ತಾಳಿಕೋಟಿ

ಟೀಕಿಸುವವರಿಗೆ ಉತ್ತರಿಸುವ ಅಗತ್ಯ ನನಗಿಲ್ಲ

ಟೀಕಿಸುವವರಿಗೆ ಉತ್ತರಿಸುವ ಅಗತ್ಯ ನನಗಿಲ್ಲ

ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಡಹಳ್ಳಿ ಚಾಲನೆ

ತಾಳಿಕೋಟಿ: ಟೀಕಿಸುವವರಿಗೆ ಉತ್ತರ ಕೊಡುವುದಕ್ಕಾಗಿ ಕ್ಷೇತ್ರದ ಜನರು ನನಗೆ ಶಾಸಕನಾಗಿ ಆಯ್ಕೆ ಮಾಡಿ ಕಳಿಸಿಲ್ಲ. ವಿನಾಕಾರಣ ಹೊಟ್ಟೆಕಿಚ್ಚಿನಿಂದ ಟೀಕಿಸುವವರಿಗೆ ನಾನು ಮಾಡಿದ ಕೆಲಸಗಳೇ ಉತ್ತರ ಕೊಡುತ್ತವೆ. ನನ್ನನ್ನು ನಂಬಿದ ಜನತೆಯ ಬದುಕು ಕಟ್ಟಿಕೊಡುವುದು ನನ್ನ ಮುಖ್ಯ ಗುರಿಯಾಗಿದೆ ಎಂದು ಶಾಸಕ ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.

ಪಟ್ಟಣದಲ್ಲಿ ಪೌರಾಡಳಿತ ಇಲಾಖೆಯ ವ್ಯಾಪ್ತಿಯ ಸನ್ 2022-23ನೇ ಎಸ್.ಎಫ್.ಸಿ. ಅನುದಾನದಲ್ಲಿ ರೂ. 30 ಲಕ್ಷ ಮೊತ್ತದ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 3500 ಕೋಟಿ ಅನುದಾನವನ್ನು ತಂದು ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇನೆ.

ತಾಳಿಕೋಟಿ ಪಟ್ಟಣವನ್ನು ಒಂದು ಸುಂದರ ಸ್ವಚ್ಚ ಹಾಗೂ ಹಸಿರಿನಿಂದ ಕಂಗೊಳಿಸುವ ನಗರವನ್ನಾಗಿ ಮಾಡಲು ರೂ. 40 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದೇನೆ. ಅಭಿವೃದ್ಧಿಯ ಕಾರ್ಯಗಳಲ್ಲಿ ನಾನೆಂದೂ ಜಾತಿರಾಜಕಾರಣ ಮಾಡಿಲ್ಲ. ಎಲ್ಲ ವರ್ಗದ ಜನರ ಹಿತ ಕಾಪಾಡುವ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಕೆಲಸ ಮಾಡಿ ಎಂದು ನನ್ನ ಬಳಿ ಬಂದದವರೆಲ್ಲರ ಕೆಲಸ ನಾನು ಮಾಡಿದ್ದೇನೆ. ಅವರು ಯಾವ ಜಾತಿಗೆ ಸೇರಿದವರೆಂದು ನಾನೆಂದೂ ನೋಡಿಲ್ಲ ಎಂದರು.

