ಲೇಖನಗಳು

ಸರೋದ್ ಮಾಂತ್ರಿಕ ಪಂ.ರಾಜೀವ ತಾರಾನಾಥ

ಸರೋದ್ ಮಾಂತ್ರಿಕ ಪಂ.ರಾಜೀವ ತಾರಾನಾಥ

ಅಂತರಾಷ್ಟ್ರೀಯ ಖ್ಯಾತ ಸರೋದ್ ವಾದಕ ಪಂಡಿತ ರಾಜೀವ ತಾರಾನಾಥ ಅವರಿಗೆ 91 ವರ್ಷ. ಅವರದು ಬಹುಮುಖ ಪ್ರತಿಭೆ. ಸಾಹಿತ್ಯ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲೂ ಅವರದು ವಿಶಿಷ್ಟ ಕೊಡುಗೆ. ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ಉದರ್ು, ಕೊಂಕಣಿ, ಬಂಗಾಳಿ ಸೇರಿದಂತೆ ಹಲವು ಬಾಷೆಗಳಲ್ಲಿ ಅವರಿಗೆ ಪ್ರಬುದ್ಧತೆಯಿದೆ. ನವ್ಯ ಪರಂಪರೆಯಲ್ಲಿನ ಮೂಲ ಚಿಂತಕರೂ, ಬರಹಗಾರರೂ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಹೊಸ ಅಲೆಯ ಹಲವಾರು ಚಲನಚಿತ್ರಗಳಿಗೆ ಸಂಗೀತ ಒದಗಿಸಿದ ಹಿರಿಮೆ ಅವರದು. ಹಿಂದೂಸ್ತಾನಿ ಸಂಗೀತಕ್ಕೆ ಅಂತರಾಷ್ಟ್ರೀಯ ಮನ್ನಣೆ ಸಿಗುವುದರಲ್ಲಿ ಪಂ.ರಾಜೀವ ತಾರಾನಾಥರ ಕೊಡುಗೆಯೂ ಅಪಾರ.

ಪಂ.ರಾಜೀವ ತಾರಾನಾಥ ಅವರು 1932ರ ಅಕ್ಟೋಬರ್ 17ರಂದು ಜನಿಸಿದರು. ತಂದೆ ಪಂಡಿತ ತಾರಾನಾಥ, ಂತಾಯಿ ಸುಮತಿಬಾಯಿ. ತಂದೆಯವರು ಇಂಗ್ಲೀಷ್ನಲ್ಲಿ ಅದ್ಭುತ ವಾಗ್ಮಿಗಳು ಹಾಗೂ ಪ್ರಖ್ಯಾತ ಬರಹಗಾರರು. ರಾಜೀವ ಅವರು ಬಾಲ್ಯದಲ್ಲಿದ್ದಾಗಲೇ ಸ್ವಾತಂತ್ರ್ಯ, ಆದರ್ಶವಾದ, ಸುಧಾರಣೆ ಮತ್ತು ಭಾರತೀಯ ಸಮಾಜದಲ್ಲಿ ಹೊಸ ಪಾಶ್ಚಿಮಾತ್ಯ ಜ್ಞಾನಗಳಿಗೆ ಮುಕ್ತತೆಯ ಹುದುಗುವಿಕೆಯನ್ನು ಅಳವಡಿಸಿಕೊಂಡರು. ಅವರ ಪಾಲಕರು ರಾಜೀವನಿಗೆ ಸಾಹಿತ್ಯ ಮತ್ತು ಸಂಗೀತದ ಉತ್ಸಾಹವನ್ನು ತುಂಬಿದರು. ರಾಜೀವ ತಾರಾನಾಥರು ಪ್ರಾರಂಭಿಕ ಪಾಠಗಳನ್ನು ತಂದೆ ಪಂಡಿತ ತಾರಾನಾಥರಿಂದ ಪಡೆದರು. ನಂತರ ಅವರು ಶಂಕರಗೌಡ ಪಾಟೀಲ, ಸವಣೂರ ಕೃಷ್ಣಾಚಾರ್ ಮತ್ತು ವೆಂಕಟರಾವ್ ರಾಮದುರ್ಗಕರ್ ಮುಂತಾದ ಗುರುಗಳಲ್ಲಿ ಸಂಗೀತವನ್ನು ಕಲಿತರು. ಅಚ್ಚರಿಯೆಂದರೆ ಕೇವಲ 9 ವರ್ಷದವರಿದ್ದಾಗಲೇ ಅವರು ಪ್ರಥಮ ಸಂಗೀತ ಕಛೇರಿಯನ್ನು ನಡೆಸಿ ಸೈ ಎನಿಸಿಕೊಂಡಿದ್ದರು. 

