ಕಥೆ ಮತ್ತು ವಿಶೇಷ ಲೇಖನಗಳು

ವಾಸಂತಿ ಮತ್ತು ಮರವಂತಿ

ವಾಸಂತಿ ಮತ್ತು ಮರವಂತಿ

- ಅನಿತಾ ಮಾಲಗತ್ತಿ

ಆ ದಿನ ಮನೆಯಲ್ಲಿ ತುಂಬಿದ ಜನರೆಲ್ಲ ಅವರವರ ಊರಿಗೆ, ಮನೆಗಳಿಗೆ ತೆರಳಿದ ಮೇಲೆ ವಾಸಂತಿ ಮನೆಯೆಲ್ಲ ಸ್ವಚ್ಛ ಮಾಡಿ ನೀರು ಹಾಕಿ ತಂಪು ಮಾಡಿ ದೀಪ ಹಚ್ಚಿಟ್ಟು ಇನ್ನೂ ವೇಳೆ ಇದೆ ಎಂದುಕೊಂಡು ಕದ ಮುಂದಿಟ್ಟು ಮೆಲ್ಲನೆ ತೋಟದ ಕಡೆಗೆ ಸಾಗಿದಳು. ಅವಳ ಮನಸ್ಸು ಇಂದೂ ರೋಸಿ ಹೋಗಿತ್ತು. ಭಾವನ ಹೆಂಡತಿ, ಮೈದುನನ ಹೆಂಡತಿ ಹಾಗೂ ಅವರವರ ತವರಿನಿಂದ ಬಂದ ಅವರವರ ಬಳಗದೆದುರು ಬಾಯಿಗೆ ಬಂದಂತೆ ಮಾತನಾಡಿದ್ದರು. ನಿತ್ಯವೂ ಮಾಡುವ ಕೆಲಸಗಳಲ್ಲಿಯೇ ತಪ್ಪು ಹುಡುಕಿ ಆಡಿಕೊಳ್ಳುತ್ತಿದ್ದರು. ತಾನಾದರೂ ಏಕೆ ಹಾಗೆ ಮಾಡಿದೆ ಎಂದು ಸ್ವತಃ ಶಪಿಸಿಕೊಳ್ಳುತ್ತಿದ್ದಳು. 

ದೊಡ್ಡಮ್ಮ ನನಗೆ ನೀನೆ ಫ್ರಾಕ್ ಹಾಕು, ದೊಡ್ಡಮ್ಮ ನೀನೇ ತಲೆ ಬಾಚು, ಬಲೂನ ಊದಿಕೊಡು ಅಂತೆಲ್ಲ ಮಕ್ಕಳು ತನ್ನ ಸುತ್ತಲೂ ಸುತ್ತಿದರೆ ತನ್ನ ತಪ್ಪೇನು? ಮಕ್ಕಳಾಗದೇ ಇದ್ದುದ್ದಕ್ಕೂ, ಮಕ್ಕಳೇ ತನ್ನ ಹಿಂದೆ ಮುಂದೆ ಸುತ್ತುವುದಕ್ಕೂ ಸಂಬಂಧವೇನು? ಅವಳು ಬಿಡಿಸಲಾಗದ ಕಗ್ಗಂಟಾಗಿತ್ತು. 2-3 ಮಕ್ಕಳಿದ್ದ ಅವರು ಮಕ್ಕಳನ್ನು ಹೊಡೆಯುವುದು ಗದರುವುದು ಮಾಡಿದಗೊಮ್ಮೆ ವಾಸಂತಿ ಮಕ್ಕಳನ್ನು ರಮಿಸಿ ಮುದ್ದಿಸಿ ಶಾಂತಮಾಡುತ್ತಿದ್ದಳು. ಮನೆಯ ಎಲ್ಲರೂ ಟಿ.ವ್ಹಿ. ಮುಂದೆ ಜಪ ಮಾಡಿದರೂ ತಾನು ಮಾತ್ರ ಮಕ್ಕಳ ಜೊತೆ ಆಟವಾಡಿತ್ತಿದ್ದಳು. ಅವರಿಗೆ ತಿಂಡಿ-ತೀರ್ಥ ಕೊಡುತ್ತಾ ತೋಟದಲ್ಲಿ ಕೂಡಿಸಿಕೊಂಡು ಕಥೆ ಹೇಳುತ್ತಿದ್ದುದರಿಂದ ಸಹಜವಾಗಿಯೇ ಮಕ್ಕಳು ಅವಳಿಂದ ಆಕಷರ್ಿತರಾಗುತ್ತಿದ್ದರು. 

