ತಾಳಿಕೋಟಿ

ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ: ಕಾಶಪ್ಪನವರ

ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ: ಕಾಶಪ್ಪನವರ

2ಎ ಮೀಸಲಾತಿ ಹಕ್ಕೋತ್ತಾಯ ಸಮಾವೇಶ ಡಿ.12ಕ್ಕೆ ವಿಧಾನಸಭೆ ಮುತ್ತಿಗೆಗೆ ನಿರ್ಧಾರ 

ತಾಳಿಕೋಟಿ 28: ಲಿಂಗಾಯತ ಪಂಚಮಸಾಲಿ ಸಮಾಜ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಅವರನ್ನು ಮುಖ್ಯವಾಹಿನಿಗೆ ತರಲು ಹಾಗೂ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು 2ಎ ಮೀಸಲಾತಿ ಕೇಳುತ್ತಿದ್ದೇವೆ ಇದು ನಮ್ಮ ಸಂವಿಧಾನಬದ್ದವಾದ ಹಕ್ಕಾಗಿದೆ ಎಂದು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಸಮೀಪದ ಬಳಗಾನೂರ ಗ್ರಾಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡ ವೀರರಾಣಿ ಕಿತ್ತೂರ ಚನ್ನಮ್ಮ ಅವರ 244ನೇ ಜಯಂತಿ, 199ನೇ ವಿಜಯೋತ್ಸವ ಹಾಗೂ 2ಎ ಮೀಸಲಾತಿ ಹಕ್ಕೋತ್ತಾಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಈ ಹೋರಾಟ ಯಾರ ವಿರುದ್ಧವೂ ಆಗಿರದೆ ಕೇವಲ ನಮ್ಮ ಹಕ್ಕು ಪಡೆಯಲಿಕ್ಕಾಗಿದೆ ಲಿಂಗಾಯತ ಸಮಾಜದ 112 ಪಂಗಡಗಳಲ್ಲಿ ಈಗಾಗಲೇ 32 ಪಂಗಡಗಳಿಗೆ ಒಳಮೀಸಲಾತಿ ನೀಡಲಾಗಿದೆ. ಇತ್ತೀಚಿಗೆ ಎಸ್ಸಿ-ಎಸ್ಟಿ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ನಾವು ಯಾರನ್ನೂ ವಿರೋಧಿಸುವುದಿಲ್ಲ ಯಾರು ನಮ್ಮನ್ನು ವಿರೋಧಿಸಬೇಡಿ ಮಾಜಿ ಹಾಲಿ ಮುಖ್ಯ ಮಂತ್ರಿಗಳಿಬ್ಬರೂ ಕೊಟ್ಟ ಮಾತು ಮರೆತಿದ್ದಾರೆ ಅವರಿಗೆ ನಮ್ಮ ಶಕ್ತಿ ಎನೆಂಬುವುದು ಮುಂದಿನದಿನಗಳಲ್ಲಿ ತೊರಿಸಲಿದ್ದೇವೆ ಡಿ. 12ಕ್ಕೆ 25ಲಕ್ಷ ಸಮಾಜ ಬಾಂಧವರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದರು. 

2ಎ ಮೀಸಲಾತಿ ಹಕ್ಕೋತ್ತಾಯ ನಿರ್ಣಯ ಮಂಡಿಸಿ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ನಮ್ಮ ಬೇಡಿಕೆ ಮನ್ನಿಸದ ಈ ಸರ್ಕಾರವನ್ನು ಎಚ್ಚರಿಸುವ ಕೆಲಸ ನಾವು ಮಾಡಬೇಕಾಗಿದೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ನಮ್ಮ ಹೋರಾಟಕ್ಕೆ ಸಾಕಷ್ಟು ಬೆಂಬಲ ನೀಡಿದ್ದರು ಮುಖ್ಯಮಂತ್ರಿಯಾದ ನಂತರ ಇಲ್ಲಿಯವರೆಗೆ  ನಾಲ್ಕು ಬಾರಿ ನೀಡಿದ ಮಾತನ್ನು ಮುರಿದಿದ್ದಾರೆ. ಈ ಸಮಾಜದ ಋಣ ಅವರ ಮೇಲಿದೆ ಎಂಬುದನ್ನು ಅವರೆಂದೂ ಮರೆಯಬಾರದು. ನಮ್ಮ ಅಂತಿಮ ಹೋರಾಟ ಡಿ. 12ಕ್ಕೆ ವಿಧಾನಸೌಧ ಮುತ್ತಿಗೆ ಹಾಕುವುದರೊಂದಿಗೆ ನಡೆಯಲಿದೆ. ಸಮಾಜ ಬಾಂಧವರು ಇದನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಅವರು ಮಾತನಾಡಿ ಇಂದು ನಾವೆಲ್ಲರೂ ನಮ್ಮ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ನಮ್ಮ ಮಹಿಳೆಯರಿಗೆ ಉತ್ತಮ ಸಂಸ್ಕಾರ ಹಾಗೂ ಉನ್ನತ ಶಿಕ್ಷಣವನ್ನು ನೀಡಲು ಪ್ರಯತ್ನಿಸಬೇಕು ಶಿಕ್ಷಣದಿಂದ ಮಾತ್ರ ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು. 

ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮುಖಂಡ ಶಂಕರಗೌಡ ಹಿರೇಗೌಡರ, ಯುವರಾಜ ಪಾಟೀಲ (ಇಂಡಿ), ರಾಷ್ಟ್ರೀಯ ಬಸವ ಸೈನ್ಯ ಅಧ್ಯಕ್ಷ ಶಂಕರಗೌಡ ಬಿರಾದಾರ, ಡಾ. ಪ್ರಕಾಶ ನರಗುಂದ, ಮಾತನಾಡಿದರು. ಶಿವಶರಣೆ ಮಂಜುಳಾತಾಯಿ ಬಳಗಾನೂರ ಉಪಸ್ಥಿತರಿದ್ದು ಗ್ರಾಮದ ಗಣ್ಯರಾದ ನಿಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. 

ವೇದಿಕೆಯಲ್ಲಿ ಪಂಚಮಸಾಲಿ ಸಮಾಜದ ಗಣ್ಯ ಎಮ್. ಎಸ್. ಪಾಟೀಲ(ನಾಲತವಾಡ), ಗುರು ತಾರನಾಳ, ಗುರುಪ್ರಸಾದ ದೇಶಮುಖ, ಅಮರೇಶ ಗೂಳಿ, ಡಾ. ವಿ. ಎಸ್. ಕಾರ್ಚಿ , ಡಾ. ಸಿ. ಎಸ್. ಸೋಲಾಪೂರ, ಶ್ರೀಶೈಲ ದೊಡಮನಿ, ಕಾಮರಾಜ ಬಿರಾದಾರ, ಡಾ. ಶ್ರೀಶೈಲ ಹುಕ್ಕೇರಿ, ಪ್ರಭು ಬಿಳೇಭಾವಿ, ದೇವೆಂದ್ರ ಕೊಪ್ಪದ, ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