ಲೇಖನಗಳು

ಜಂಪಿಯ ಕಥೆ.

ಜಂಪಿಯ ಕಥೆ.

ತಂದೆ ತಾಯಿಯರ  ಮುದ್ದಿನ ಮಗಳಾಗಿ ಬೆಳೆಯುತ್ತಿದ್ದಳು ಜಂಪಿ ( ಸದಾಕಾಲ ಉತ್ಸಾಹದಿಂದ ಪುಟಿಯುತ್ತಿದ್ದ ವಸುವಿನ ಮುದ್ದಿನ ಹೆಸರು  ಜಂಪಿಂಗ್ ಡಾಲ್ ಅದು ಕೊನೆಗೆ ಜಂಪಿ ಯಾಗಿತ್ತು) .  ಇವಳ ನಂತರ ಹುಟ್ಟಿದವನು ಗಿರಿ.  ಆದರೆ ತಂದೆ ಮೋಹನನ ವಿಚಾರದಂತೆ ಅವನಿಗೆ ದೊರಕುತ್ತಿದ್ದ ಎಲ್ಲ ಸೌಲಭ್ಯಗಳು ಇವಳ ಪಾಲಿಗೂ ಇತ್ತು ಎಂದು ಹೇಳಲು ಬರುತ್ತಿರಲಿಲ್ಲ.  ತಾಯಿ ಸರೋಜಿನಿ ಮಾತ್ರ ತನ್ನ ಎರಡೂ ಮಕ್ಕಳನ್ನು ಸಮಾನವಾಗಿ ಬೆಳೆಸುತ್ತಿದ್ದರು.   ತಾಯಿಯ ಪ್ರಭಾವವೇ ಹೆಚ್ಚಿಗಿದ್ದುದರಿಂದ ಗಿರಿ ಕೂಡ ತಂದೆಯ ತಾರತಮ್ಯ ನೀತಿಯನ್ನು ಅಷ್ಟಾಗಿ ಒಪ್ಪುತ್ತಿರಲಿಲ್ಲ. ಆದರೆ ಅವನಿಗೆ ಜಂಪಿಯಂತೆ ಅದನ್ನು ಪ್ರತಿಭಟಿಸುವ  ಧೈರ್ಯವಿರಲಿಲ್ಲ.  ಅವನು ತನ್ನದೇ ಆದ ರೀತಿಯಲ್ಲಿಅದನ್ನೆಲ್ಲ ನೇರ್ಪಡಿಸಲು ಪ್ರಯತ್ನಿಸುತ್ತಿದ್ದ.    


ತನಗೆ ಮೊದಲು ಸೈಕಲ್ ಸಿಕ್ಕಾಗ ಅವನು ತಾನು ಬಸ್ಸಿನಲ್ಲಿ ಹೋಗಿ ಅಕ್ಕನಿಗೆ ಶಾಲೆಗೆ ಸೈಕಲ್ಲು  ಒಯ್ಯಲು ಅನುವು ಮಾಡಿಕೊಟ್ಟಿದ್ದ.  ತನಗೆ ಸಿನೆಮಾಕ್ಕೆ ಹೋಗಲು ಒಪ್ಪಿಗೆ ದೊರೆತರೆ ಏನಾದರೂ ಸಬೂಬು ಹೇಳಿ ಅಕ್ಕನನ್ನೂ ತನ್ನೊಂದಿಗೆ ಕರೆದೊಯ್ಯುತ್ತಿದ್ದ. ಅವರಿಬ್ಬರ ಹೊಂದಾಣಿಕೆಯನ್ನು ನೋಡಿ ಸರೋಜಿನಿ ಮಗಳ ಬಗ್ಗೆ ನಿಶ್ಚಿಂತಳಾಗಿರುತ್ತಿದ್ದರು. .  

