ಧಾರವಾಡ - ಹುಬ್ಬಳ್ಳಿ

ಇನಾಂ ವೀರಾಪುರ ಗ್ರಾಮಕ್ಕೆ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ ಭೇಟಿ; ಕುಟುಂಬಸ್ಥರಿಗೆ ರೂ.16 ಲಕ್ಷ ಚೆಕ್ ವಿತರಣೆ

ಇನಾಂ ವೀರಾಪುರ ಗ್ರಾಮಕ್ಕೆ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ ಭೇಟಿ; ಕುಟುಂಬಸ್ಥರಿಗೆ ರೂ.16 ಲಕ್ಷ ಚೆಕ್ ವಿತರಣೆ
Social Welfare Minister Dr. H.C. Mahadevappa visits Inam Veerapur village; distributes Rs. 16 lakh

ಹುಬ್ಬಳ್ಳಿ ಜ.1: ಇಂದು ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಘಟನೆಯ ಕುರಿತು ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯಸ್ಸಿಗೆ ಬಂದಂತಹ ಗಂಡು ಹೆಣ್ಣು ಮದುವೆಯಾಗಿದ್ದಾರೆ. ಬಾಬಾ ಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್ ಅವರು ವಯಸ್ಸಿಗೆ ಬಂದ ಹೆಣ್ಣು ತನ್ನ ಇಚ್ಛೆಗೆ ಅನುಗುಣವಾಗಿ ನಡೆಯುವಂತಹದು ಎಂದು ಹೇಳಿದ್ದಾರೆ. ವಯಸ್ಕ ಮಹಿಳೆ ತನ್ನ ಸಂಗಾತಿಯನ್ನು ಅವಳ ವಿವೇಕ, ಭರವಸೆ ಮತ್ತು ಇಷ್ಟಪಟ್ಟಿರುವ ವ್ಯಕ್ತಿಯನ್ನು ಮದುವೆಯಾಗಬಹುದು ಎಂದು ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ನಲ್ಲಿ ವಿವರಿಸಿದ್ದಾರೆ.

ಸ್ವ ಇಚ್ಛೆಯಂತೆ ತಾನು ಇಷ್ಟಪಟ್ಟಿರುವ ವ್ಯಕ್ತಿಯನ್ನು ಮದುವೆಯಾಗುವುದು ಮೂಲಭೂತ ಹಕ್ಕಾಗಿದ್ದು, ಈ ಘಟನೆಯಲ್ಲಿ ಮೂಲಭೂತ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ. ಗರ್ಭಿಣಿ ಮಹಿಳೆಯನ್ನು ಅವರ ಕುಟುಂಬದವರೇ ಕೊಲೆ ಮಾಡಿರುವುದು ಅತ್ಯಂತ ಮೃಗೀಯ ಘಟನೆಯಾಗಿದೆ. ತಪ್ಪಿತಸ್ಥರ ವಿರುದ್ಧ ತೀಕ್ಷ್ಣವಾದ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಸಚಿವರು, ಶಾಸಕರು ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದಾರೆ.  ಕುಟುಂಬಸ್ಥರು ತುಂಬಾ ನೋವಿನಲ್ಲಿದ್ದಾರೆ. ಅವರಿಗೆ ಸಾಂತ್ವನ ತಿಳಿಸಿ, ಧೈರ್ಯ ತುಂಬಲಾಗಿದೆ ಎಂದರು.  

ಈ ಘಟನೆ ನಡೆದ ತಕ್ಷಣ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಕ್ಷಣದಲ್ಲಿ ಮಾಹಿತಿ ಪಡೆದುಕೊಂಡಿದ್ದೆ. ಅಲ್ಲದೇ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಹಾಗೂ ರಕ್ಷಣೆ ನೀಡಬೇಕೆಂದು ತಿಳಿಸಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಸರ್ಕಾರದಿಂದ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ಸರಿಯಾಗಿ ಕ್ರಮಗಳನ್ನು ಕೈಗೊಳ್ಳದಿರುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

ಮಾನ್ಯಾ ಹೆಸರಿನಲ್ಲಿ ಕಾಯ್ದೆ ತರುವ ಬಗ್ಗೆ ಚರ್ಚೆ 

ಮಾನ್ಯಾ ಪ್ರಕರಣದಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸಬಾರದು. ಮಾನ್ಯಾ ಹೆಸರಿನಲ್ಲಿ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಕ್ರಮ ವಹಿಸಲಾಗುವುದು ಎಂದರು.  

ಕುಟುಂಬಸ್ಥರಿಗೆ ರೂ.16 ಲಕ್ಷ ಚೆಕ್ ವಿತರಣೆ 

ಸರ್ಕಾರದಿಂದ ಈಗಾಗಲೇ ರೂ.5 ಲಕ್ಷ ಹಣವನ್ನು ನೀಡಲಾಗಿದೆ. ಇಂದು ಕುಟುಂಬದ 8 ಸದಸ್ಯರಿಗೆ ತಲಾ 2 ಲಕ್ಷದಂತೆ ಒಟ್ಟಾರೆಯಾಗಿ ರೂ.16 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು.  ವಿವೇಕಾನಂದ ಆಸ್ಪತ್ರೆಗೆ ಸಮಾಜ ಕಲ್ಯಾಣ ಸಚಿವರ ಭೇಟಿ 

ಬಳಿಕ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್‌.ಸಿ.ಮಹಾದೇವಪ್ಪ ಅವರು ಭೇಟಿ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕಾನಂದ ದೊಡ್ಡಮನಿ ಅವರ ತಾಯಿ ರೇಣವ್ವ ದೊಡ್ಡಮನಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಉತ್ತಮ ಚಿಕಿತ್ಸೆ, ಓಷಧಿ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಬ್ಬಯ್ಯ ಪ್ರಸಾದ್, ಶಾಸಕರಾದ ಎನ್‌.ಎಚ್‌.ಕೋನರಡ್ಡಿ, ಎಫ್‌.ಎಚ್‌.ಜಕ್ಕಪ್ಪನವರ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಣದೀಪ ಡಿ, ಆಯುಕ್ತರಾದ ರಾಕೇಶಕುಮಾರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, 

ಉಪವಿಭಾಗಾಧಿಕಾರಿ ಶಾಲಂ ಹುಸೇನ್,  

ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಜೆ.ಬಿ.ಮಜ್ಜಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಮಚಂದ್ರ ಹೊಸಮನಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮುರುಗೇಶ ಚನ್ನಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ದಲಿತ ಸಂಘಗಳ ಮುಖಂಡರು, ಇತರರು ಉಪಸ್ಥಿತರಿದ್ದರು.  


ಸುದ್ದಿ ಓದಿ