ಪಾಸ್ಬುಕ್ ಪ್ರಿಂಟರ್ ಯಂತ್ರ ದುರಸ್ತಿ ಮಾಡಿಸಲು ಆಗ್ರಹ
ಲೋಕದರ್ಶನ ವರದಿ
ಮುಂಡಗೋಡ೧೩: ಪಟ್ಟಣದ ಬಂಕಾಪುರ ರಸ್ತೆಯಲ್ಲಿ ಇರುವ ರಾಷ್ಟ್ರೀಕೃತ ಸಿಂಡಿಕೇಟ್(ಕೆನರಾ) ಬ್ಯಾಂಕ್ ಶಾಖೆಯಲ್ಲಿ ಬಹಳ ದಿನಗಳಿಂದ ಪಾಸ್ಬುಕ್ ಪ್ರಿಂಟರ್ ಯಂತ್ರವನ್ನು ದುರಸ್ತಿ ಮಾಡಿಸದೆ ನಿಷ್ಕಾಳಜಿ ತೋರುತ್ತಿರುವುದರಿಂದ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದು ಕೂಡಲೆ ಯಂತ್ರವನ್ನು ದುರಸ್ತಿ ಮಾಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪಟ್ಟಣ ಮತ್ತು ಗ್ರಾಮೀಣ ಭಾಗದ ಜನರು ಬ್ಯಾಂಕ್ಗೆ ವ್ಯವಹಾರ ಮಾಡಲು ಬರುತ್ತಾರೆ. ಹೀಗೆ ಬಂದಾಗ ತಮ್ಮ ಪಾಸ್ ಬುಕ್ಗಳನ್ನು ಪ್ರಿಂಟ್ ಮಾಡಸಬೇಕೆಂದರೆ ಪ್ರಿಂಟರ್ ಯಂತ್ರ ಸರಿಯಿಲ್ಲ ಎಂದು ಹೇಳಿ ಸಿಬ್ಬಂದಿ ಹಲವಾರು ಬಾರಿ ವಾಪಸ್ ಕಳುಹಿಸಿದ್ದಾರೆ. ವರ್ಷಗಟ್ಟಲೆ ಈ ಸಮಸ್ಯೆ ಎದುರಿಸುತ್ತಾ ಬಂದಿದ್ದು ಇನ್ನೂ ಯಂತ್ರವನ್ನು ದುರಸ್ತಿ ಮಾಡಿಸದೆ ಇರುವುದು ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ವಿಲೀನಗೊಳಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಗ್ರಾಹಕರಿಗೆ ಅವಶ್ಯವಿರುವ ಕನಿಷ್ಠ ಸೌಲಭ್ಯ ಒದಗಿಸಲು ಆಗುತ್ತಿಲ್ಲ. ಆದಷ್ಟು ಬೇಗ ಪ್ರಿಂಟರ್ ಯಂತ್ರವನ್ನು ದುರಸ್ತಿ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡ ಬಾರದ ಬ್ಯಾಂಕ್ ಸಿಬ್ಬಂದಿ: ಸಿಂಡಿಕೇಟ್(ಕೆನರಾ)ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಬೇರೆ-ಬೇರೆ ರಾಜ್ಯದವರಾಗಿದ್ದು ಗ್ರಾಹಕರೊಂದಿಗೆ ವ್ಯವಹರಿಸುವಾಗ ಕನ್ನಡ ಮಾತನಾಡಲು ಬಾರದೆ ಬೇರೆ ಭಾಷೆಯಲ್ಲಿ ಮಾತನಾಡುತ್ತಾರೆ. ಗ್ರಾಮೀಣ ಭಾಗದ ಗ್ರಾಹಕರು ಅವರ ಮಾತು ಅರ್ಥವಾಗದೆ ಬೇರೆ ಗ್ರಾಹಕರಿಂದ ಕೇಳಿ ತಿಳಿದುಕೊಳ್ಳಬೇಕಾಗಿದೆ. ಇನ್ನು ಭಾಷೆ ಅರ್ಥವಾಗದ ಕೆಲವರು ಬೇರೆ ಯಾರೂ ಸಿಗದೆ ದಿನವಿಡಿ ಕಾದು ಕುಳಿತು ವಾಪಸ್ ತೆರಳಬೇಕಾದ ಪ್ರಸಂಗ ಬಂದೊದಗಿದೆ.
ಪ್ರಿಯಾ, ಪ್ರಾದೇಶಿಕ ಅಧಿಕಾರಿ ಸಿಂಡಿಕೇಟ್(ಕೆನರಾ) ಬ್ಯಾಂಕ್ ಕಾರವಾರ:ಪಾಸ್ಬುಕ್ ಪ್ರಿಂಟರ್ ಯಂತ್ರದ ಸಮಸ್ಯೆ ಬಗ್ಗೆ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಇನ್ನು 2-3 ದಿನಗಳಲ್ಲಿ ಹೊಸ ಪ್ರಿಂಟರ್ ವ್ಯವಸ್ಥೆ ಮಾಡಲಾಗುವುದು.