ಶತಾಯುಷಿ ವೃದ್ಧೆ ಕೊರೊನಾ ಸೋಂಕಿನಿಂದ ಗುಣಮುಖ
ಚಿಕ್ಕೋಡಿ ನವೆಂಬರ್ 04: ಕೊರೊನಾ ಇತ್ತೀಚೆಗೆ ಸ್ವಲ್ಪ ಇಳಿಮುಖವಾದರೂ ಹುಟ್ಟಿದ ಮಗುವಿನಿಂದ ಹಿಡಿದು ವಯಸ್ಕರವರೆಗೂ ಎಲ್ಲರನ್ನೂ ಕೊರೊನಾ ಸೋಂಕಿನ ಭಾದೆ ಕಾಡುತ್ತಿದೆ. ಕೆಲವರು ಗುಣಮುಖರಾಗದೇ ಸಾವನ್ನಪ್ಪಿದ್ದಾರೆ. ಹಲವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಅಚ್ಚರಿ ಸಂಗತಿ ಎಂದರೆ ಶತಾಯುಷಿ ವೃದ್ದೆಯೊಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಅಂಕಲಿ ಶಂಕರ ಪಾಟೀಲ ನರ್ಸಿಂಗ ಹೋಮ್ ಆಸ್ಪತ್ರೆಯಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಕಾಶಿಬಾಯಿ ಸಾವಂತ (105) ಶತಾಯುಷಿ ಕೊರೊನಾ ಗೆದ್ದು ಆರೋಗ್ಯವಾಗಿದ್ದಾರೆ. ಆಸ್ಪತ್ರೆಯ ವೈದ್ಯ ಡಾ, ಶಿವಾನಂದ ಪಾಟೀಲ ಮತ್ತು ಸ್ನೇಹಾ ಪಾಟೀಲ ಸಿಬ್ಬಂದಿ ವರ್ಗ ಕಳೆದ ಹತ್ತು ದಿನಗಳಿಂದ ಶತಾಯುಷಿ ಅಜ್ಜಿಗೆ ಚಿಕಿತ್ಸೆ ನೀಡಿ ಉಪಚಾರ ಮಾಡಿದ್ದಾರೆ. ಇದರಿಂದ ಅಜ್ಜಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಕೊರೊನಾ ಗೆದ್ದ ಅಜ್ಜಿಯ ಕುಟುಂಬ ವೈದ್ಯರ ತಂಡದ ಕಾರ್ಯವಮನ್ನು ಶ್ಲಾಘಿಸಿದ್ದಾರೆ. ವೈದ್ಯರ ತಂಡ ಅಜ್ಜಿಯನ್ನು ಸನ್ಮಾನಿಸಿ ಡಿಸ್ಚಾರ್ಜ ಮಾಡಿದ್ದಾರೆ.
ಆಸ್ಪತ್ರೆಯ ವೈದ್ಯ ಡಾ, ಶಿವಾನಂದ ಪಾಟೀಲ ಮಾತನಾಡಿ, ಕಳೆದ ಹತ್ತು ದಿನಗಳಿಂದ ನಮ್ಮ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ದಾಖಲಾದ ಶತಾಯುಸಿ ಕಾಶಿಬಾಯಿ ಸಾವಂತ ಅವರಿಗೆ ಸೂಕ್ತ ಉಪಚಾರ ಮಾಡಲಾಗಿತ್ತು. ಮತ್ತು ಅಜಜಿಯ ರೋಗನಿರೋಧಕ ಶಕ್ತಿ ಇರುವುದರಿಂದ ಕೊರೊನಾದಿಂದ ಗುಣಮುಖರಾಗಲು ಸಾಧ್ಯವಾಗಿದೆ. ಅಜ್ಜಿಗೆ ಬಿಪಿ ಬಿಟ್ಟರೆ ಯಾವುದೇ ಕಾಯಿಲೆ ಇರಲಿಲ್ಲ, ಹೀಗಾಗಿ 105ರ ಅಜ್ಜಿ ಕೊರೊನಾ ಗೆದ್ದಿರುವುದು ಇದು ಒಂದು ಅಪರೂಪ ಎಂದು ಸಂತಸ ವ್ಯಕ್ತಪಡಿಸಿದರು.