ಮನರಂಜನೆ

ಅದ್ಭುತ ಕಲಾವಿದನ ಸಾವು ಆಘಾತ ತಂದಿದೆ:ಸ್ಯಾಂಡಲ್ ವುಡ್ ಕಣ್ಣೀರು

ಅದ್ಭುತ ಕಲಾವಿದನ ಸಾವು ಆಘಾತ ತಂದಿದೆ:ಸ್ಯಾಂಡಲ್ ವುಡ್ ಕಣ್ಣೀರು

ಬೆಂಗಳೂರು, ಜೂನ್ 15: ನಟ ಸಂಚಾರಿ ವಿಜಯ್ ನಿಧನಕ್ಕೆ ಸ್ಯಾಂಡಲ್ ವುಡ್ ನಟ, ನಟಿಯರು ಕಣ್ಣೀರು ಮಿಡಿದಿದ್ದು, ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. 'ಸಂಚಾರಿ ವಿಜಯ್ ಕೊನೆಯುಸಿರೆಳೆದರು ಎನ್ನುವುದನ್ನು ಒಪ್ಪಿಕೊಳ್ಳಲು ಬಹಳ ಕಷ್ಟವಾಗ್ತಿದೆ. ಲಾಕ್‌ಡೌನ್‌ಗೂ ಮುಂಚೆ ಎರಡ್ಮೂರು ಸಲ ಭೇಟಿ ಮಾಡಿದ್ದೆ. ಎಲ್ಲರೂ ಅವರ ಕೊನೆಯ ಚಿತ್ರದ ಬಗ್ಗೆ ಉತ್ಸುಕರಾಗಿದ್ದರು. ಬಿಡುಗಡೆ ವಿಳಂಬವಾಗಿತ್ತು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

 ನಟ ಉಪೇಂದ್ರ, ''ಅದ್ಭುತ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ರವರು ಬೈಕ್ ಅಪಘಾತದಿಂದ ಅಸುನೀಗಿದ್ದಾರೆ ಎಂಬ ಆಘಾತಕಾರಿ ಸುದ್ದಿಯು ಇಡೀ ಚಿತ್ರರಂಗವನ್ನೇ ಶೋಕದಲ್ಲಿ ಮುಳುಗಿಸಿದೆ. ಅವರ ಕುಟುಂಬದವರಿಗೆ ಈ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ.. ಓಂ ಶಾಂತಿ '' ಎಂದು ಟ್ವೀಟ್ ಮಾಡಿದ್ದಾರೆ.ನಟಿ ಅಮೂಲ್ಯ, 'ಅನಿರೀಕ್ಷಿತ ಅಪಘಾತದಿಂದ ಅಗಲಿದ ಪ್ರತಿಭಾವಂತ ನಟ ,ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸಂತಾಪ ಸೂಚಿಸಿದ್ದಾರೆ. ಸಂಚಾರಿ ವಿಜಯ್ ನಿಧನಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿ, ''ಮತ್ತೆ ಹುಟ್ಟಿ ಬಾ ಗೆಳೆಯ'' ಎಂದು  ಹೇಳಿದ್ದಾರೆ. ದಕ್ಷಿಣ ಭಾರತದ ಖ್ಯಾತ ವಿಶ್ಲೇಷಕ ರಮೇಶ್ ಬಾಲ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆಯುತ್ತಿರುವ ಫೋಟೋ ಶೇರ್ ಮಾಡಿಕೊಂಡಿರುವ ರಮೇಶ್ ಬಾಲ ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿ'' ಎಂದಿದ್ದಾರೆ. ನಟ ರಕ್ಷಿತ್ ಶೆಟ್ಟಿ ''ನಿಮ್ಮ ಹಠಾತ್ ನಿಧನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದು ಬಹಳ ನಿರಾಸೆ ತಂದಿದೆ. ನಿಮ್ಮ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿ'' ಎಂದು ಟ್ವೀಟ್ ಮಾಡಿದ್ದಾರೆ.

  


ಸುದ್ದಿ ಓದಿ