ಕಾಲೇಜಿನಲ್ಲಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದ ಅವರು ಬಿಎ ಆನಸರ್್ನಲ್ಲಿ ಪ್ರಥಮ ಸ್ಥಾನಗಳಿಸಿ, ಇಂಗ್ಲೀಷ್ನಲ್ಲಿ ಪಿ.ಎಚ್.ಡಿ ಪದವಿ ಪಡೆದರು. ರಾಜೀವ ತಾರಾನಾಥರು ಕೆಲವು ತಿಂಗಳುಗಳ ಕಾಲ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬೆಂಗಳೂರಿನಲ್ಲಿ ನಡೆದ ಪಂ.ರವಿಶಂಕರ ಮತ್ತು ಉಸ್ತಾದ್ ಆಲಿ ಅಕ್ಬರ್ಖಾನ್ರ ಸಂಗೀತ ಕಛೇರಿಗೆ ಅವರು ಹೋಗಿದ್ದರು. ಖಾನ್ ಸಾಹೇಬರ ಸರೋದ್ ಮಾಂತ್ರಿಕತೆಗೆ ಮಾರು ಹೋದರು. ರಾಜೀವ ತಾರಾನಾಥರು ಬೆಂಗಳೂರಿನಲ್ಲಿಯ ಉಪನ್ಯಾಸಕ ಕೆಲಸಕ್ಕೆ ಡಿಸೆಂಬರ್ 1955ರಲ್ಲಿ ರಾಜೀನಾಮೆ ನೀಡಿ ಖಾನ್ ಸಾಹೇಬರ ಬಳಿ ಸಂಗೀತ ಕಲಿಯಲು ನಿರ್ಧರಿಸಿದರು. ನಂತರ ಅವರು ಉಸ್ತಾದ್ ಆಲಿ ಅಕ್ಬರ್ ಖಾನ್ ಅವರನ್ನು ಭೇಟಿ ಮಾಡಲು ಮುಂಬೈಗೆ ತೆರಳಿದರು. ಮೊದಲು ಖಾನ್ ಸಾಹೇಬರು ರಾಜೀವ ತಾರಾನಾಥರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ನಿರಾಕರಿಸಿದರು. ಉಸ್ತಾದ್ ಆಲಿ ಖಾನರು ರಾಜೀವ ತಾರಾನಾಥರನ್ನು ಪರೀಕ್ಷಿಸಿ ಶಿಷ್ಯರನ್ನಾಗಿ ಸ್ವೀಕರಿಸಿದರು. ಮುಂಬೈನಲ್ಲಿ ಅವರು ಸಂಬಂಧಿಕರ ಮನೆಯಲ್ಲಿ ಉಳಿದು ಸಂಗೀತಾಭ್ಯಾಸವನ್ನು ಮುಂದುವರೆಸಿದರು. ಆದರೆ ಕೌಟುಂಬಿಕ ಸಮಸ್ಯೆ ಅವರನ್ನು ಸಂಗೀತ ಪಾಠದಿಂದ ದೂರ ಮಾಡಿತು. ಅವರ ಚಿಕ್ಕಪ್ಪರೊಬ್ಬರು ಕ್ಷಯರೋಗದಿಂದ ಬಳಲುತ್ತಿದ್ದರು. ಅವರನ್ನು ನಾನಾವತಿ ಆಸ್ಪತ್ರೆಯಲ್ಲಿ ನೋಡಿಕೊಳ್ಳುವ ಜವಬ್ದಾರಿ ರಾಜೀವ ಅವರ ಹೆಗಲ ಮೇಲೆ ಬಿದ್ದಿತು. ಏಳು ತಿಂಗಳು ಕಳೆದ ನಂತರ ಚಿಕ್ಕಪ್ಪ ಚೇತರಿಸಿಕೊಂಡರು. ನಂತರ ಮತ್ತೇ ರಾಜೀವ ಅವರು ಸಂಗೀತ ಪಾಠಗಳಿಗೆ ಮರಳಿದರು.

