ಹುಲಿ ಸಂಚಾರ: ಭಯದಲ್ಲಿ ಜನತೆ
ಮುಂಡಗೋಡ: ತಾಲೂಕಿನ ರಾಮಾಪುರ ಅರಣ್ಯ ಭಾಗದಲ್ಲಿ ಹುಲಿಯೊಂದು ತನ್ನ ಮರಿಗಳೊಂದಿಗೆ ಸಂಚರಿಸುತ್ತಿದ್ದು, ಸುತ್ತಮುತ್ತಲಿನ ಜನರಲ್ಲಿ ಭಾರೀ ಬಯದ ವಾತಾವರಣ ಮಾಡಿಸಿದೆ.
ಕಳೆದ 2 ದಿನಗಳಿಂದ ಪಾಳಾ-ರಾಮಾಪುರ ರಸ್ತೆಯಲ್ಲಿ ಸಂಚರಿಸುವ ಜನರಿಗೆ ರಸ್ತೆ ಅಂಚಿನ ಅರಣ್ಯದಲ್ಲಿ ಹುಲಿ ಕಾಣಿಸಿಕೊಂಡಿದೆ. ಈ ವಿಷಯ ಬಾರೀ ಸುದ್ದಿಯಾದ ಹಿನ್ನೆಲೆಯಲ್ಲಿ ಸೋಮವಾರ ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಾಗರ ತಾವಡೆ, ಉಪ ವಲಯ ಅರಣ್ಯಾಧಿಕಾರಿ ಖಸೀಮ್, ಮಹೇಶ ಪೂಜಾರ, ಅರಣ್ಯ ರಕ್ಷಕ ಮುತ್ತುರಾಜ ಸೇರಿದಂತೆ ಸಿಬ್ಬಂದಿಗಳು ಬೇಟಿ ನೀಡಿ ರಾಮಾಪುರ ಜಲಾಶಯದ ಸುತ್ತ ಪರಿಶೀಲಿಸಿದಾಗ ಹುಲಿ ಹಾಗೂ ಹುಲಿ ಮರಿಗಳ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಹುಲಿ ಇರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳೇ ದೃಡಪಡಿಸಿದ್ದಾರೆ.
ಜಾಗೃತಿ:
ಹುಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಈ ಭಾಗದಲ್ಲಿ ಯಾರು ಕೂಡ ಒಂಟಿಯಾಗಿ ಸಂಚರಿಸಬಾರದಲ್ಲದೇ ಜಾನುವಾರುಗಳನ್ನು ಕೂಡ ಅರಣ್ಯ ಭಾಗಕ್ಕೆ ಮೇಯಲು ಬಿಡಬಾರದೆಂದು ಅರಣ್ಯ ಇಲಾಖೆ ಸಿಬ್ಬಂದಿಗಳು ರಾಮಾಪುರ ಸುತ್ತಮತ್ತಲಿನ ಗ್ರಾಮಗಳಿಗೆ ತೆರಳಿ ಸೂಚನೆ ನೀಡುತ್ತಿದ್ದು, ಪ್ರತಿಯೊಬ್ಬರು ಜಾಗ್ರತೆಯಿಂದ ಇರುವಂತೆ ಸಂದೇಶ ಸಾರುತ್ತಿದ್ದಾರೆ.