ಒಮ್ಮೆ ತನ್ನ ತಾಯಿ ನಡೆಯುವಾಗ ಬಿದ್ದು ಕಾಲು ಮುರಿದುಕೊಂಡಿದ್ದಾರೆ ಎಂಬ ಸುದ್ದಿ ಬಂದಾಗ ಸರೋಜಿನಿ ಕೂಡಲೇ ಅವರ ಸಹಾಯಕ್ಕೆಂದು ಊರಿಗೆ ಹೊರಟು ನಿಂತರು.  ಆದರೆ ಮೋಹನ ಅಷ್ಟೇನೂ ಸಹಕಾರ ನೀಡಲಿಲ್ಲ.  ಆದರೆ ಜಂಪಿ ಮಾತ್ರ ತಾನು ಮನೆಯನ್ನು ನೋಡಿಕೊಳ್ಳುವುದಲ್ಲದೇ ಅಡುಗೆಯನ್ನೂ ಮಾಡಿಹಾಕುತ್ತೇನೆ ಎಂದು ಆಶ್ವಾಸನೆ ನೀಡಿ ಸರೋಜಿನಿಗೆ ತೌರಿಗೆ ಹೋಗಲು ಅನುವು ಮಾಡಿ ಕೊಟ್ಟಿದ್ದಳು.  

ಅದೇ ಮುಂದೆ ಒಂದು ಸಲ ಜಂಪಿಯ ನೀಟ್ ಪರೀಕ್ಷೆ, ಗಿರಿಯ s.s.l.c. ಪರೀಕ್ಷೆಗಳು ನಡೆದಿದ್ದವು.  ಸರೋಜಿನಿ ಊಟ, ತಿಂಡಿಯನ್ನು ಕೂಡ ಅವರು ಕುಳಿತಲ್ಲೇ  ಸಪ್ಲೈ ಮಾಡುತ್ತಿದ್ದಳು.  ಮಕ್ಕಳ ಈ ಪರೀಕ್ಷೆ ತಂದೆತಾಯಿಯರಿಗೂ ಹಣದ ಹೊಂದಾಣಿಕೆಯ ದೃಷ್ಟಿಯಿಂದ ಪರೀಕ್ಷೆಯೇ ಅಲ್ಲವೇ?.   ಆಗ ಮೋಹನನ ತಾಯಿಯ ಕಣ್ಣಿನ ಪೊರೆ ತೆಗೆಯುವದಿದೆ ಎಂಬ ವರ್ತಮಾನ ಬಂದಿತು.  ಕೂಡಲೇ ಹೊರಡು ಎಂದು ಮೋಹನ ಸರೋಜಿನಿಗೆ ಹೇಳಿದ.  ಆದರೆ ತನ್ನ ಮಹತ್ವದ ಪರೀಕ್ಷೆ ಇದ್ದುದರಿಂದ ತನಗೆ ಮನೆಯನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂದು ಜಂಪಿ ಖಂಡಿತವಾಗಿ ಹೇಳಿದಳು.  'ತಂದೆತಾಯಿಯರ ಆರೋಗ್ಯಕ್ಕಿಂತ ಮಹತ್ವದ ವಿಷಯ ಯಾವುದೂ ಇಲ್ಲ. ಪರೀಕ್ಷೆ ಹೇಗಾದರೂ ಆಗುತ್ತದೆ.  ನೀನು ಹೊರಡು' ಎಂದು ಮೋಹನ ಹೆಂಡತಿಗೆ ಆದೇಶಿಸಿದ.  'ಹೌದು ಮಕ್ಕಳು ತಂದೆತಾಯಿಯರನ್ನು ನೋಡಿಕೊಳ್ಳಲೇ ಬೇಕು.  ಆದ್ದರಿಂದ ನೀವು ಎರಡು ದಿನ ಹೋಗಿ ಬನ್ನಿರಿ,  ನಮ್ಮ ಪರೀಕ್ಷೆಯ ಸಮಯದಲ್ಲಿ ಅಮ್ಮನನ್ನು ಕಳುಹಿಸುವುದು ಬೇಡ' ಎಂದು ಜಂಪಿ ಸ್ಪಷ್ಟವಾಗಿ ಹೇಳಿದಳು.  ಮನೆಯಲ್ಲಿ ದೊಡ್ಡ ರಾದ್ಧಾಂತವಾಯಿತು. 'ನೋಡು, ಜಂಪಿಗೆ ಇಲ್ಲಸಲ್ಲದ ಸಮಾನತೆಯ ಬಗ್ಗೆ ಕಲಿಸಿದ್ದರ ಪರಿಣಾಮ ಏನಾಯಿತು ಎಂದು?' ಎಂದೆಲ್ಲ ಮೂದಲಿಸಿದರೂ ಮೋಹನನಿಗೆ ಹೋಗಲೇ ಬೇಕಾಯಿತು.  ಜಂಪಿಯದು ಉದ್ಧಟತನ ಎನ್ನಿಸಿದರೂ ಅವಳ ತಾರ್ಕಿಕ ವಾದಕ್ಕೆ ಎಲ್ಲರೂ ತಲೆದೂಗಲೇ ಬೇಕಾಯಿತು. ಇಂಥ ಎಷ್ಟೋ ಪ್ರಸಂಗಗಳಿಂದಾಗಿ ಜಂಪಿಯ ಹಾಗೂ ಜಂಪಿಯ ಸಂಪರ್ಕಕ್ಕೆ ಬಂದ  ಎಷ್ಟೋ ಜನರ ವಿಚಾರಧಾರೆ ಬದಲಾಗತೊಡಗಿತ್ತು.  ಮುಂದೆ ಒಂದು ದಿನ ಅದು ತನಗೇ ಮುಳುವಾಗುತ್ತದೆಂದು ಮೋಹನ ಎಂದೂ ಎಣಿಸಿರಲಿಲ್ಲ.  