ಒಂದು ವರ್ಷದ ನಂತರ ಉಸ್ತಾದ್ ಆಲಿ ಅಕ್ಬರ್ ಖಾನರು ಕೋಲ್ಕತ್ತಾಗೆ ತೆರಳಿದರು. ರಾಜೀವ ತಾರಾನಾಥ ಅವರನ್ನು ಹಿಂಬಾಲಿಸಿದರು. ಕೋಲ್ಕತ್ತಾದಲ್ಲಿ ಅವರಿಗೆ ಯಾವ ಸಂಬಂಧಿಕರು ಇರಲಿಲ್ಲ. ರಾಜೀವ ತಾರಾನಾಥರು ಇಲ್ಲಿ ಬಹಳ ಕಷ್ಟವನ್ನು ಅನುಭವಿಸಿದರು. ಉಸ್ತಾದ್ ಆಲಿ ಅಕ್ಬರ್ ಖಾನ್ ಅವರಿಗೆ ಇಬ್ಬರು ಹೆಂಡತಿಯರು. ಅವರ ಎರಡು ಮನೆಗಳಲ್ಲಿ ಒಂದು ಮನೆ ಖಾಲಿ ಇತ್ತು. ಖಾನ್ ಸಾಹೇಬರು ವಿದ್ಯಾಥರ್ಿಗಳನ್ನು ಒಂದು ಮನೆಯಲ್ಲಿ ಇರಿಸಿದ್ದರು. ರಾಜೀವ ತಾರಾನಾಥರು ಅಲ್ಲಿಯೇ ಸೇರಿಕೊಂಡರು. ಅನಿವಾರ್ಯ ಕಾರಣದಿಂದ ಆ ಮನೆಯಿಂದ ಹೊರಬಂದು ಬಸ್ನಿಲ್ದಾಣದಲ್ಲಿ ಇರತೊಡಗಿದು. ಕಡಲೆಕಾಯಿಗಳನ್ನು ತಿಂದು ಹೊಟ್ಟೆತುಂಬಿಸಿಕೊಂಡು, ಸಂಗೀತ ಕಲಿಯತೊಡಗಿದರು. ಖಾನ್ ಸಾಹೇಬರ ಪಾರ್ಸ್ ಶ್ರೀಮಂತ ಶಿಷ್ಯ ಪ್ರೊಭತ್ ಕುಮಾರ ರಾಜೀವ ತಾರಾನಾಥರ ಪರಿಸ್ಥಿತಿಯನ್ನು ಮನಗಂಡು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಅಲ್ಲಿ ರಾಜೀವ ತಾರಾನಾಥರು 6 ವರ್ಷಗಳಿಗಿಂತ ಹೆಚ್ಚು ಕಾಲ ಅವರ ಕುಟುಂಬದೊಂದಿಗೆ ನೆಲೆಸಿದರು. ಡಾ.ಸಿ.ಡಿ.ನರಸಿಂಹಯ್ಯರವರಿಗೆ ರಾಜೀವ ತಾರಾನಾಥರು ಅತ್ಯುತ್ತಮ ವಿದ್ಯಾಥರ್ಿಯಾಗಿದ್ದು, ಅವರನ್ನು ಎಂ.ಎ ಪೂರ್ಣಗೊಳಿಸಲು ಕಳುಹಿಸಬೇಕೆಂದು ಖಾನ್ ಸಾಹೇಬರಲ್ಲಿ ಅವರು ಕೋರಿಕೊಂಡರು. ಹೀಗಾಗಿ ರಾಜೀವ ತಾರಾನಾಥರು ಕರ್ನಾಟಕಕ್ಕೆ ಹಿಂದಿರುಗಿ, ಎಂ. ಪೂರ್ಣಗೊಳಿಸಿದರು. ಜೀವನಕ್ಕಾಗಿ ಇಂಗ್ಲೀಷ್ ಅಧ್ಯಾಪಕ ವೃತ್ತಿಯನ್ನು ಮತ್ತೇ ಪ್ರಾರಂಭಿಸಿದರು. ಆದರೆವಿಧಿ ಬಿಡಬೇಕಲ್ಲ. ಆಕಸ್ಮಿಕವಾಗಿ ಭೇಟಿಯಾದ ಪಂ.ರವಿಶಂಕರ ಅವರ ಸಲಹೆಗೆ ಮನಸೋತು, ಸಂಪೂರ್ಣವಾಗಿ ಸರೋದನಲ್ಲೇ ಮುಳುಗಿ ಹೋದರು. ಉಸ್ತಾದದ ಅಕ್ಬರ್ ಅಲಿಖಾನ್ ಅವರಲ್ಲದೇ ಪಂಡಿತ ರವಿಶಂಕರ, ಶ್ರೀಮತಿ ಅನ್ನಪೂರ್ಣದೇವಿ, ಪಂಡಿತ ನಿಖಿಲ್ ಬ್ಯಾನಜರ್ಿ ಮತ್ತು ಉಸ್ತಾದ್ ಆಶಿಶ್ಖಾನ ಅವರಲ್ಲಿ ಸಹ ರಾಜೀವ ತಾರಾನಾಥರು ಮಾರ್ಗದರ್ಶನವನ್ನು ಪಡೆದುಕೊಂಡರು. 