ನಿತ್ಯದಂತೆ ತೋಟದಲ್ಲಿ ಸದಾ ನಳನಳಿಸುತ್ತಿರುವ ಆ ಗಿಡದ ನೆರಳಿನಲ್ಲಿ ಕಲ್ಲು ಹಾಸಿನ ಮೇಲೆ ಕುಳಿತು ಮುಂಜಾನೆಯಿಂದ ನಡೆದ ಎಲ್ಲಾ ಘಟನೆಗಳನ್ನು ನೆನಪಿಸಿಕೊಂಡು ಅಳುತ್ತಿದ್ದಳು. ಇಲ್ಲಿ ಅವಳು ಬಿಕ್ಕಿ ಬಿಕ್ಕಿ ಅತ್ತರೂ ಯಾರೂ ಗಮನಿಸುತ್ತಿರಲಿಲ್ಲ. ಆದರೆ ಆ ಗಿಡದ ಟೊಂಗೆಯೊಂದು ಗಾಳಿಗೆ ಮೆಲ್ಲನೆ ಸವರಿ, ಸಂತೈಸಿದಾಗ ಯಾರೋ ಕಣ್ಣೀರು ತೊಡೆದು ತಬ್ಬಿಕೊಂಡ ಅನುಭವ!

ಎಂದಿಗಿಂತ ಇಂದು ಅವಳು ಹೆಚ್ಚು ದುಖಿಃತಳಾದ ಕಾರಣ ಅಳು ನಿಲ್ಲಿಸಲಿಲ್ಲ. ಇದ್ದಕ್ಕಿದ್ದಂತೆ ಮರ ಮಾತನಾಡಿ 'ಅಮ್ಮಾ ಎಂದಂತಾಗಿ ಕಣ್ಣೀರೊರೆಸಿಕೊಂಡು ತುಸು ಭಯದಿಂದ ಸುತ್ತಲೂ ನೋಡಿದಳು. `ಹೆದರಬೇಡ ಅಮ್ಮಾ ನಾನೇ ಮಾತನಾಡಿದ್ದು ಎಂದಿತು ಮರ'

ಆಶ್ಚರ್ಯದಿಂದ `ನೀನಾ' ಎಂದಳು. 

`ಹೌದಮ್ಮಾ, ನಾನೇ ನನ್ನನ್ನೇ ನಿನ್ನ ಮಗಳು ಅಂದು ಕೋ, ನಿನ್ನ ಎಲ್ಲಾ ದುಖಃ ದುಮ್ಮಾನಗಳನ್ನು ನನ್ನಲ್ಲಿ ಹೇಳಿಕೋ, ನಾನು ಯಾರಲ್ಲಿಯೂ ಹೇಳುವುದಿಲ್ಲ, ನಿನಗೆ ದುಖಃದ ಹೊರೆ ಸರಿದು ಮನ ಹಗುರವಾದ ಮೇಲೆ ಇಲ್ಲಿಂದ ಮನೆಯೊಳಗೆ ಹೋಗು ಆಯಿತಾ' ಎಂದಿತು ಮರ. ಸಂತೋಷದಿಂದ ಪುಟ್ಟ ಮರವನ್ನು ಅಪ್ಪಿ ಹಿಡಿದಳು. ಅವಳಿಗರಿವಿಲ್ಲದೇ ಕಣ್ಣೀರು ಬತ್ತಿ ಹೋಗಿತ್ತು.

