ಸಾಧನೆಗೆ ಅಸಾಮಾನ್ಯನಾಗಿಯೇ ಹುಟ್ಟಬೇಕಾಗಿಲ್ಲ: ಡಾ.ಪ್ರಭುಗೌಡ
ತಾಳಿಕೋಟಿ: ಮನುಷ್ಯ ಯಾವುದೇ ಒಂದು ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆಯನ್ನು ಮಾಡಬೇಕಾದರೆ ಅವನು ಅಸಾಮಾನ್ಯ ಮನುಷ್ಯನಾಗಿಯೇ ಹುಟ್ಟಬೇಕಾಗಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯೂ ಶ್ರದ್ಧೆ, ಛಲ ಹಾಗೂ ನಿರಂತರ ಪರಿಶ್ರಮದ ಮೂಲಕ ದೊಡ್ಡ ಸಾಧನೆಯನ್ನು ಮಾಡಬಹುದಾಗಿದೆ ಎಂದು ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ಪಟ್ಟಣದ ರಾಜವಾಡೆಯಲ್ಲಿ ಖಾಸ್ಗತೇಶ್ವರ ಮಠದ ವತಿಯಿಂದ ಹಮ್ಮಿಕೊಂಡ ಅಜ್ಜನ ಉತ್ಸವ ಪ್ರವಚನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಶ್ರೀಮಠದಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಇಂದು ನನಗೆ ಸಿಕ್ಕ ಈ ಗೌರವ ನನಗೆ ಮಾತ್ರ ಸೀಮಿತವಾದ ಗೌರವವಾಗಿರದೆ ನನ್ನ ಜೊತೆಯಲ್ಲಿ ನನ್ನ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಸುಮಾರು 20 ಜನ ವೈದ್ಯರು ಹಾಗೂ 200 ಜನ ಸಿಬ್ಬಂದಿಗಳಿಗೂ ಸಲ್ಲುತ್ತದೆ. ಅವರ ಸಹಕಾರದಿಂದಲೇ ಇದೆಲ್ಲವೂ ಸಾಧ್ಯವಾಗಿದೆ ಎಂದ ಅವರು ಆರೋಗ್ಯದ ಕುರಿತು ನಿರ್ಲಕ್ಷ್ಯ ಮಾಡಬೇಡಿ, ಆರೋಗ್ಯ ನಿಜವಾದ ಸಂಪತ್ತಾಗಿದೆ, ಆರೋಗ್ಯವಂತ ಸಮಾಜದಿಂದ ಮಾತ್ರ ಸದೃಢ ದೇಶದ ನಿರ್ಮಾಣ ಸಾಧ್ಯ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಚಿಕ್ಕಮಗಳೂರು ಎಸ್.ಪಿ. ಶ್ರೀಶೈಲ ಮೇಟಿ, ತಹಶೀಲ್ದಾರ ಶ್ರೀಧರ ಗೋಟೂರ, ರಂಗಕಲಾವಿದ ಮಹಾಂತೇಶ ಇಂಗಳಗಿ, ಸಹಕಾರ ರತ್ನ ವಿಠ್ಠಲಸಿಂಗ್ ಹಜೇರಿ, ಇಸ್ರೋ ವಿಜ್ಞಾನಿ ಹಣಮಂತ ಬಳೂರಗಿ, ಹಾಗೂ ಛಾಯಾಗ್ರಾಹಕ ಪುನೀತ್ ಶೆಟ್ಟಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಿದ್ಧಲಿಂಗ ದೇವರು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಪ್ರವಚನಕಾರ ಪೂಜ್ಯ ಡಾ. ಶಿವಲಿಂಗಯ್ಯ ಶಾಸ್ತ್ರಿಗಳು ಇದ್ದರು