ಕೆಲವು ನಮ್ಮ ಪಕ್ಷದ ಮುಖಂಡರು ದುರುದ್ದೇಶದಿಂದ ವಿನಾಕಾರಣ ನನ್ನನ್ನು ಟೀಕಿಸುತ್ತಿದ್ದಾರೆ. ನಾನು ಜನರ ಮೇಲೆ ದಬ್ಬಾಳಿಕೆ ಮಾಡುತ್ತೇನೆಂದು ಹೇಳುತ್ತಾರೆ ನಾನು ಯಾವುದಾದರೂ ಒಂದು ಸಮಾಜದ ಮೇಲೆ ದಬ್ಬಾಳಿಕೆ ಮಾಡಿದ ಉದಾಹರಣೆ ಕೊಟ್ಟರೆ ನಾನು ರಾಜಕೀಯದಿಂದಲೇ ನಿವೃತ್ತನಾಗುತ್ತೇನೆ. ಇಲ್ಲಿ ನಡೆದ ಕೆಲವು ಘಟನೆಗಳಿಗೆ ನಾನು ಕಾರಣನಲ್ಲ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹಗಲು ನನ್ನನ್ನು ಟೀಕಿಸುವವರು ರಾತ್ರಿಯಲ್ಲಿ ಯಾರ ಮನೆಗೆ ಹೋಗಿ ಭೇಟಿಯಾಗುತ್ತಾರೆಂಬುದು ನನಗೆ ಗೊತ್ತಿದೆ ಎಂದ ಅವರು ಅಂಥವರ ಮಾತುಗಳಿಗೆ ಬೆಲೆ ಕೊಡುವ ಅಗತ್ಯ ಇಲ್ಲ. ಮಾಜಿ ಶಾಸಕರು ಅವರು ಮಾಡಿದ ಕೆಲಸಗಳಿಗೆ ನಾನು ಲೇಬಲ್ ಹಚ್ಚಿ ನಾನು ಮಾಡಿದ್ದೇನೆಂದು ಹೇಳುತ್ತೇನೆಂದು ಹೇಳಿದ್ದಾರೆ. ಅಂಥಹ ಕೆಟ್ಟ ಪರಿಸ್ಥಿತಿ ನನಗೆ ಬಂದಿಲ್ಲ. ನಾನು ನನ್ನ ಅವಧಿಯಲ್ಲಿ ಮಾಡಿದ ಕೆಲಸಗಳ ಒಂದು ಕಿರುಹೊತ್ತಿಗೆಯನ್ನೇ ಹೊರತಂದಿದ್ದೇನೆ. ಅದರಲ್ಲಿ ಎಲ್ಲವೂ ಇದೆ. ನೀವೇ ನೋಡಿಕೊಳ್ಳಿ, ಸಾಕ್ಷ್ಯಗಳ ಆಧಾರದಲ್ಲಿ ಮಾತನಾಡಿ ಬಾಯಿ ಚಪಲಕ್ಕಾಗಿ ಅಲ್ಲ. ಈ ಬಾರಿಯು ನನ್ನ ಗೆಲವು ಖಚಿತ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ಮುಖಂಡ ಖಾಜಾಹುಸೇನ ಡೋಣಿ ಅವರು ಮಾತನಾಡಿ ಶಾಸಕ ನಡಹಳ್ಳಿ ನುಡಿದಂತೆ ನಡೆಯುವ ವ್ಯಕ್ತಿ ಅಭಿವೃದ್ಧಿಯ ವಿಷಯದಲ್ಲಿ ಅವರೆಂದೂ ಜಾತೀಯತೆ ಮಾಡಿದವರಲ್ಲ. ನಾವು ಅನುದಾನ ಕೊಡಿ ಎಂದು ಕೇಳದಿದ್ದರೂ ನಮಗೆ ಅನುದಾನ ಕೊಟ್ಟಿದ್ದಾರೆ ಮಾತ್ರವಲ್ಲ, ನಮ್ಮ ಸಮಾಜದ ಹಲವಾರು ಬಡ ಜನರಿಗೆ ಸಹಾಯವನ್ನೂ ಮಾಡಿದ್ದಾರೆ. ಅವರ ಬಳಿ ಸಾಕಷ್ಟು ಸಂಪತ್ತಿದೆ. ಕೇವಲ ಜನ ಸೇವೆ ಮಾಡಲಿಕ್ಕಾಗಿ ರಾಜಕಾರಣಕ್ಕೆ ಬಂದಿದ್ದಾರೆ. ಅವರ ಪಕ್ಷವನ್ನು ನೋಡದೆ ಅವರನ್ನು ನೋಡಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಾವು ಅವರನ್ನು ಬೆಂಬಲಿಸುತ್ತೇವೆ ಎಂದರು.

ಈದ್ಗಾ ಕಮಿಟಿ ಉಪಾಧ್ಯಕ್ಷ ಅಬ್ದುಲ್ರಜಾಕ್ ಮನಗೂಳಿ ಹಾಗೂ ಧಾಮರ್ಿಕ ಮುಖಂಡ ಸೈಯದ್ ಶಕೀಲ ಅಹ್ಮದ ಖಾಜಿ ಮಾತನಾಡಿ ಶಾಸಕ ನಡಹಳ್ಳಿ ಸರ್ವ ಸಮಾಜದವರನ್ನು ನನ್ನವರೆಂದು ಅಪ್ಪಿಕೊಳ್ಳುವ ವ್ಯಕ್ತಿ ಅವರೆಂದೂ ಜಾತಿ ಭೇದ ಮಾಡಿದವರಲ್ಲ ಅವರು ಕೊಡುಗೈ ದಾನಿಗಳಾಗಿದ್ದು, ಸಹಾಯ ಕೇಳಿದವರಿಗೆಂದು ನಿರಾಶೆಗೊಳಿಸುವದಿಲ್ಲ ಎಂದರು.

ಈ ಸಮಯದಲ್ಲಿ ಈದ್ಗಾ ಸಮಿತಿ ಅಧ್ಯಕ್ಷ ಮಾಸೂಮ್ಸಾಬ ಕೆಂಭಾವಿ, ಕಾರ್ಯದರ್ಶಿ  ಎ.ಡಿ. ಯಕೀನ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಮುದಕಪ್ಪ ಬಡಿಗೇರ, ಪ್ರತಿನಿಧಿ ಮಹೆಬೂಬ ಲಾಹೋರಿ, ಮಂಜೂರಅಹ್ಮದ್ ಬೇಪಾರಿ, ಈದ್ಗಾ ಕಮೀಟಿ ಸದಸ್ಯರಾದ ಗನಿಸಾಬ ಲಾಹೋರಿ, ಹಸನ್ ಕೊರ್ಕಿ , ಅಬ್ಬಾಸ ನಿಡಗುಂದಿ, ಸಿಕಂದರಸಾಬ ವಠಾರ, ಮುತ್ರುಜಾ ಮೇತ್ರಿ, ಗಣ್ಯರಾದ ಮಹೆಬೂಬಸಾಬ ಮುದ್ನಾಳ, ಖಾಜಾಹುಸೇನ ಮುಲ್ಲಾ, ರಫೀಕ್ ಬೇಪಾರಿ, ಸನಾ ಕೆಂಭಾವಿ, ಬಿಜಾನಲಿ ನೀರಲಗಿ, ಖಾಸೀಮ ಅವಟಿ, ಹಸನ್ ಮನಗೂಳಿ, ಇಬ್ರಹೀಂ ಬೇಪಾರಿ ಮತ್ತಿತರರು ಇದ್ದರು 

ಸುದ್ದಿ ಓದಿ