ಹೀಗೆ ಸಾಗಿದ್ದ ಆ ಮರ ಮತು ವಾಸಂತಿಯ ಸಂಬಂಧ ಬಹು ದಿನಗಳದಾಗಿತ್ತು. ಪ್ರಾರಂಭದಲ್ಲಿ ತುಂಬಾ ಅನ್ಯೋನ್ಯವಾಗಿದ್ದ ಗಂಡ-ಹೆಂಡತಿ ಸಂಬಂಧವೂ ನಿಧಾನವಾಗಿ ಜಾರುತ್ತಿತ್ತು. ಜಾರುಕಂಬನಿಯೊಂದಿಗೆ ಮರದಲ್ಲಿ ತನ್ನೆಲ್ಲ ಅಳಲನ್ನು ತೋಡಿಕೊಳ್ಳುತ್ತಿದ್ದಳು ವಾಸಂತಿ. ಆಗ,

`ಇಲ್ಲಮ್ಮಾ, ಅವರು ಒಳ್ಳೆಯವರೇ, ಆದರೆ ಮನೆಯಲ್ಲಿ, ಉದ್ಯೋಗ ಮಾಡುವ ಸ್ಥಳದಲ್ಲಿ, ಸಮಾಜದಲ್ಲಿ ಅವರಿಗೆ ಮಕ್ಕಳಿಲ್ಲ, ಮಕ್ಕಳಿಲ್ಲ ಎಂದು ಮೂದಲಿಸುವುದರಿಂದ ಹಾಗೆ ವತರ್ಿಸುತ್ತಾರಮ್ಮ ಎಂದು ಸಮಾಧಾನ ಮಾಡುತ್ತಿತ್ತು ಮರ.

ತಾನು ಎಷ್ಟು ಚೆನ್ನಾಗಿ ಅಡುಗೆ ಮಾಡಿದರೂ ಸಹ ಹುಳಿ-ಉಪ್ಪು-ಖಾರಗಳ ನೆವದೊಂದಿಗೆ ಎಣ್ಣೆಯೂ ಮುಖ್ಯವಾಗಿ ಬಿಡುತ್ತದೆ. ನೆಗೆಣ್ಣಿಯೊಬ್ಬಳು ಹುಬ್ಬಳಿಯವಳು, ಒಬ್ಬಳು ಶಿರಶಿಯವಳು, ಇನ್ನೊಬ್ಬಳು ದಾವಣಗೇರಿಯವಳು. ಹೀಗಾಗಿ ಎಲ್ಲರನ್ನೂ ಮೆಚ್ಚಿಸುವುದು ವಾಸಂತಿಗೆ ಅಸಾಧ್ಯವೇ ಆಗಿತ್ತು. ಆದರೆ ಪ್ರಯತ್ನ ಮಾತ್ರ ಮುಂದುವರಿದೇ ಇತ್ತು. ಚಿಕ್ಕ ಚಿಕ್ಕ ವಿಷಯಗಳೇ ದೊಡ್ಡದಾಗಿ ಕೊನೆಗೊಳ್ಳುವುದು ಮಾತ್ರ `ಮಕ್ಕಳಿಲ್ಲದ ಬಂಜೆ' `ಮಕ್ಕಳಿದ್ರೆ ಅರ್ಥ ಆಗತ್ತಿತ್ತು' `ಹೊಟ್ಟೆಯಲ್ಲಿ ಹುಳುವೂ ಹೊರಳಲಿಲ್ಲ ಎಷ್ಟು ಸೊಕ್ಕು' ಬಾಣದಂತಹ ಎಂಬ ಮಾತಿನಿಂದಲೇ. ಬಹಳ ದಿನಗಳ ನಂತರ ತವರಿಗೆ ಹೋದರೆ ಸ್ವತಃ ಸಹೋಧರಿಯರೇ ಮೂದಲಿಸುತ್ತಿದ್ದರು. ಕುಂತರೆ, ನಿಂತರೆ ಮಾತು. ಅವಳಿಗೂ ರೋಸಿಹೋಗಿತ್ತು. ಜೊತೆಗೆ ಇತ್ತೀಚೆಗೆ `ನನ್ನ ಮಗನನ್ನು ದತ್ತು ತೆಗೆದು ಕೋ, ನನ್ನ ಮಗಳನ್ನು ತೆಗೆದುಕೋ' ಎಂಬ ಈಟಿಯಂತಹ ಮಾತು. ಅಂದರೆ ಇವರೆಲ್ಲ ಸೇರಿ ನನಗೆ ಮಕ್ಕಳಗುವುದಿಲ್ಲ ಅಥವಾ ಮಕ್ಕಳಾಗುವುದೇ ಬೇಡ ಅಂತ ನಿರ್ಧರಿಸಿದಂತೆ ಕಾಣುತ್ತದೆ. ಮರಳಿ ಊರಿಗೆ ಬಂದೊಡನೆ ತೋಟದ ಕಡೆಗೆ ಓಡುತ್ತಿದ್ದಳು. ತನ್ನ ಅನಿಸಿಕೆಯನ್ನೆಲ್ಲ ಮರದೊಂದಿಗೆ ಹೇಳಿಕೊಳ್ಳುತ್ತಿದ್ದಳು. ಮರವೂ ಅಷ್ಟೇ ಸಮಾಧಾನವಾಗಿ ಆಲಿಸಿ ಸಮಾಧಾನ ನೀಡುತ್ತಿತ್ತು. ಮರ ಮತು ವಾಸಂತಿಯರ ಚಚರ್ೆ ದೂರದಿಂದ ಗಮನಿಸಿದ್ದ ವಾಸಂತಿಯ ಗಂಡ ಶರತ್,