ಜಂಪಿ ಹಾಗೂ ಗಿರಿ ಇಬ್ಬರೂ ಕಾಲೇಜಿನಲ್ಲಿಕಲಿಯುತ್ತಿದ್ದರು.  ಆಗ ಅಕಸ್ಮಾತ್ ನಡೆದ ಒಂದು ದುರ್ಘಟನೆಯಲ್ಲಿ ಗಾಯಗೊಂಡ ಸರೋಜಿನಿ ಚೇತರಿಸಿಕೊಳ್ಳಲೇ ಇಲ್ಲ. ಮಕ್ಕಳಿಬ್ಬರೂ ತಾಯಿಯನ್ನು, ಮೋಹನ ಹೆಂಡತಿಯನ್ನು ಕಳೆದುಕೊಳ್ಳಬೇಕಾಯಿತು.  ಆ ಮಾತಿಗೆ ಐದಾರು ತಿಂಗಳುಗಳಾಗಿರಬಹುದು, ಹುಡುಗರ ಅಡುಗೆಗೆ ತೊಂದರೆಯಾಗುತ್ತದೆ ಎಂದು ಪ್ರಾರಂಭವಾದ ರಾಗ ಮೋಹನ ಎರಡನೇ ಮದುವೆಯಾಗುವವರೆಗೆ ಮುಂದುವರೆಯಿತು.  ಬೆಳೆದ ಮಕ್ಕಳ ಮದುವೆಮಾಡುವುದು ಬಿಟ್ಟು ಇದೇನು ಎಂದು ನಾಲ್ಕು ಜನ  ಆಡಿಕೊಂಡರು.  ಆದರೆ ಮಕ್ಕಳೇ ಅದರಲ್ಲೂ ಜಂಪಿ ಅಪ್ಪನ ಪರ ವಹಿಸಿ ಮಾತನಾಡಿದಳು.  'ಅಪ್ಪನ ಜೀವನ ಅಪ್ಪನದು. ಅದನ್ನು ಹೇಗೆ ನಡೆಸಬೇಕು ಎನ್ನುವುದು ಅವರ ಮರ್ಜಿ. ನಾವೇಕೆ ಅದರಲ್ಲಿ ತಲೆ ಹಾಕಬೇಕು?' ಎಂದು ಬಲವಾಗಿ ವಾದಿಸಿ ಮಕ್ಕಳಿಬ್ಬರೂ ಆಡುವವರ ಬಾಯಿ ಮುಚ್ಚಿಸಿದರು,  ಮಲತಾಯಿಯ  ಹಾಗೂ ಮಕ್ಕಳ ಸಂಬಂಧ ಅಷ್ಟೊಂದು ಅನ್ಯೋನ್ಯತೆಯಿಂದ ಸಾಗಲಿಲ್ಲ.ಮಕ್ಕಳ ಹಾಗೂ ಹೆಂಡತಿಯ ಮಧ್ಯೆ ತಾಕಲಾಟ ಬಂದಾಗ ತನ್ನದು ಅಸಹಾಯಕ ಪರಿಸ್ಥಿತಿ ಎಂದು ಬಿಂಬಿಸಿ ಮೋಹನ ಸುಮ್ಮನುಳಿದು ಬಿಡುತ್ತಿದ್ದ.  ಬರ ಬರುತ್ತ ಮನೆಯಲ್ಲಿ ಮಲತಾಯಿಯ ಕಾರುಭಾರು ಜೋರಾಗಿ ಮಕ್ಕಳಿಗೆ ಅವರು ಕೂಡು ಎಂದರೆ ಕೂಡು ನಿಲ್ಲು ಎಂದರೆ ನಿಲ್ಲು ಎಂಬ ಪರಿಸ್ಥಿತಿ ಬಂದಿತು.  

