ರಸ್ತೆ ಅಭಿವೃದ್ಧಿ: ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಅಧಿಕಾರಿಗಳು
ಲೋಕದರ್ಶನ ವರದಿ
ಮುಂಡಗೋಡ 16: ಪಟ್ಟಣದಿಂದ ಚವಡಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಚಾಲಕರು ಮತ್ತು ಬೈಕ್ ಸವಾರರು ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸದೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಪಟ್ಟಣದಿಂದ ಚವಡಳ್ಳಿ ಗ್ರಾಮ ಸುಮಾರು 4ಕಿ.ಮೀ. ಅಂತರದಲ್ಲಿದ್ದು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಮದ, ಕ್ಯಾಸನಕೇರಿ ಹಾಗೂ ಬ್ಯಾನಳ್ಳಿ ಗ್ರಾಮಸ್ಥರು ಇದೇ ರಸ್ತೆಯಲ್ಲಿ ತಮ್ಮ-ತಮ್ಮ ಕೆಲಸಗಳಿಗೆ ಪಟ್ಟಣಕ್ಕೆ ಬರುತ್ತಾರೆ. ಈ ಬಾರಿ ಬಿದ್ದ ಮಳೆಗೆ ರಸ್ತೆಯ ಮೇಲಿನ ಡಾಂಬರ್ ಪೂರ್ತಿ ಕಿತ್ತು ಹೋಗಿ ರಸ್ತೆ ತುಂಬೆಲ್ಲಾ ಗುಂಡಿಗಳು ಬಿದ್ದಿವೆ. ಗುಂಡಿಗಳ ತುಂಬ ನೀರು ತುಂಬಿಕೊಂಡು ಗುಂಡಿಗಳು ಕಾಣಿಸದೆ ಅದೆಷ್ಟೊ ಬೈಕ್ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಗೊಂಡಿದ್ದಾರೆ. ವಾಹನ ಚಾಲಕರಿಗೂ ಅಷ್ಟೇ ಕಿರಿ-ಕಿರಿ ಉಂಟಾಗಿದೆ. ತುರ್ತಾಗಿ ಕಲ್ಲು ಹಾಗೂ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚಿಸಿದರೆ ಸ್ವಲ್ಪ ಮಟ್ಟಿಗೆ ಸಂಚಾರಕ್ಕೆ ಅನುಕೂಲವಾಗುತ್ತದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.