ಚಿತ್ರಮಂದಿರಗಳ ಶೇ. 100ರಷ್ಟು ಭರ್ತಿಗೆ ಅವಕಾಶ : ಷರತ್ತು ಅನ್ವಯ
ಬೆಂಗಳೂರು, ಸೆ. 24 ಕಳೆದ ಎರಡು ವರ್ಷಗಳಿಂದ ಸಂಕಷ್ಟದಲ್ಲಿರುವ ಸ್ಯಾಂಡಲ್ ವುಡ್ ಗೆ ಅಂತೂ ಇಂತೂ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಅಕ್ಬೋಬರ್ 1 ರಿಂದ ಥಿಯೇಟರ್ ಗಳಲ್ಲಿ ಶೇಕಡ 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಆದರೆ ಷರತ್ತುಗಳು ಅನ್ವಯ ಎಂದು ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದ್ದು, ಥಿಯೇಟರ್ ಪ್ರವೇಶಿಸುವ ಪ್ರೇಕ್ಷಕರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು ಎಂದು ತಿಳಿಸಿದ್ದಾರೆ.
ಸಕಾರಾತ್ಮಕ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ. ಒಂದು ವೇಳೆ ಸೋಂಕು ದರ ಹೆಚ್ಚಿದಲ್ಲಿ ಥಿಯೇಟರ್ ಗೆ ಬೀಗ ಹಾಕಬೇಕಾಗುತ್ತದೆ. ಸೋಂಕು ತಗಲುವ ತೀವ್ರತೆ ಹೆಚ್ಚಿರುವ ಕಾರಣ, ಗರ್ಭಿಣಿಯರು ಹಾಗೂ ಮಕ್ಕಳು ಚಿತ್ರಮಂದಿರಗಳಿಗೆ ಬರಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿರುವ ಬೆನ್ನಲ್ಲೇ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.