ಒಂದು ದಿನ ಜಂಪಿ  ವೇಳೆಗೆ ಸರಿಯಾಗಿ ಮನೆಗೆ ಬರಲಿಲ್ಲ.  ಅವಳು ಬರುವ ಹೊತ್ತಿಗೆ ಮನೆಯವರೆಲ್ಲ ಮಲಗಿ ಬಿಟ್ಟಿದ್ದರು.  ಬಾಗಿಲು ತೆಗೆದ ತಾಯಿ 'ಇಂಥ ಅಶಿಸ್ತೆಲ್ಲ ಈ ಮನೆಯಲ್ಲಿ ನಡೆಯುವದಿಲ್ಲ ನಿನಗೆ ತಕ್ಕ ಶಿಕ್ಷೆಯಾಗಲೇ ಬೇಕು ' ಎಂದು ಹೇಳಿ ಜಂಪಿಯನ್ನು ರಾತ್ರಿಯೆಲ್ಲ ಹೊರಗೆ ನಿಲ್ಲಿಸಿದರು.  ಬೆಳಗಿನ ನಾಲ್ಕು ಗಂಟೆಗೆ ಎಚ್ಚರಾದ ಗಿರಿ ಗಾಬರಿಯಿಂದ ಎದ್ದು ಎಲ್ಲ ಕಡೆಗೆ ನೋಡಿ ಬಾಗಿಲ ತೆಗೆದು ಜಂಪಿಯನ್ನು ಒಳಗೆ ಕರೆದುಕೊಂಡ.  ಮರುದಿನ ತಂದೆಗೆ ಗಿರಿ, ತಾವಿಬ್ಬರೂ ಬೇರೆ ಮನೆಯಲ್ಲಿರುವುದಾಗಿ ತಿಳಿಸಿದ.  ಆಗ ಮೋಹನ ಮಕ್ಕಳನ್ನು ಬಹುವಾಗಿ ರಮಿಸುತ್ತ, ಕಣ್ಣಲ್ಲಿ ನೀರು ತುಂಬಿಕೊಂಡು, ಮೊದಲೇ ನೊಂದುಕೊಂಡಿರುವ ತನ್ನನ್ನು ಒಂಟಿಯಾಗಿ ಬಿಟ್ಟು ಹೋಗಬಾರದೆಂದೂ, ಎಳೆಮಕ್ಕಳ ಮೇಲೆ ಇಷ್ಟೊಂದು ದೌರ್ಜನ್ಯ ಮಾಡುವ ಇವಳೆಂಥ ಹೆಂಗಸೆಂದೂ ಬೈದುಕೊಂಡ.  ಈಗ ಮಾತ್ರ ಜಂಪಿ ತನ್ನ ಸಹನೆಯನ್ನು ಕಳೆದುಕೊಂಡು ಮೋಹನನೊಂದಿಗೆ ಜಗಳಕ್ಕೇ ನಿಂತಳು.  

" ಇದರಲ್ಲಿ ಅವರದೇನು ತಪ್ಪು?  ಮೊದಲೇ ಇಮ್ಮನಿ ವರನಿಗೆ ತನ್ನನ್ನು ಕೊಟ್ಟದ್ದಕ್ಕೆ ಅವರಿಗೆ ತನ್ನ ತಂದೆ ತಾಯಿಯ ಮೇಲೆ ಸಿಟ್ಟಿದೆ.  ಅವರಿಗೆ ಇದು ಮೊದಲ ಮದುವೆ.  ಆದರೆ ಅವರಿಗೆ ದೊರೆತದ್ದು ಜೇವನದ ಸಾರವನ್ನೆಲ್ಲ ಅನುಭವಿಸಿ ಹಳತಾದ ಗಂಡ.  ಜೀವನದಲ್ಲಿ ಜಿಗುಪ್ಸೆ ಹುಟ್ಟಲು ಅಷ್ಟು ಸಾಕಲ್ಲ?  ಅಂಥದ್ದರಲ್ಲಿ ತನ್ನ ಗಂಡ ತನ್ನ ಮೊದಲ ಹೆಂಡತಿಯೊಂದಿಗೆ ಸಂಸಾರ ಮಾಡಿದ ದ್ಯೋತಕವಾಗಿ ಹುಟ್ಟಿದ ಎರಡು ಮಕ್ಕಳು ಸದಾ ಕಣ್ಮುಂದೆ ಇದ್ದು ಅದರ ನೆನಪು ಕೊಡುತ್ತಿರುವಾಗ ಅವರಿಗೆ ತನ್ನ ಮೇಲೆ ತನಗೇ ಸಿಟ್ಟು ಬಂದಿರುತ್ತದೆ. ಆ ಸಿಟ್ಟನ್ನು ಯಾರ ಮೇಲೆ ತೆಗೆಯಬೇಕು?  ನಿಮ್ಮ ಮೇಲೆ, ತಂದೆ ತಾಯಿಯ ಮೇಲೆ ತೆಗೆಯಲು ಸಾಧ್ಯವಿಲ್ಲ.  ಅಂದಮೇಲೆ ನಮ್ಮ ಮೇಲೇ ತೆಗೆಯಬೇಕಲ್ಲ? ;

