ಅಂಧತ್ವ ಮುಕ್ತ ಬಳ್ಳಾರಿ ಜಿಲ್ಲೆಗೆ ಕ್ರಮಕೈಗೊಳ್ಳಿ
ಬಳ್ಳಾರಿ10: ಅಂಧತ್ವ ಮುಕ್ತ ಬಳ್ಳಾರಿ ಜಿಲ್ಲೆ ವಿಶೇಷ ಅಭಿಯಾನದ ಅಡಿ ಜಿಲ್ಲೆಯಲ್ಲಿ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ,ಗ್ಲಾಕೋಮ,ಕಣ್ಣಿನ ಸಂಬಂಧಿತ ತೊಂದರೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದರು.
ಅಂಧತ್ವ ಮುಕ್ತ ಬಳ್ಳಾರಿ ಜಿಲ್ಲೆ ವಿಶೇಷ ಅಭಿಯಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಎಲ್ಲಾ ನೇತ್ರ ತಜ್ಞರ ಸಭೆ ಕರೆಯಲು ಸೂಚನೆ ನೀಡಿದ ಜಿಲ್ಲಾಧಿಕಾರಿ ನಕುಲ್ ಅವರು 2021-22 ರೊಳಗಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳ ಜನರನ್ನು ನೇತ್ರ ಪರೀಕ್ಷೆಗೆ ಒಳಪಡಿಸುವ ಮತ್ತು ಅವಶ್ಯಕವಿರುವ ಕನ್ನಡಕಗಳನ್ನು ಒದಗಿಸಲು ಮತ್ತು ನೇತ್ರ ಶಸ್ತ್ರಚಿಕಿತ್ಸೆ ಕ್ರಮಗಳನ್ನು ಅನುಸರಿಸಲು ಸೂಚಿಸಿದರು.
ಈ ವಿಶೇಷ ಅಭಿಯಾನದ ಅಡಿ ಬಳ್ಳಾರಿ ನಗರದ ಸ್ಲಂ ಜನರ ಕಣ್ಣಿನ ತಪಾಸಣೆ ಮಾಡಿದ ವರದಿಗಳನ್ನು ಜಿಲ್ಲಾಧಿಕಾರಿ ನಕುಲ್ ಅವರು ಪರಿಶೀಲಿಸಿದರು. ಕಣ್ಣಿನ ದೃಷ್ಟಿದೋಷಗಳ ಬಗ್ಗೆ ಆಸ್ಪತ್ರೆಗೆ ಕಳುಹಿಸಿದರ ಸಂಖ್ಯೆ ಮತ್ತು ಆಸ್ಪತ್ರೆಗೆ ಬಂದವರ ಸಂಖ್ಯೆಯನ್ನು ಪರಿಶೀಲಿಸಲು ಸೂಚಿಸಿದರು.
ಅಂಧತ್ವ ಮುಕ್ತ ಬಳ್ಳಾರಿ ಜಿಲ್ಲೆ ವಿಶೇಷ ಅಭಿಯಾನಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಕ್ರಿಯಾಯೋಜನೆ ರೂಪಿಸಿ ಎಂದು ಸೂಚಿಸಿದ ಡಿಸಿ ನಕುಲ್ ಅವರು ಮೊದಲಿಗೆ ನಗರ ಪ್ರದೇಶಗಳಲ್ಲಿನ ಅಂಧತ್ವ ಸಮಸ್ಯೆ ಇರುವವರಿಗೆ ಚಿಕಿತ್ಸೆ ಒದಗಿಸಿ;ಇದಾದ ನಂತರ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೈಗೊಳ್ಳಿ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಅವರು ಅಂಧತ್ವ ಮುಕ್ತ ಬಳ್ಳಾರಿ ನಗರ ವಿಶೇಷ ಅಭಿಯಾನದ ಸಂದರ್ಭದಲ್ಲಿ ನಗರದಲ್ಲಿ 132 ಸ್ಲಂಗಳಲ್ಲಿ ಸಮೀಕ್ಷೆ ಮಾಡಲಾಗಿದ್ದು, 44,285 ಮನೆ ಭೇಟಿ ಮಾಡಿ 221427 ಜನರ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿತ್ತು. ಮೊದಲನೆ ಹಂತವಾಗಿ 8,818 ಮನೆಗಳ ಭೇಟಿಕೊಟ್ಟು ಇದರಲ್ಲಿ 43,973 ಜನರನ್ನು ಭೇಟಿ ಮಾಡಿ ಈ ಪೈಕಿ 36,137 ಜನರನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 2006 ಜನರು ಆಸ್ಪತ್ರೆಗೆ ಬಂದಿದ್ದು ಈ ಪೈಕಿ 1,325 ಜನರಿಗೆ ದೃಷ್ಟಿದೋಷವಿದ್ದು 803 ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ; ಇನ್ನೂ 522 ಜನರಿಗೆ ಕನ್ನಡಕಗಳನ್ನು ವಿತರಿಸಬೇಕಾಗಿದೆ ಎಂದು ಸಭೆಗೆ ವಿವರಿಸಿದರು.
