ಮನರಂಜನೆ

‘ಪೊಗರು’ ಬೇಕಿತ್ತು ಇನ್ನಷ್ಟು ಖದರ್ರು

‘ಪೊಗರು’ ಬೇಕಿತ್ತು ಇನ್ನಷ್ಟು ಖದರ್ರು

ಬೆಂಗಳೂರು, ಫೆ 19:ಅಭಿಮಾನಿಗಳು ಶಿಳ್ಳೆ ಹೊಡೆಯಲು ಒಳ್ಳೆ ಹಾಡು, ಚಪ್ಪಾಳೆ ತಟ್ಟಲು ಧ್ರುವ ಸರ್ಜಾರ ಸಖತ್ ಡೈಲಾಗ್‍, ಮನ ಸೆಳೆಯೋಕೆ ರಶ್ಮಿಕಾ ಮಂದಣ್ಣ ಮಂದಸ್ಮಿತ … .ಹೌದು, ಇಷ್ಟೆಲ್ಲ ಇದ್ದರೂ, ‘ಪೊಗರು’ ಚಿತ್ರಕ್ಕೆ ಇನ್ನಷ್ಟು ಖದರ್ರು ಬೇಕಿತ್ತು ಎನಿಸುತ್ತದೆ.ಹಾಸ್ಯ, ಹಾಡು, ಭಾವನಾತ್ಮಕ ಸನ್ನಿವೇಶಗಳ ಮೂಲಕ ಪ್ರೇಕ್ಷಕ ತಾಳ್ಮೆಯಿಂದಲೇ ಚಿತ್ರ ನೋಡಿಸಿಕೊಂಡು ಹೋಗುತ್ತದೆಯಾದರೂ, ನಿರ್ದೇಶಕರು ಕ್ಲೈಮ್ಯಾಕ್ಸ್ ವರೆಗೂ ಇದೇ ಟೆಕ್ನಿಕ್ ಮೂಲಕ ಕತೆ ವಿವರಿಸಲು ವಿಫಲರಾಗಿದ್ದಾರೆ. ಕಥೆಯಲ್ಲಿ ಬರುವ ನಾಯಕನ ಪಾತ್ರಕ್ಕೆ ಬೇಕಿದ್ದಷ್ಟು ಪ್ರಾಮುಖ್ಯತೆ ನೀಡುವ ಬದಲು ನಾಯಕನ ಪಾತ್ರಧಾರಿಯನ್ನು ವೈಭವೀಕರಿಸಲು ಹೋಗಿರುವ ಕಾರಣ ಉತ್ತಮ ಭಾವನಾತ್ಮಕ ಸಿನಿಮಾ ಎನಿಸಿಕೊಳ್ಳುವ ಅವಕಾಶ ಕೈತಪ್ಪಿದೆ. ಮಲತಂದೆಯ ಮೇಲೆ ದ್ವೇಷ ಬೆಳೆಸಿಕೊಂಡುಡ, ಸ್ವಂತ ತಾಯಿಯನ್ನು ಪಡೆಯಲು ಹಠಕ್ಕೆ ಬಿದ್ದ ಒರಟು ಯುವಕ ಶಿವನ ಕತೆ.