1989ರಿಂದ 1992ರವರೆಗೆ ಪಂ.ರಾಜೀವ ತಾರಾನಾಥ ಅವರು ಫೋರ್ಡ್   ಫೌಂಡೇಶನ್ ವಿದ್ವಾಂಸರಾಗಿದ್ದರು. ಈ ಅವಧಿಯಲ್ಲಿ ಅವರು ಮೈಹರ್ ಅಲ್ಲಾವುದ್ದೀನ್ ಫರಾನಾದ ಬೋಧನಾ ತಂತ್ರಗಳ ಕುರಿತು ಸಂಶೋಧನೆ ನಡೆಸಿದರು. ಅಲ್ಲದೇ 1995ರಿಂದ 2005 ರವರಗೆ ಅವರು ಕ್ಯಾಲಿಫೋನರ್ಿಯಾದ ಲಾಸ್ ಏಂಜಲೀಸ್ನಲ್ಲಿರುವ ಪ್ರತಿಷ್ಠಿತ ಕ್ಯಾಲಿಫೋನರ್ಿಯಾ ಇನ್ಸ್ಟಿಟ್ಯೂಟ್ ಆಫ್ ಆಟ್ಸರ್್ನಲ್ಲಿ ಸಂಗೀತ ವಿಭಾಗದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪಂ.ರಾಜೀವ ತಾರಾನಾಥರು ಪ್ರಮುಖ ಭಾರತೀತ ಸಂಗೀತ ಸಮ್ಮೇಳನಗಳು, ವಿಶ್ವವಿದ್ಯಾನಿಲಯಗಳು, ಪಾಶ್ಚಿಮಾತ್ಯ ಚೇಂಬರ್ ಸಂಗೀತ ಸರಣಿಗಳು, ವಿಶ್ವಸಂಗೀತ ಉತ್ಸವಗಳು ಮತ್ತು ಉನ್ನತಮಟ್ಟದ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಲು ಮೀಸಲಾಗಿರುವ ಭಾರತೀಯ ಸಾಂಸ್ಕೃತಿಕ ಸಂಸ್ಥೆಗಳಿಗೆ ಅವರು ಭಾರತದಾದ್ಯಂತ  ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭೇಟಿ ನೀಡಿ, ಸಂಗೀತ ಕಛೇರಿಗಳನ್ನು ನಡೆಸಿ ಪ್ರಸಿದ್ಧಿ ಗಳಿಸಿದ್ದಾರೆ. ಅವರು ಬಾರತ, ಆಸ್ಟ್ರೇಲಿಯಾ, ಯುರೋಪ್, ಅಮೇರಿಕಾ ಮತ್ತು ಯಮೇನ್ ದೇಶಗಳಿಗೆ ಭೇಟಿಯಿತ್ತಿದ್ದಾರೆ. ಅಲ್ಲದೇ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗೌರವಾನ್ವಿತ ಭಾರತೀಯ ಚಲನಚಿತ್ರಗಳೀಗೆ ಸಂಗೀತ ಸಂಯೋಜಿಸಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ ಪ್ರಮುಖ ಚಲನಚಿತ್ರಗಳೆಂದರೆ ಕನ್ನಡದ ಸಂಸ್ಕಾರ, ಪಲ್ಲವಿ, ಅನುರೂಪ. ಶೃಂಗಾರಮಾಸ, ಪೇಪರ್ ಬೋಟ್, ಖಂಡವಿದೆಕೋ ಮಾಂಸವಿದೆಕೋ ಹಾಗೂ ಮಲಯಾಳಂನ ಕಾಂಚನ ಸೀತಾ, ಕಟವ್ ಮುಂತಾದವುಗಳು. ಇವುಗಳಲ್ಲಿ ಕೆಲವಕ್ಕೆ ಪ್ರಶಸ್ತಿಗಳೂ ಬಂದಿವೆ.