"ಅಪ್ಪಾ, ಅವರೇಕೆ ನಮ್ಮನ್ನು ಪ್ರೀತಿಸಬೇಕು?  ನಮ್ಮ ಮೇಲೆ ಪ್ರೀತಿ ಹುಟ್ಟಲು ಅವರೇನು ನಮ್ಮ ಹುಟ್ಟಿನಿಂದ ನಮ್ಮನ್ನು ಸಾಕಿದ್ದಾರೆಯೇ?  ನಾವೇನು ಅವರ ರಕ್ತ ಹಂಚಿಕೊಂಡು ಹುಟ್ಟಿದವರೇ? ಹೆಣ್ಣಿನ ಹೃದಯ ಮೃದು ಎನ್ನುತ್ತಾರೆ.  ಆದ್ದರಿಂದ ಅವರು ನಮಗೆ ಅಡುಗೆ ಮಾಡಿ ಹಾಕುತ್ತಾರೆ.  ಅಪ್ಪ, ನಮ್ಮ ಇಂದಿನ ಪರಿಸ್ಥಿತಿಗೆ ಕಾರಣ ನೀವು. ಅವರಲ್ಲ.  ನಾವು ನಿಮ್ಮ ರಕ್ತ ಹಂಚಿಕೊಂಡು ಹುಟ್ಟಿದವರು.  ನೀವು ಎಂದಾದರೂ ನಮ್ಮ ಯೋಗಕ್ಷೇಮದ ಬಗ್ಗೆ ಯೋಚಿಸಿದಿರಾ?  ನಿಮ್ಮ ಅನುಕೂಲಕ್ಕಾಗಿ ಮಾಡುವೆ ಮಾಡಿಕೊಂಡಿರಿ.  ಅದು ನಿಮ್ಮ ಜೀವನ.  ನೀವು ಬೇಕಾದದ್ದನ್ನು ಮಾಡಬಹುದು.  ಆದರೆ ನಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ನಿಮ್ಮ ಕರ್ತ್ಯವ್ಯವಲ್ಲವೇ?  ೧೦೦೦ ರೂಪಾಯಿ ಕೊಟ್ಟಿದ್ದರೆ ನಮಗೆ ಅಡುಗೆ ಮಾಡಿಹಾಕಲು ಯಾರಾದರೂ ಬರುತ್ತಿದ್ದರು.  ಅಡುಗೆಯವರಿದ್ದರೆ ತಾಯಿಗೆ ನಮ್ಮ ಮೇಲೆ ಇಷ್ಟು ಸಿಟ್ಟು ಬರುತ್ತಿರಲಿಲ್ಲವೇನೋ? ಒಂದು ವೇಳೆ ನಮ್ಮ ಹೊಸ ತಾಯಿಗೆ ಅವರ ಮೊದಲ ಗಂಡನಿಂದ ಹುಟ್ಟಿದ ಎರಡು ಮಕ್ಕಳಿದ್ದರೆ ನೀವು ಅವರನ್ನು ನೋಡಿಕೊಳ್ಳುತ್ತಿದ್ದಿರಾ? ನಿಮಗೆ ಇಲ್ಲದ ಅಂತಃಕರಣ ಅವರಿಗೆ ಹೇಗೆ ಬರಬೇಕು?"