  `ವಾಸಂತಿ ಒಬ್ಬಳೇ ನೀ ಮರದ ಕೆಳಗೆ ಕುಳಿತು ಮಾತನಾಡುತ್ತೀಯಲ್ಲ, ನನಗೆ ಸರಿ ಕಾಣುವುದಿಲ್ಲ ಯಾರಾದ್ದರೂ ನೋಡಿದರೆ? ನಿನ್ನ ಹುಚ್ಚಿ ಅನ್ನುವುದಿಲ್ಲವೇ?

`ಯಾರ್ರೀ, ನನ್ನ ಹುಚ್ಚಿ ಅನ್ನೋರು ನಾನು ಅವಳೊಡನೆ ಮಾತನಾಡುತ್ತೇನೆ' ಎಂದಾಗ ತಬ್ಬಿಬ್ಬಾಗಿ 

`ಅವಳು' ಎಂದರೆ? ಕೇಳಿದ್ದ

ವಾಸಂತಿ ನಗುತ್ತ ಅದು ಎಲ್ಲರ ದೃಷ್ಟಿಯಲ್ಲಿ ಮರ ಆಗಿರಬಹುದು. ಆದರೆ ನನಗೆ ಮಾತ್ರ `ಮಗಳು' ನನ್ನೆಲ್ಲ ಕಷ್ಟ ಸುಖಗಳನ್ನು ಅವಳೊಂದಿಗೆ ಹಂಚಿಕೊಳ್ಳುತ್ತೇನೆ. ನನಗೆ ಇಲ್ಲಿ ವಿಚಿತ್ರ ಸಂತೋಷ ಸಿಗುತ್ತದೆ. ಅವಳ ಸನ್ನಿಧಿ ನನಗೆ ಕೊಡುವಷ್ಟು ಸುಖ, ಹಿತ ನನಗೆ ಎಲ್ಲೂ ಸಿಗುವುದಿಲ್ಲ ಎಂದಳು ಒಂದೇ ಉಸಿರಿಗೆ. 