ಪಂ.ರಾಜೀವ ತಾರಾನಾಥರು ಸಂಗೀತದಲ್ಲಿ ಧ್ವನಿ ಸುರುಳಿಗಳನ್ನು ಹೊರತಂದಿದ್ದಾರೆ. ಮನನ ಮೆಡಿಟೇಶನ್ದಲ್ಲಿ ಬಿಹಾಗ್ ಮತ್ತು ಭೈರವಿ ರಾಗಗಳು, ಹಾರ್ಮೋನಿ ಸಿಂಧು ಭೈರವಿ ರಾಗ ಮಾಲಿಕೆ, ಕಾಫಿ ರಾಗದ ಹಲವು ಮುಖಗಳು, ರಸರಂಗ್, ರಿಪ್ಲೆಕ್ಷನ್ಸ್ ಅರೌಂಡ್ ನೂನ್, ತೋಡಿ ಮತ್ತು ಕಾಫಿ ರಾಗಗಳು, ಡೇ ಭ್ರೇಕ್ ಆಂಡ್ ಎ ಕ್ಯಾಂಡಲ್ ಎಂಡ್, ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ರಾಗ ನಟಭೈರವ, ರಾಗ ಕೌಶಿ ಭೈರವಿ, ಓವರ್ ದಿ ಮೂನ್ದಲ್ಲಿ ರಾಗ ಚಂದ್ರ ನಂದನ, ರಾಗ ಅಹಿರ್ ಭೈರವ್, ರಾಗ ಚಾರುಕೇಶಿ, ದಿ ಮ್ಯಾಗ್ನಿಫಿಶನ್ಸ್ ಆಫ್ ಯಮನ್ ಕಲ್ಯಾಣ, ಇನ್ ದಿ ಮಾಸ್ಟಸರ್್ ಟ್ರೆಡಿಶನ್, ರಾಗ ಬಸಂತ ಮುಖಾರಿ, ರಾಗ ಕಿರ್ವಾ ಣಿ, ರಾಗ ಕೋಮಲ್ ದುರ್ಗಾ, ರಾಗ ಪುರಿಯಾ ಧನಶ್ರೀ ಮುಂತಾದವುಗಳು. ಪಂ.ರಾಜೀವ ತಾರಾನಾಥರು ಇಂದಿಗೂ ಸರೋದಿನಷ್ಟೇ ಗಂಭೀರವಾಗಿ ಸಾಹಿತ್ಯವನ್ನು ಆಸ್ವಾದಿಸುತ್ತಾರೆ. ಅವರು ಪುಣೆಯ ಫಿಲ್ಮ್ ಇನ್ಸ್ಟ್ಯೂಟ್ನ ಸಂಗೀತ ವಿಭಾಗದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಯೆಮನ್, ಪೆನ್ಸಿಲ್ಪೇನಿಯಾ ಮುಂತಾದ ಕಡೆಗಳಲ್ಲಿ ಸಾಹಿತ್ಯ ಮತ್ತು ಸಂಗೀತ ಕಲಿಸಲು ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. 

