ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ: ಭರದಿಂದ ಸಾಗಿದ ಪೂರ್ವ ಸಿದ್ಧತೆ
ಬೆಂಗಳೂರು/ ಆಲಮಟ್ಟಿ 26 ಇದೇ ಫೆ. 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಡಿ ನಡೆಯುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ.ಮುಖ್ಯಮಂತ್ರಿಯಾದಿಯಾಗಿ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಸಂಘದ ಜಿಲ್ಲಾ ಅಧ್ಯಕ್ಷರುಗಳಿಗೆ ಒಂದು ಮುಖ್ಯ ಬೃಹತ್ ವೇದಿಕೆ, ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಪ್ರಶಸ್ತಿ ವಿಜೇತ 100 ಜನ ಶಿಕ್ಷಕರಿಗೆ ಒಂದು ಪಕ್ಕ ವೇದಿಕೆ ಹಾಗೂ ಸಂಗೀತ ಕಾರ್ಯಕ್ರಮಕ್ಕೆ ಒಂದು ಸೇರಿ ಒಟ್ಟುಮೂರು ಬೃಹತ್ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಆಲಮಟ್ಟಿ ಪತ್ರಿಕಾ ಪ್ರತಿನಿಧಿಗಳಿಗೆ ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಿಯಾಗಿ ಎಲ್ಲ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಲು ಒಪ್ಪಿಕೊಂಡಿದ್ದಾರೆ ಎಂದರು. ವೇದಿಕೆಯ ಬಲಬದಿಯಲ್ಲಿಯೇ ಬೆಳಿಗ್ಗೆ ಅಲ್ಪೋಪಹಾರ ಹಾಗೂ ಮಧ್ಯಾಹ್ನ ಒಂದು ಲಕ್ಷ ಜನ ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ಸಿದ್ಧತೆಯೂ ಭರದಿಂದ ಸಾಗಿದೆ. ಎರಡು ತರಹದ ಪಲ್ಯೆ, ರೊಟ್ಟಿ, ಚಪಾತಿ, ಅನ್ನ, ಸಾಂಬಾರು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಶೈಲಿಯ ಉದುರು ಸಜಕಾ (ಸುರಮಾ) ಹಾಗೂ ಶೇಂಗಾ ಹೋಳಿಗೆ ಎರಡು ರೀತಿಯ ಸಿಹಿ ಪದಾರ್ಥಗಳನ್ನು ಊಟದ ಜತೆ ನೀಡಲಾಗುತ್ತಿದೆ. 60 ಊಟದ ಕೌಂಟರ್ ಸ್ಥಾಪಿಸಲಾಗುತ್ತಿದ್ದು, ಎಲ್ಲಿಯೂ ಊಟಕ್ಕಾಗಿ ಅಸ್ತವ್ಯಸ್ಥ ಆಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಕಂಗೊಳಿಸುತ್ತಿದೆ ಅರಮನೆ ಶೈಲಿಯ ದ್ವಾರಬಾಗಿಲು; ಬೆಂಗಳೂರು ಅರಮನೆ ಮೈದಾನದ ತ್ರಿಪುರಸುಂದರಿಯಲ್ಲಿ ಪ್ರವೇಶ ಬಳಿ ಅರಮನೆ ಶೈಲಿಯ ದ್ವಾರ ಬಾಗಿಲು ನಿರ್ಮಾಣಗೊಳ್ಳುತ್ತಿದೆ. ಸಭಾಂಗಣದ ನಾಲ್ಕು ಕಡೆ ಪ್ರವೇಶ ಕಲ್ಪಿಸಲಾಗುತ್ತಿದೆ.ಮೈದಾನದ ಎಲ್ಲೇ ನಿಂತರೂ ಕಾಣುವಂತೆ ಎಲ್ ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಮೈದಾನದ ಸಿದ್ಧತೆಯೂ ಭರದಿಂದ ಸಾಗಿದ್ದು 200 ಕ್ಕೂ ಹೆಚ್ಚು ಕಾರ್ಮಿಕರು ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬುಧವಾರ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ರಾಮೋಜಿಗೌಡ, ಎಐಪಿಟಿಎಫ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ, ಸರ್ಕಾರಿ ನೌಕರರ ಸಂಘದ ಕೋಶಾಧ್ಯಕ್ಷ ಶಿವರುದ್ರಯ್ಯ, ಸಾರಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ, ಹಾಸನ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಶಿಕ್ಷಕರ ಸಂಘದ ಗೌರವಾಧ್ಯಕ್ಷ ನಾಗೇಶ ಭೇಟಿ ನೀಡಿ ಕಾರ್ಯಕ್ರಮಕ್ಕೆ ವಿವಿಧ ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಚೇತನ, ಉಪಾಧ್ಯಕ್ಷ ಮಾರುತೇಶ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ ಹೆಬ್ಬಳ್ಳಿ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ತಾಲೂಕು ಘಟಕಗಳ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಇದ್ದರು.