 ಕರುಣೆ ಇಲ್ಲದ, ಹಣವೇ ಎಲ್ಲಾ ಎಂದುಕೊಂಡಿರುವ, ದಬ್ಬಾಳಿಕೆ ಮಾಡಿಯೇ ಗೌರವ ಪಡೆಯಬೇಕು ಎಂಬುದನ್ನು ನಂಬಿದ ಯುವಕನಲ್ಲಿ ಮಾನವೀಯತೆ ಹುಟ್ಟುವ, ಪ್ರೀತಿ-ಪ್ರೇಮವನ್ನು ಅರ್ಥಪಡಿಸುವ ಕೆಲವು ಸನ್ನಿವೇಶಗಳು ಸೃಷ್ಟಿಯಾಗುತ್ತವೆ. 'ವಿಲನ್' ಆಗಿದ್ದ ಯುವಕ 'ನಾಯಕ'ನಾಗಿ ಬದಲಾಗುತ್ತಾನೆ. ಈ ಬದಲಾವಣೆಗೆ ಕಾರಣಗಳೇನು, ನಾಯಕನಾಗಿ ಹೇಗೆ ಸಿಡಿದೆದ್ದು ನಿಲ್ಲುತ್ತಾನೆ ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವ ವೇಳೆಗೆ ನಿರ್ದೇಶಕರಿಗೆ ಆತುರ ಹೆಚ್ಚಾದಂತಿದೆ. ಪಾತ್ರಗಳ ವರ್ತನೆಯಲ್ಲಿ ಬಲು ಬೇಗ ಬದಲಾವಣೆಗಳಾಗುತ್ತವೆ. ಪಾತ್ರಗಳ ವರ್ತನೆ ಬದಲಾಗಲು ಶಕ್ತ ಕಾರಣವನ್ನು ನಿರ್ದೇಶಕರು ನೀಡುವುದಿಲ್ಲ. ಕೊಟ್ಟಿರುವ ಕಾರಣಗಳು ಪೇಲವ ಎನಿಸಿಕೊಳ್ಳುತ್ತವೆ.   ಹೆಣ ಇಟ್ಟುಕೊಂಡು ಸಾಲ ವಸೂಲಿ ಮಾಡುವ, ಅಪ್ಪನನ್ನು ಹೊಡೆಯುವ ವ್ಯಕ್ತಿ, ಒಂದು ಹನಿ ಕಣ್ಣೀರಿಗೆ ಬದಲಾಗುವುದು ಬುದ್ಧಿವಂತ ಪ್ರೇಕ್ಷಕನಿಗೆ 'ಕನ್ವಿನ್ಸ್' ಆಗುವುದು ಕಷ್ಟ.

 ನಟನೆಯ ವಿಷಯಕ್ಕೆ ಬಂದರೆ, ಧ್ರುವ ಸರ್ಜಾ ಎಂದಿನಂತೆ ಫ್ರೆಶ್ ಆಗಿ ನಟಿಸಿದ್ದಾರೆ, ಭಾವನಾತ್ಮಕ ದೃಶ್ಯಗಳಿಗಿಂತಲೂ ಹಾಸ್ಯ, ದರ್ಪ ಪ್ರದರ್ಶಿಸುವ ಸನ್ನಿವೇಶಗಳಲ್ಲಿ ಅವರ ನಟನೆ ಚೆನ್ನಾಗಿದೆ. ನಾಯಕಿ ರಶ್ಮಿಕಾ ತಮ್ಮ ಪ್ರಾಮುಖ್ಯತೆಯಿಲ್ಲದೆ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ನೀಡಿದ್ದಾರೆ.  ಪವಿತ್ರಾ ಲೋಕೇಶ್, ರವಿಶಂಕರ್. ರಾಘವೇಂದ್ರ ರಾಜ್‌ಕುಮಾರ್, ಡಾಲಿ ಧನಂಜಯ್ ಹಾಗೂ ನಟಿ ಮಯೂರಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ದಿವಂಗತ ಬುಲೆಟ್ ಪ್ರಕಾಶ್ ಪ್ರೇಕ್ಷಕರನ್ನು ನಗಿಸುತ್ತಾರೆ.  'ಪೊಗರು' ಚಿತ್ರ ನೋಡಿ ಹೊರಬಂದ ಬಹುತೇಕ ಪ್ರೇಕ್ಷಕರು ಒಂದಿಷ್ಟು ‘ಕೊರತೆ’ ನೀಗಿಸಿದ್ದರೆ ಚಿತ್ರ ಇನ್ನಷ್ಟು ಚೆನ್ನಾಗಿರುತ್ತಿತ್ತು, ಒಳ್ಳೆ ಖದರ್ ಇರುತ್ತಿತ್ತು ಎನ್ನುತ್ತಿದ್ದಾರೆ.   



ಸುದ್ದಿ ಓದಿ