ಶಿಗ್ಗಾವ್

ಮತದಾರರ ಪಟ್ಟಿ ಪರಿಷ್ಕರಣೆಗೆ ಶೇ.100ರಷ್ಟು ಸಹಕಾರ ಅಗತ್ಯ: ಸಚಿವ ಸತೀಶ ಜಾರಕಿಹೊಳಿ

ಮತದಾರರ ಪಟ್ಟಿ ಪರಿಷ್ಕರಣೆಗೆ ಶೇ.100ರಷ್ಟು ಸಹಕಾರ ಅಗತ್ಯ: ಸಚಿವ ಸತೀಶ ಜಾರಕಿಹೊಳಿ

 ಶಿಗ್ಗಾಂವಿ 5: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೇ.100ರಷ್ಟು ಪ್ರಗತಿ ಸಾಧಿಸಲು ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.  

ಪಟ್ಟಣದಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2026 (ಎಸ್‌ಐಆರ್) ಪ್ರಗತಿ ಪರೀಶೀಲನಾ ಹಾಗೂ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವಾಗಿದೆ ಎಂದು ತಿಳಿಸಿದರು.  

ಆಗಸ್ಟ್‌ 5ರಂದು ಪ್ರಕಟವಾಗುವ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ತೊಂದರೆಯಾಗುವ ಸಾಧ್ಯತೆ ಇದೆ. ಅಲ್ಲದೆ, ನಾಗರಿಕತ್ವಕ್ಕೆ ಸಂಬಂಧಿಸಿದ ದಾಖಲೆಗಳ ಅಗತ್ಯವೂ ಎದುರಾಗಬಹುದು ಎಂದು ಅವರು ಎಚ್ಚರಿಸಿದರು.  

ಶಾಸಕ ಯಾಸಿರ್ ಖಾನ್ ಪಠಾಣ್ ಮಾತನಾಡಿ, ಕ್ಷೇತ್ರದ 241 ಮತಗಟ್ಟೆಗಳಲ್ಲಿ ಈಗಾಗಲೇ ಶೇ.97ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಅಧಿಕಾರಿಗಳು ಸುಮಾರು 48 ಸಾವಿರ ಅರ್ಜಿಗಳನ್ನು ವಿತರಿಸಿದ್ದು, 9 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು.  

ಜುಲೈ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಜುಲೈ 15ರೊಳಗೆ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.  

ಸಭೆಯಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರು, ಮುನ್ನಾ ಪಠಾಣ್, ಗುಡ್ಡಪ್ಪ ಜಲದಿ, ಎಸ್‌.ಎಫ್‌. ಮಣಕಟ್ಟಿ, ಹನುಮರೆಡ್ಡಿ ನಡುವಿನಮನಿ, ಗೌಸ್ ಖಾನ್ ಮುನಸಿ, ಮುನ್ನಾ ಲಕ್ಷ್ಮೇಶ್ವರ, ಶಂಕರಗೌಡ ಪಾಟೀಲ, ಚಂದ್ರು ಕೊಡ್ಲಿವಾಡ, ಹಜರತಲಿ ಚುಡಿಗಾರ, ಮಲ್ಲಮ್ಮ ಸೋಮನಕಟ್ಟಿ, ಪವನ ಧಾರವಾಡ, ಜಾವೀದ್ ನಿರಮನಿ, ಖಾಜಾ ಶಾಬ್ಯಾಳ ಹಾಗೂ ಆಸೀಫ್ ಕಣವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