ಏನೋ ನೆನಪಾಗಿ `ನಮ್ಮ ತೋಟದ ತುಂಬೆಲ್ಲ ಮರಗಳಿವೆ ಆದರೆ ಅದೊಂದೇ ಮರ ಹೇಗೆ ಆರಿಸಿಕೊಂಡೆ? ಅದಕ್ಯಾಕೆ ಮಗಳು ಎನ್ನುತ್ತೀ? ಕೇಳಿದ ಶರತ್ ಆದರೆ ಮೆಲ್ಲನೆ ನಕ್ಕು ಮಾತು ತೇಲಿಸಿದಳು ವಾಸಂತಿ.

ಎಂದಾದರೊಮ್ಮೆ ಪಾಟರ್ಿಗೆ, ಪಂಕ್ಷನ್ ಗಳಿಗೆ ಹೋಗಿ ಬಂದಾಗ, ಹೊಸ ಸೀರೆ ಉಟ್ಟರೆ, ಒಡವೆ ತಂದರೆ ಕೂಡ ತನ್ನ ಖುಷಿಯನ್ನೂ ಸಹ ಮರದೊಂದಿಗೇ ಹಂಚಿಕೊಳ್ಳುತ್ತಿದ್ದ ವಾಸಂತಿ ಬರಬರುತ್ತ ಮರದ ಸುತ್ತಲೇ ಹೆಚ್ಚು ಸಮಯ ಕಳೆಯತೊಡಗಿದ್ದಳು. ಅಲ್ಲಿಂದ ಬರುವಾಗ ಗಾಳಿಯಂತೆ ಹಗುರಾಗಿ ಬರುತ್ತಿದ್ದಳು. ಸೂಕ್ಷ್ಮವಾಗಿ ಗಮನಿಸಿದ ಮನೆಯ ಎಲ್ಲಾ ಸದಸ್ಯರಿಗೂ ಆಶ್ಚರ್ಯವಾಗಿತ್ತು.

ಒಮ್ಮೆ ವಾಸಂತಿಗೆ ತಿಳಿಯದಂತೆ ಹಿಂಬಾಲಿಸಿದ ಶರತ್ ಅಲ್ಲಿ ನಡೆಯುತ್ತಿರುವ ಸಂಭಾಷಣೆಗಳನ್ನು ಕೇಳಿ ದಂಗಾಗಿ ಹೋದ. ಹೀಗೂ ಇರಬಹುದೇ? ಪ್ರಶ್ನೆ ಜೊತೆಗೆ ಆತಂಕ ಶುರುವಾಯಿತು. ಆತನ ಆತಂಕ್ಕೆ ಕಾರಣವೇ ಬೇರೆ ಇತ್ತು....