299 ಜನರಿಗೆ ಕಣ್ಣಿನಪೋರೆ ಶಸ್ತ್ರಚಿಕಿತ್ಸೆ, 7 ಜನರಿಗೆ ಗ್ಲಾಕೋಮ,258 ಜನರಿಗೆ ಇತರೆ ಕಣ್ಣಿನ ತೊಂದರೆ ಇದೆ ಎಂದು ಅವರು ವಿವರಿಸಿದರು.
ನಯನ ಸೇವಾ ಪ್ರೋಜೆಕ್ಟ್ ಸಹಕಾರದೊಂದಿಗೆ ಅಂಧತ್ವ ಮುಕ್ತ ಬಳ್ಳಾರಿ ಜಿಲ್ಲೆಯನ್ನಾಗಿ(ತಡೆಗಟ್ಟಬಹುದಾದ ಅಂಧತ್ವ ನಿಯಂತ್ರಣ ವಿಶೇಷ ಅಭಿಯಾನ)ರೂಪಿಸಲು ಸೂಚಿಸಿದ ಡಿಸಿ ನಕುಲ್ ಅವರು ಈಗಿನಿಂದಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಅಭಿಯಾನಕ್ಕೆ ಸಂಬಂಧಿಸಿದಂತೆ ವಿಮ್ಸ್ ನಿದರ್ೇಶಕರು, ವಿಮ್ಸ್ ನೇತ್ರ ವಿಭಾಗೀಯ ಮುಖ್ಯಸ್ಥರು,ಜಿಲ್ಲಾಶಸ್ತ್ರ ಚಿಕಿತ್ಸಕರು, ಜಿಲ್ಲಾಸ್ಪತ್ರೆ ನೇತ್ರ ತಜ್ಞರು, ನಯನ ಸೇವಾ ಪ್ರೋಜೆಕ್ಟ್ ಬೆಂಗಳೂರು ಅವರು ಒಳಗೊಂಡ ಜಿಲ್ಲಾ ಸಮಿತಿಯೊಂದನ್ನು ರಚಿಸಿ ಎಂದು ಡಿಸಿ ನಕುಲ್ ಸೂಚಿಸಿದರು.
ನಯನ ಐಕೇರ್ ಚಾರಿಟೆಬಲ್ ಟ್ರಸ್ಟ್ನ ಮುಖ್ಯಸ್ಥ ಪ್ರಶಾಂತ ಅವರು ನಯನಾ ಸೇವಾ ಪ್ರೊಜೆಕ್ಟ್ ಈ ವಿಶೇಷ ಅಭಿಯಾನದ ಅಡಿ ಈಗಾಗಲೇ ಅಂಧತ್ವ ನಿಯಂತ್ರಣಕ್ಕಾಗಿ ಮನೆ ಮನೆ ಭೇಟಿ ಮೂಲಕ ಅಂಧತ್ವ ಪರೀಕ್ಷೆ ಹಾಗೂ ಅಗತ್ಯವುಳ್ಳವರಿಗೆ ಕನ್ನಡಕ ವಿತರಣೆ ಮಾಡಲಾಗಿದೆ. ಕಡುಬಡವರು ಅಂಧತ್ವದಿಂದ ಹೊರಬರುವ ನಿಟ್ಟಿನಲ್ಲಿ ಈ ವಿಶೇಷ ಅಭಿಯಾನವಾಗಿದೆ. ಕಡುಬಡವರಿಗೆ ಅಂಧತ್ವ ನಿಯಂತ್ರಣಕ್ಕಾಗಿ ಔಷಧೋಪಚಾರ, ಶಸ್ತ್ರಚಿಕಿತ್ಸೆ, ಅಗತ್ಯವುಳ್ಳವರಿಗೆ ಕನ್ನಡಕ ವಿತರಣೆ, ಸಮೀಕ್ಷೆ ಅವಧಿಯಲ್ಲಿ ನಯೋನಿಕ ಐ ಚಾಟರ್್ ಬಳಕೆ ಮಾಡಲಾಗಿದೆ. ಇದರ ಜೊತೆಗೆ ಆರೋಗ್ಯದ ಜಾಗೃತಿ, ಕಣ್ಣಿನ ಆರೈಕೆ, ನೇತ್ರದಾನ ಕುರಿತು ಮಾಹಿತಿ ನೀಡಲಾಗಿದೆ ಎಂದು ಸಭೆಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜಶೇಖರ ರೆಡ್ಡಿ ಮತ್ತಿತರರು ಇದ್ದರು.