ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಿ: ಕಳ್ಳಿಮನಿ
ತಾಳಿಕೋಟಿ: ವಿದೇಶಿ ಕ್ರೀಡೆಗಳಿಂದಾಗಿ ನಮ್ಮ ದೇಶಿಯ ಕ್ರೀಡೆಗಳು ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಗ್ರಾಮೀಣ ಕ್ರೀಡೆಗಳಾದ ಖೋ-ಖೋ, ಕಬಡ್ಡಿ, ಮಲ್ಲಕಂಬ, ಕುಸ್ತಿಗಳಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ದೊರಕುವದರೊಂದಿಗೆ ಬದುಕಿಗೆ ಚೈತನ್ಯ ಸಿಗುತ್ತದೆ. ಇವುಗಳನ್ನು ಬೆಳೆಸಿ ಉಳಿಸುವ ಅಗತ್ಯ ಇದೆ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ಕಾಂಗ್ರೆಸ್ ನಾಯಕಿ ಸುಜಾತಾ ಕಳ್ಳಮನಿ ಹೇಳಿದರು.
ತಾಲೂಕಿನ ಪೀರಾಪೂರ ಗ್ರಾಮದಲ್ಲಿ ಬಲಭೀಮೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಎಸ್.ಬಿ. ಬಿರಾದಾರ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಕಬಡ್ಡಿ ಓಪನ್ ಟೂರ್ನಾಮೆಂಟ್ಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಾಗಬಾರದು ಕ್ರೀಡಾಮನೋಭಾವ ಹಾಗೂ ಸ್ಪೂರ್ತಿಯೊಂದಿಗೆ ಭಾಗವಹಿಸಬೇಕು ಸೋಲು-ಗೆಲುವಿನ ನಂತರದ ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಕ್ರೀಡೆಗಳಿಗಿದೆ ಎಂದರು.
ಜಿ.ಪಂ. ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ ಮಾತನಾಡಿ ಕ್ರೀಡಾ ರಂಗದಲ್ಲಿ ಮಹಿಳೆಯರು ಹೆಚ್ಚಿನ ಸಾಧನೆ ಮಾಡಿದ್ದಾರೆ ಅವರಿಗೂ ಹೆಚ್ಚಿನ ಮಹತ್ವ ಕೊಡಬೇಕು ಎಂದು ತಿಳಿಸಿದರು.
ಮುಖಂಡರಾದ ಸೋಮನಾಥ ಕಳ್ಳಿಮನಿ, ಪ್ರಭು ಭೈರಿ, ಸುರೇಶ ಬಾಬುಗೌಡ ಬಿರಾದಾರ, ಅಶೋಕ, ಹಾಜಿಪೀರಾ ಉಪಸ್ಥಿತರಿದ್ದರು.