮನೆಯಲ್ಲಿಯೂ ಪೂಜೆ ಸಲ್ಲಿಸಲಾಗುತ್ತದೆ ಎಂದರು.
ಇದೇ ವೇಳೆ ಪುನೀತ್ ಅವರಿಗೆ ಪದ್ಮಶ್ರೀ ನೀಡಬೇಕೆಂಬ ಅಭಿಮಾನಿಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಅಪ್ಪು ಎಲ್ಲರ ಹೃದಯದಲ್ಲಿ ಶ್ರೀ ಆಗಿರುತ್ತಾನೆ. ಅವನು ಅಮರಶ್ರೀ ಎಂದು ಹೇಳಿದರು.