ಹುನ್ನೂರು ಕಾಲೇಜಿನ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಶಿಬಿರ
ಲೋಕದರ್ಶನ ವರದಿ,
ಜಮಖಂಡಿ14: ತಾಲೂಕಿನ ಹುನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಹೊಸ ಪಠ್ಯಕ್ರಮದಲ್ಲಿ ಅಳವಡಿಸಿರುವ ಭಾರತದ ರಾಜಕೀಯದಲ್ಲಿ ಸಂಸ್ಕೃತಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹುಲ್ಯಾಳದ ಗುರುದೇವಾಶ್ರದಲ್ಲಿ ಏರ್ಪಡಿಸಲಾಗಿತ್ತು.
ಸಾನಿಧ್ಯ ವಹಿಸಿದ್ದ ಆಶ್ರಮದ ಹರ್ಷಾನಂದ ಸ್ವಾಮಿಜಿ ಮಾತನಾಡಿ, ಭಾರತ ಪ್ರಾಚೀನ ಕಾಲದಿಂದ ಸಂಸ್ಕೃತಿಯು ಅತ್ಯಂತ ಶ್ರೇಷ್ಠವಾಗಿತ್ತು.ಈ ಸಂಸ್ಕೃತಿಯಿಂದ ರಾಜಕೀಯ ವ್ಯವಸ್ಥೆ ಪ್ರಾರಂಭವಾಯಿತು. ಒಂದು ಬಯಲು ಪ್ರದೇಶದಲ್ಲಿ ಜನರು ಬದುಕುವ ರೀತಿ ನೀತಿಯನ್ನು ನಾವು ಸಂಸ್ಕೃತಿ ಎನ್ನುತ್ತೇವೆ. ಈ ಸಂಸ್ಕೃತಿ ಸಂಸ್ಕಾರದಿಂದ ರಾಜಕೀಯ ಬರುತ್ತದೆ. ನಮ್ಮ ದೇಶದಲ್ಲಿ ಅನೇಕ ಸಂಸ್ಕೃತ ಗ್ರಂಥಗಳು ನಮ್ಮ ಸಂಸ್ಕೃತಿಯಲ್ಲಿ ರಾಜಕೀಯ ವ್ಯವಸ್ಥೆ ಹೇಗೆ ಹುಟ್ಟಿತು ಹಾಗೂ ಋಷಿ ಮುನಿಗಳಿಂದ ಒಂದೊಂದು ಸಂಸ್ಕೃತಿ ಪ್ರಾರಂಭವಾಯಿತು. ಇದರಿಂದ ಒಂದೊಂದು ಪರಂಪರೆಗಳು ಆಚರಣೆಗೆ ಬಂದವು. ರಾಮಾಯಣ, ಮಹಾಭಾರತ, ವೇದಗಳು ಕಾಲದಲ್ಲಿ ಅಲ್ಲಿರುವ ಸಂಸ್ಕೃತಿಯನ್ನು ಆಧರಿಸಿ ರಾಮ ರಾಜಕೀಯ ವ್ಯವಸ್ಥೆಗೆ ಲಕ್ಷಣ ಸಂಸ್ಕೃತಿಯನ್ನು ಬಿಂಬಿಸುವ ಆಡಳಿತ ನೀಡಿದ ಪರಿಣಾಮವಾಗಿ ಕಲ್ಯಾಣ ರಾಜ್ಯ ಎನ್ನುವ ಹೊಸ ಪರಿಕಲ್ಪನೆ ಹುಟ್ಟಿತು. ಅದಕ್ಕೆ ಸಂಸ್ಕೃತಿಯಿಂದ ರಾಜಕೀಯ ವ್ಯವಸ್ಥೆ ಪ್ರಾರಂಭವಾಯಿತು. ಸಂಸ್ಕೃತಿಯಿಂದ ಆರಂಭವಾದ ರಾಜಕೀಯ ಉತ್ತಮ ಆದರ್ಶಪ್ರಾಯವಾಗಿ ಮುಂದುವರೆಯುತ್ತದೆ ಎಂದರು.
ಪ್ರಾಚೀನ ಕಾಲದಲ್ಲಿ ಮೌಲ್ಯಾಧಾರಿತ ಪ್ರಾಯೋಗಿಕ ಶಿಕ್ಷಣ ವ್ಯವಸ್ಥೆಯಿತ್ತು.ಇದರಿಂದ ಹಿರಿಯರಿಗೆ ಗುರುಗಳಿಗೆ ಸಮಾಜ ಗೌರವ ಕೊಡುತ್ತಿತ್ತು. ಹಾಗಾಗಿ ಇಡೀ ಸಮಾಜ ಸುಖಮಯ ಜೀವನ ಸಾಗಿಸಿ ತಮ್ಮ ಜೀವನ ಪ್ರಜ್ವಲವಾಗುವಂತೆ ರಾಜಕೀಯ ಆಡಳಿತ ನಡೆಸುತ್ತಿದ್ದರು.ದೇಶ ಆಳುವವರು ನಿಸ್ವಾರ್ಥ, ಸಾತ್ವಿಕ ಪ್ರಾಮಾಣಿಕವಾಗಿ ಹಿರಿಯರ ಸಂತ ಮಹಾಂತರ ದಾರ್ಶನಿಕರ ಆದರ್ಶಪ್ರಾಯ ಸಂಸ್ಕೃತಿಯ ಪ್ರಭಾವ ರಾಜಕೀಯ ವ್ಯವಸ್ಥೆ ಮೇಲಿತ್ತು. ಇದರಿಂದ ಭಾರತ ಅಖಂಡತೆಯಲ್ಲಿ ಐಕ್ಯತೆಯನ್ನು ಕಾಣುತ್ತಿತ್ತು. ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ಅಷ್ಟೆ ಅಲ್ಲ ಭಾರತದ ಪ್ರತಿಯೊಬ್ಬ ಪ್ರಜೆಯು ನಮ್ಮ ಸಂವಿಧಾನವನ್ನು ಓದಿ ತಿಳಿದುಕೊಂಡು ಆದರ್ಶ ವಿದ್ಯಾರ್ಥಿಯಾಗಿ ಶ್ರೇಷ್ಠ ಭಾರತವನ್ನು ಮಾಡಲು ಪ್ರಯತ್ನಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಸುನಂದಾ ಶಿರೂರ ಮಾತನಾಡಿದರು. ವೇದಿಕೆಯಲ್ಲಿ ಡಾ,ಗುರು. ಹಿರೇಮಠ, ಡಾ.ಎಸ್.ಎಸ್.ಸುವರ್ಣಖಂಡಿ, ಡಾ. ವಿ.ಕೆ. ಮರಕಟ್ಟಿ, ಭಾರತಿ ಜಮಖಂಡಿ,ಎನ್.ಎ.ಕೋಲೂರ ಉಪಸ್ಥಿತರಿದ್ದರು. ಶ್ರೀಮತಿ ಪಿ.ಕೆ.ನವಾಲ್ದಾರ ಪ್ರಾರ್ಥಿಸಿದರು.ಪ್ರೊ.ಪಿ..ಡಿ. ಬಡಿಗೇರ ಸ್ವಾಗತಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.ಡಾ. ರವಿಕುಮಾರ ಬಿ.ಕೆ. ವಂದಿಸಿದರು.