ಪಂ.ರಾಜೀವ ತಾರಾನಾಥರ ಅಗಾಧ ಸೇವೆಯನ್ನು ಗುರುತಿಸಿ, ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. 1993ರಲ್ಲಿ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, 1996ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಕರ್ನಾಟಕ ಸರ್ಕಾರದ ಸಂಗೀತ ರತ್ನ ಟಿ.ಚೌಡಯ್ಯ ಸ್ಮಾರಕಪ್ರಶಸ್ತಿ, 2000ರಲ್ಲಿ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, 2006ರಲ್ಲಿ ಕೆಂಪೇಗೌಡ ಪ್ರಶಸ್ತಿ, 2013ರಲ್ಲಿ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ನಿಂದ ರಾಷ್ಟ್ರೀಯ ಸಮ್ಮಾನ, 2019ರಲ್ಲಿ ಪದ್ಮಶ್ರೀ, ಹಂಪಿ ಕನ್ನಡ ವಿ.ವಿ.ಯ ನಾಡೋಜ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. 'ಸರೋದ್ ಮಾಂತ್ರಿಕ ಪಂಡಿತ ರಾಜೀವ ತಾರಾನಾಥ' ಎಂಬ ಕೃತಿಯನ್ನು ಹಿರಿಯ ಲೇಖಕಿ ಸುಮಂಗಲಾ ಅವರು ರಚಿಸಿದ್ದಾರೆ.

ಸಂಗೀತದಲ್ಲಿ ಕಲಿಕೆ ಎನ್ನುವುದು ಎಂದು ಕೊನೆಗೊಳ್ಳಬಾರದು. ನಿಜವಾದ ಶಿಷ್ಯನಿಗೆ ಕಲಿಕೆ ಕೊನೆಗೊಂಡಿತು ಎನಿಸುವುದೂ ಇಲ್ಲ. ನಾನು ಸರೋದ್ ಕಲಿಯಲು ಆರಂಭಿಸಿದಾಗ ಪ್ರತಿದಿನ, ಪ್ರತಿಗಂಟೆ, ಪ್ರತಿಕ್ಷಣ ಅದಮ್ಯ ಬಾಯಾರಿಕೆ ಅನ್ನಿಸುತ್ತಿತ್ತು. ಇಂದಿಗೂ ನಾನು ವಿದ್ಯಾರ್ಥಿಯೇ. ಸಾರ್ವಕಾಲಿಕ ಶ್ರೇಷ್ಠ ಉಸ್ತಾದ್ ಅಲಿ ಅಕ್ಬರ್ಖಾನ್ ಅವರ ವಿದ್ಯಾರ್ಥಿ  ಎಂದು ಪಂ. ರಾಜೀವ ತಾರಾನಾಥ ಅವರು ಹೆಮ್ಮೆಯಿಂದ ಹೇಳುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಪಂ.ತಾರಾನಾಥರು ತುಂಬಾ ಉದಾತ್ತ ಜೀವಿ. ಸುತ್ತಮುತ್ತಲಿನವರ ನೋವಿಗೆ ಅವರ ಹಾಗೆ ಸ್ಪಂದಿಸುವುವವರು ಬಹಳ ವಿರಳ. ಅವರು ಸಧ್ಯ ಮೈಸೂರಿನ ಸರಸ್ವತಿಪುರಂನಲ್ಲಿ ನೆಲೆಸಿದ್ದು, ಯುವ ಸಂಗೀತಗಾರರಿಗೆ ಉತ್ತೇಜನ ನೀಡುತ್ತಾ ಮುನ್ನಡೆದಿದ್ದಾರೆ. ವರ್ಷ 91 ಗತಿಸಿದರೂ ಗಮನಿಸದೆ ರಾಗಗಳ ಆಲಾಪನೆ ಮತ್ತು ತಾಳಗಳ ಮೇಳದಲ್ಲಿ ತಮ್ಮನ್ನು ಮರೆತು ಸಂಗೀತಲೋಕದಲ್ಲಿ ಬೆರೆತು ಹೋಗುವ ಅನುಪಮ ಸಾಧನೆ ಅವರದು. ಪಂಡಿತ ರಾಜೀವ ತಾರಾನಾಥ ಅವರ ಎಂಟು ದಶಕಗಳ ಸಂಗೀತ ಜೀವನಯಾನವೇ ರೋಚಕವಾದುದು.

                                                                -ಸುರೇಶ ಗುದಗನವರ

               ಧಾರವಾಡ 

 

ಸುದ್ದಿ ಓದಿ