ಜಂಪಿ ಕೇಳಿದ  ಯಾವ ಮಾತಿಗೂ ಉತ್ತರ ಹೇಳಲು ಅಸಮರ್ಥನಾದ ಮೋಹನ.  ಅವನು ಏನು ಹೇಳುತ್ತಿದ್ದನೋ, ಅಷ್ಟರಲ್ಲಿ ಇದೆಲ್ಲದರ ಪರಿಣಾಮ ಏನೋ ಎಂದು ಯೋಚಿಸುತ್ತ ಒಳಗೇ ಕುಳಿತ ಮಲತಾಯಿ ಒಳಗಿನಿಂದ ಎದ್ದು ಬಂದವರೇ ಜಂಪಿಯ ಕೈ ಹಿಡಿದು, 

" ನನ್ನನ್ನು ಕ್ಷಮಿಸು ಮಗಳೇ , ನನ್ನ ಮನಸ್ಸನ್ನು ಇಷ್ಟೊಂದು ಸ್ವಚ್ಛವಾಗಿ ಓದಿದೆ. ಇಷ್ಟೊಂದು ಶಿಕ್ಷೆ ಕೊಟ್ಟ ನನ್ನನ್ನು ತಪ್ಪಾಗಿ ತಿಳಿಯಲಿಲ್ಲ.  ನಿನ್ನಂಥ ಮಾಗಿದ ಮನಸ್ಸಿನ ಹುಡುಗೆಯನ್ನು ತಿಳಿದುಕೊಳ್ಳದೆ ನಾನು ಸಣ್ಣವಳಾಗಿಬಿಟ್ಟೆ. ನನ್ನನ್ನು ಕ್ಷಮಿಸುವಿ ಎಂದಾದರೆ ನೀವಿಬ್ಬರೂ ಬೇರೆ ಕಡೆಗೆ ಹೋಗಬೇಡಿರಿ."  ಎಂದು ಕೇಳಿಕೊಂಡರು. 

ಒಬ್ಬ ಸೂಕ್ಷ್ಮ ಮನಸ್ಸಿನ ಹೆಣ್ಣು ಮಾತ್ರ ಮತ್ತೊಂದು ಹೆಣ್ಣಿನ ಅಳಲನ್ನು ತಿಳಿಯಬಹುದು.  ಜಂಪಿ ಆ ಕ್ಷಣದಲ್ಲಿ ಒಬ್ಬ ಮಲಮಗಳಾಗಿ  ಯೋಚಿಸದೇ  ಒಬ್ಬ ಹೆಣ್ಣಾಗಿ ಯೋಚಿಸಿದಳು.  'ಮಲತಾಯಿ ಮಕ್ಕಳನ್ನು ಉರಿಸುತ್ತಾಳೆ' ಎಂದು ಎಲ್ಲರ ಮನಸ್ಸಿನಲ್ಲಿ ಬಿತ್ತಿದ ಸಮಾಜದ ಯೋಚನೆಯನ್ನು ಅಳಿಸಿ ಹಾಕಲು ಜಂಪಿಯಂತಹ ಸ್ವತಂತ್ರ ವಿಚಾರ  ಶಕ್ತಿಯುಳ್ಳವರಿದ್ದರೆ, 'ಮಲತಾಯಿ' ಎಂದು ಬಿರುದಾಂಕಿತರಾದ ಎಷ್ಟೋ ತಾಯಂದಿರ ಬಾಳಿಗೆ ತುಸುವಾದರೂ ನೆಮ್ಮದಿ ದೊರೆತೀತು.  '' ಪಾಪ, ಗಂಡಸು.  ಅಸಹಾಯಕ .  ಅವನೇನು ಮಾಡಲು ಸಾಧ್ಯ? ಎಂಬ  ಸಹಾನುಭೂತಿಯನ್ನು ಗಿಟ್ಟಿಸುವ ಗಂಡಸರು ತಮ್ಮ ಆಷಾಢಭೂತಿತನವನ್ನು ಬಿಡಬಹುದು.  ತಮ್ಮ ಸುಖವನ್ನು ಮನಸ್ಸಿನಲ್ಲಿಟ್ಟುಕೊಂಡು ಬೇರೆನೇನೋ ನೆಪ ಹೇಳಿ ಮದುವೆಯಾಗುವ ಗಂಡಸರಿಗೂ  ಜಂಪಿಯಂಥವರಿಂದ ಪಾಠ ಹೇಳಿಸಬೇಕಾದೀತು. 

-ಭಾರತಿ ತೊರಗಲ್ಲ 
೯೪೮೧೫೨೧೧೫೦  

ಸುದ್ದಿ ಓದಿ