ರಸ್ತೆ ವಿಚಾರ: ಗ್ರಾಮಸ್ಥರ ಜತೆ ರಾಕಿಂಗ್ ಸ್ಟಾರ್ ಪೋಷಕರ ಜಗಳ
ಬೆಂಗಳೂರು, ಮಾರ್ಚ್ 09: ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಪೋಷಕರ ಜೊತೆ ಗ್ರಾಮಸ್ಥರು ಜಗಳಕ್ಕೆ ಇಳಿದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಯಶ್ ಕುಟುಂಬದವರ ಜೊತೆ ತಿಮ್ಮೇನಹಳ್ಳಿ ಗ್ರಾಮದವರು ಗಲಾಟೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಯಶ್ ಅವರ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ ಇಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸುತ್ತಿರುವಾಗ ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಮೀನಿಗೆ ರಸ್ತೆ ನಿರ್ಮಾಣ ಮಾಡಲು ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದ ವೇಳೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದಾರೆ.ಈ ವೇಳೆ ಶುರುವಾದ ಗಲಾಟೆ ಮಾತಿಗೆ ಮಾತು ಬೆಳೆದು ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಧ್ಯಸ್ಥಿಕೆ ವಹಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ. ಯಶ್ ಇತ್ತೀಚಿಗೆ ಹಾಸನದಲ್ಲಿ ಜಮೀನು ಖರೀದಿಸಿದ್ದು, ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದಾರೆ. ಯಶ್ ಕುಟುಂಬ ಹೆಚ್ಚಾಗೆ ಅದೇ ಫಾರ್ಮ ಹೌಸ್ ನಲ್ಲಿ ನೆಲೆಸಿರುತ್ತದೆ ಎಂದು ತಿಳಿದುಬಂದಿದ್ದು, ಈ ಘಟನೆ ಬಗ್ಗೆ ಯಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.