ಹಿರಿಯ ನಿರ್ದೇಶಕ ತಿಪಟೂರು ರಘು ವಿಧಿವಶ
ಬೆಂಗಳೂರು, ಮೇ 29: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ವಿಧಿವಶರಾಗಿದ್ದಾರೆ. ಶ್ವಾಸಕೋಶ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಿಪಟೂರು ರಘು ಶಂಕರಮಠದಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಮುಂಜಾನೆ 4.45ರ ವೇಳಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಸುಮಾರು 16 ಚಿತ್ರಗಳನ್ನು ನಿರ್ದೇಶಕ ಮಾಡಿದ್ದ ತಿಪಟೂರು ರಘು, ನಾಗಪೂಜಾ ಚಿತ್ರ ಮೂಲಕ ಸಹಾಯಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಅಭಿನಯದ ಬೆಂಕಿ ಬಿರುಗಾಗಳಿ ಇವರಿಗೆ ಜನಪ್ರಿಯತೆ, ಉತ್ತಮ ಹೆಸರನ್ನು ತಂದುಕೊಟ್ಟಿತ್ತು.ನಿರ್ದೇಶಕರಾದ ನಂತರವೂ ಸಹಾಯಕ ನಿರ್ದೇಶಕ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದರು. ಅಲ್ಲದೆ ಅನೇಕ ಚಿತ್ರಗಳಲ್ಲಿ ಅಭಿನಯವನ್ನೂ ಮಾಡಿದ್ದರು. ತಿಪಟೂರು ರಘು ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಕನ್ನಡ ಚಿತ್ರರಂಗಕ್ಕೆ ಅನೇಕ ಹಿಟ್ ಸಿನಿಮಾಗಳನ್ನುನೀಡಿರುವ ತಿಪಟೂರು ರಘು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ಕಲ್ಲುವೀಣೆ ನುಡಿಯಿತು', 'ನಾಗ ಕಾಳ ಭೈರವ', 'ಬೆಂಕಿ ಬಿರುಗಾಳಿ' ಅಂತಹ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರು. 'ಹಳ್ಳಿಯ ಸುರಾಸುರರು', 'ಲೇಡೀಸ್ ಹಾಸ್ಟೆಲ್', 'ಆಕ್ರೋಶ', 'ಗಜೇಂದ್ರ' ಮುಂತಾದ ಚಿತ್ರಗಳಿಗೆ ತಿಪಟೂರು ರಘು ಆಕ್ಷನ್ ಕಟ್ ಹೇಳಿದ್ದರು. ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಡೈನಾಮಿಕ್ ಹೀರೋ ದೇವರಾಜ್ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಖ್ಯಾತಿ ತಿಪಟೂರು ರಘುರವರಿಗಿದೆ.