ನಟ ಸಂಚಾರಿ ವಿಜಯ್ ನಿಧನ: ರಾಜ್ಯ ಸರ್ಕಾರ ಸಂತಾಪ
ಬೆಂಗಳೂರು, ಜೂನ್ 15: ನಟ ಸಂಚಾರಿ ವಿಜಯ್ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ, ಕೋವಿಡ್- 19 ಮಾರ್ಗಸೂಚಿಯನ್ನು ಪಾಲಿಸಿ ನೆರವೇರಿಸಲು ಆದೇಶಿಸಿ ರಾಜ್ಯ ಶಿಷ್ಟಾಚಾರ ಇಲಾಖೆ ಉಪ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಪತ್ರ ಹೊರಡಿಸಿದ್ದಾರೆ. "ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಂತಿಮ ವಿಧಿ ವಿಧಾನ ಪೊಲೀಸ್ ಗೌರವಗಳೊಂದಿಗೆ ನಡೆಯಲಿದೆ. ಅಂಗಾಂಗ ದಾನ ಮಾಡಲು ಮುಂದೆ ಬಂದ ಅವರ ಕುಟುಂಬಕ್ಕೆ ನಾನು ಕೃತಜ್ಞನಾಗಿದ್ದೇನೆ, ಪ್ರತಿಭಾವಂತ ಕಲಾವಿದ ಸಂಚಾರಿ ವಿಜಯ್ ಅವರಿಗೆ ತೀವ್ರ ಸಂತಾಪ ಸೂಚಿಸುತ್ತೇನೆ,'' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸ್ವಗ್ರಾಮ ಪಂಚನಹಳ್ಳಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.