ಕೆಲ ವರ್ಷಗಳ ಹಿಂದೆ ವಾಸಂತಿಗೆ ಹೊಟ್ಟೆ ನೋವು ಬಂದಿತ್ತು. ಪಿರೆಡ್ ಕೂಡ ಆಗಿರಲಿಲ್ಲ. ಬಸುರಿ ಆಗಿದ್ದರೂ ಆಗಿರಬಹುದು ಬೇಗನೇ ಡಾಕ್ಟರ್ಗೆ ತೋರಿಸಿದರೆ ಮಾತ್ರೆ, ಔಷಧ ಅಂತೆಲ್ಲ ನೀಡಿ ಮತ್ತೆ ಮೈ ಇಳಿಯುವುದು ಬೇಕಾಗಿರಲಿಲ್ಲ ಎಂದು ತೋರಿಸಿರಲಿಲ್ಲ. ತುಂಬಾ ಹೊಟ್ಟೆ ನೋವು ಎಂದಾಗ ಕರೆದೊಯ್ಯಲೇ ಬೇಕಾಯಿತು. ಆದರೆ ಕಾರಣ ವಾಸಂತಿಯ ಹೊಟ್ಟೆಯಲ್ಲಿ ಪುಟ್ಟ ಸಸಿಯೊಂದು ಮೊಳಕೆಯೊಡೆದಿತ್ತು! ಇರುವ ವಿಷಯವನ್ನು ಶರತ್ಗೆ ತಿಳಿಸಿದ ಡಾಕ್ಟರ್ ಆಪರೇಷನ್ಗೆ ಸಜ್ಜಾದರು. ಆಪರೇಷನ್ ಮಾಡಿ ಹೊರತೆಗೆದ ಮೊಳಕೆಯ ಮೇಲೆ ಶರತ್ನಿಗೆ ಇದ್ದಕ್ಕಿದ್ದಂತೆ ಪ್ರೀತಿ ಉಂಟಾಯಿತು ವಾತ್ಸಲ್ಯದಿಂದ ಅದನ್ನು ಜೋಪಾನವಾಗಿ ತಂದು ಇಟ್ಟ ಜಾಗದಲ್ಲಿಯೇ ಬೆಳೆದ ಮರ ಇದು ಎಂದು ತಿಳಿಯಲು ಶರತ್ಗೆ ಹೆಚ್ಚು ಸಮಯ ಹಿಡಿಯಲಿಲ್ಲ!!. ಅಂದು ಮಣ್ಣಿನಲ್ಲಿ ಇಟ್ಟ ಈ ಪುಟ್ಟ ಸಸ್ಯ ಇಂದು ಮರವಾಗಿದೆ. ಬಹಳ ಚೆನ್ನಾಗಿ ನೆರಳು ನೀಡುತ್ತದೆ, ತಣಿದ ಮನಕ್ಕೆ ತಂಪೆರೆಯುತ್ತದೆ. ಇದು ತನ್ನ ಕುಡಿ ಅಂತ ಶರತ್ನಿಗೆ ಮೊದಲ ಬಾರಿಗೆ ಅನಿಸಿತ್ತು. ಅಂದಿನಿಂದ ಶರತ್ನೂ ಆ ಮರದ ಕೆಳಗೆ ಹೋಗಿ ಕುಳಿತುಕೊಳ್ಳುತ್ತಿದ್ದ. ಜಾಗ ಪ್ರಶಾಂತವಾಗಿತ್ತು, ಹಿತವಾಗಿತ್ತು ಆದರೆ ತನ್ನೊಡನೆ ಮರ ಮೂಕವಾಗಿತ್ತು!!

63 ದಾಟಿದ್ದ ವಾಸಂತಿ ಬ್ಲಡ್ ಶುಗರ ಹಾಗೂ ಲೋ ಬಿಪಿಯಿಂದ ಸಣ್ಣಗಾಗಿದ್ದಳು. ಅವಳ ಬಿ.ಪಿ. ಹೆಚ್ಚಾಗುವ ಲಕ್ಷಣಗಳೇ ಇರಲಿಲ್ಲ. ಮುಖ ಸಣ್ಣದಾಗಿತ್ತು. ಕಣ್ಣು ನಿಸ್ತೇಜವಾಗಿದ್ದವು. ಕೈಕಾಲು ಎಳೆದುಕೊಳ್ಳಲೂ ಆಗುತ್ತಿರಲಿಲ್ಲ. ಧ್ವನಿ ಕ್ಷೀಣವಾಗಿತ್ತು. ಆದರೂ ಶರತ್ನ ಕೈ ಹಿಡಿದು ನನ್ನ ಆ ಮರವಂತಿ ಕಡೆ ಕರೆದುಕೊಂಡು ಹೋಗಿ ಎಂದು ಬೇಡಿದಳು. ಸಣ್ಣದಾಗಿ ನಕ್ಕು ಶರತ್ ಮೆಲ್ಲನೇ ಕೈ ಹಿಡಿದು ಮರವಂತಿಯ ಕೆಳಗೆ ಹುಲ್ಲು ಹಾಸಿನ ಮೇಲೆ ಕುಳಿತಳು. ಬೇಸಿಗೆ ದಿನವಾಗಿದ್ದರಿಂದ ಜಾಗ ತುಂಬಾ ತಂಪಾಗಿ ಮನಕೆ ಮುದ ನೀಡುವಂತಿತ್ತು. ನೀವು ಹೋಗಿ ಬನ್ನಿ ನಾನು ಇಲ್ಲಿ ಸ್ವಲ್ಪ ಹೊತ್ತು ರೆಸ್ಟ್ ಮಾಡುತ್ತೇನೆ ಎಂಬ ವಾಸಂತಿಯ ಕೋರಿಕೆಗೆ ಮೌನವಾಗಿ ಸಮ್ಮತಿಸಿದ. ಅವಳ ಮನದಿಂಗಿತವನ್ನು ಅರಿತವನಂತೆ ಸರಿದು ಬಂದ. ಮರವಂತಿ ಮಾತಿಗೆ ಮೊದಲಾದಳು.

