ತಾಳಿಕೋಟಿ

ಮದ್ಯದಂಗಡಿ ಬಂದ್ಗೆ ಒತ್ತಾಯಿಸಿ ಮಹಿಳೆಯರಿಂದ ಮನವಿ ಇನ್ನೆಷ್ಟು ಕುಟುಂಬ ಹಾಳಾಗಬೇಕು?

ಮದ್ಯದಂಗಡಿ ಬಂದ್ಗೆ ಒತ್ತಾಯಿಸಿ ಮಹಿಳೆಯರಿಂದ ಮನವಿ  ಇನ್ನೆಷ್ಟು ಕುಟುಂಬ ಹಾಳಾಗಬೇಕು?

ವಿಶೇಷ ವರದಿ

ತಾಳಿಕೋಟಿ೧೩: ಸಮೀಪದ ಕೊಡಗಾನೂರ ಗ್ರಾಮದಲ್ಲಿರುವ ಅಕ್ರಮ ಮದ್ಯದಂಗಡಿ ಹಾಗೂ ವ್ಯಕ್ತಿಗತ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ತಹಶೀಲ್ದಾರ ಶ್ರೀದರ ಗೋಟೂರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಿನದಿಂದ ದಿನೆ ಹೆಚ್ಚಾಗುತ್ತಿದೆ. ಇದರಿಂದ ನೂರಾರು ಯುವಕರು ವಯಸ್ಕರು ಹಾಳಾಗುತ್ತಿದ್ದು ಕುಡಿದ ಅಮಲಿನಲ್ಲಿ ಹೊಡೆದಾಟ, ಕಲಹಗಳಾಗುತ್ತಿರುವದರ ಜೊತೆಗೆ ಬಡಕುಟುಂಬಗಳು ಬೀದಿ ಪಾಲಾಗುತ್ತಿವೆ. ಕೆಲವು ಅಮೂಲ್ಯ ಜೀವಗಳೂ ಇದಕ್ಕೆ ಬಲಿಯಾಗಿವೆ.

ಇದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಗ್ರಾಮದ ಮಹಿಳೆಯರು ಸ್ವತಃ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಗೆ ತಿಳಿಸಿದ್ದರೂ ಯಾವುದೇ ಸೂಕ್ತ ಕ್ರಮ ಜರುಗಿಸಿಲ್ಲ. ಕಳೆದ ತಿಂಗಳು ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಸಭೆಯಲ್ಲಿಯೂ ತಹಶೀಲ್ದಾರ ಹಾಗೂ ಅಬಕಾರಿ ಅಧಿಕಾರಿಗಳಿಗೆ ಈ ಗಂಭೀರ ಸಮಸ್ಯೆ ತಿಳಿಸಿದ್ದರು. ಕೇವಲ 2 ದಿನಗಳಲ್ಲಿ ಎಲ್ಲಾ ಅಕ್ರಮ ಅಂಗಡಿಗಳನ್ನು ಮುಚ್ಚುವದಾಗಿ ತಿಳಿಸಿದ ಅಧಿಕಾರಿಗಳು ಎಲ್ಲಿದ್ದಾರೆಂದು ಗೊತ್ತಿಲ್ಲವೆಂದು ಮಹಿಳೆಯರು ತಿಳಿಸುತ್ತಾರೆ.

ಒಂದು ಅಂದಾಜಿನ ಪ್ರಕಾರ ಈ ಮತಕ್ಷೇತ್ರದ ಪ್ರತಿ ಗ್ರಾಮದಲ್ಲಿ ದಿನ ಒಂದಕ್ಕೆ 60 ರಿಂದ 70 ಸಾವಿರದಷ್ಟು ಮದ್ಯ ಅಕ್ರಮವಾಗಿ ಮಾರಾಟವಾಗುತ್ತದೆ. ಇದು ಎಲ್ಲ ಅಧಿಕಾರಿ ಹಾಗೂ ಕ್ಷೇತ್ರದ ಶಾಸಕರಿಗೂ ಗೊತ್ತು. ಆದರೆ ಜಾಣಕುರುಡುತನ ತೋರುವುದು ಮುಂದುವರೆದಿದೆ. ನೂರಾರು ಬಡಕುಟುಂಬಗಳು ಹಾಳಾಗಿ ಬೀದಿ ಪಾಲಾದರೂ ಅವರಿಗೇನಾಗಬೇಕಾಗಿದೆ. ಹಾಳಾಗುವವರು ಸಾರ್ವಜನಿಕರು ವೋಟಬ್ಯಾಂಕ ರಾಜಕಾರಣ ಇಡೀ ವ್ಯವಸ್ಥೆಗೆ ಹಳ್ಳಹಿಡಿಸಿದೆ.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ದೇಶ ಸ್ವಾತಂತ್ರ್ಯದ ಸಂಭ್ರಮಾಚಾರಣೆಯಲ್ಲಿದ್ದಾಗ ಕಣ್ಣೀರು ಹರಿಸಿದ್ದರು. ನನ್ನ ದೇಶ ಪಾನಮುಕ್ತವಾದಾಗ ಮಾತ್ರ ನನಗೆ ನಿಜವಾದ ಸಂತೋಷ ಸಿಗುತ್ತದೆ ಎಂದಿದ್ದರು. ಅವರ ಹೆಸರು ಹೇಳಿಕೊಂಡೇ ಜನಪ್ರತಿನಿಧಿಗಳು ರಾಜಕಾರಣ ಮಾಡುವುದು ಆದರೆ ಬಾಪುವಿನ ಆದರ್ಶ ಮಾತ್ರ ಯಾರಿಗೂ ಬೇಡ, ಅಧಿಕಾರಿಗಳ ಕೈಕಟ್ಟಿಹಾಕಲಾಗಿದೆ. ಅವರು ಏನೂ ಮಾಡುವ ಸ್ಥಿತಿಯಲ್ಲಿ ಉಳಿದಿಲ್ಲ. ಹೀಗಾದರೆ ಜನರ ಗೋಳು ಕೇಳುವವರು ಯಾರು ಇನ್ನೆಷ್ಟು ಜೀವ ಹಾಗೂ ಕುಟುಂಬಗಳು ಇದಕ್ಕೆ ಬಲಿಯಾಗಬೇಕು? ಆ ದೇವರೆ ಬಲ್ಲ 

ಸುದ್ದಿ ಓದಿ