ಅಮ್ಮಾ ಬಹಳ ದಣಿದಿದ್ದೀಯಾ ಜೀವನ ಸಾಕಾಗಿದೆಯೇ? ಹೌದು ಮಗಳೇ ಸಾಕಾಗಿದೆ ಜನುಮ. ಈಗ ನನ್ನ ಯಾರೂ ಆಡಿಕೊಳ್ಳುವವರಿಲ್ಲ ಆದರೂ ನನಗೂ ನನ್ನ ಸಂತಾನವಿದ್ದಿದ್ದರೆ?...

ಆದ್ಹೇಕೆ ಹಾಗೆ ಮಾತನಾಡುತ್ತೀ, ನಾ ನಿನ್ನ ಮಗಳೇ ಅಂತ ಎಷ್ಟು ಸಾರಿ ಹೇಳಿದ್ದೇನೆ. ನೋಡು ನನ್ನ ಮರದ ತುಂಬೆಲ್ಲ ಹೂಗಳು, ಹಣ್ಣುಗಳು, ಬೀಜಗಳು ನಿನ್ನ ಸಂತಾನ ನನ್ನೊಂದಿಗೆ ಜನ್ಮಜನ್ಮಾಂತರಕ್ಕೂ ಸಾಗಿ ಹೋಗುತ್ತದೆ. ಪಶು-ಪಕ್ಷಿಗಳಿಂದಾಗಿ ಎಲ್ಲೆಂದರಲ್ಲಿ ಹಬ್ಬುವ ನಿನ್ನ ಸಂತಾನ ಅಮರ ಮತ್ತು ಬಹು ಜನರ ದಣಿವಿಗೆ ನೆರಳಕೊರಳು ನೀಡಿದ ಧನ್ಯತಾ ಭಾವವಮ್ಮಾ. ನೀನೂ ನನ್ನ ಮಡಿಲಲ್ಲಿಯೇ ಇರು ಶಾಂತಳಾಗಿ ನಿದ್ರಿಸು ಎನ್ನುತ್ತಾ ಮರವಂತಿ ಮೆಲುವಾಗಿ ಗಾಳಿ ಬೀಸಿದಳು. ಮರದಿಂದ ಬಿದ್ದ ನೀರ ಹನಿ ವಾಸಂತಿಯ ಕೆನ್ನೆ ಮೇಲೆ ಇರುವಂತೆಯೇ ಕಣ್ಮುಚ್ಚಿ ವಾಸಂತಿ ಇಹ ಲೋಕ ತೊರೆದಳು ವಾಸಂತಿ.

ವಾಸಂತಿಯ ಕೊನೆ ಆಶೆಯಂತೆ ಶರತ್ ಮರವಂತಿಯ ನೆರಳಿನಲ್ಲಿಯೇ ಹೆಂಡತಿ ಶವ ಮಣ್ಣು ಮಾಡಿ ಗದ್ದುಗೆ ಕಟ್ಟಿದ. ಮರವಂತಿ ನೆರಳು ಸದಾ ವಾಸಂತಿಯ ಆತ್ಮವನ್ನು ಶಾಂತವಾಗಿಟ್ಟಿದೆ! ಎಲ್ಲವೂ ತಿಳಿದೂ ಮೌನ ಪ್ರೇಕ್ಷಕನಾದ ಶರತ್ಕೈ ಕಟ್ಟಿ ನಿಂತಿದ್ದಾನೆ.


 

ಸುದ್ದಿ ಓದಿ