ವಿಜಯಪುರ

ರೈತನ ತೋಟಕ್ಕೆ ಸಚಿವರ ಆತ್ಮೀಯ ಭೇಟಿ

ರೈತನ ತೋಟಕ್ಕೆ ಸಚಿವರ ಆತ್ಮೀಯ ಭೇಟಿ


ವಿಜಯಪುರ 02: ಬರಡು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರಿಗೆ ರೈತ ವಸಂತ ಬೀರ​‍್ಪ ಮಾನೇ ಅವರು ತಾವು ಬೆಳೆದ ಹೂವು ಹಾಗೂ ತೆಂಗಿನಕಾಯಿಯನ್ನು ನೀಡಿ ಕೃತಜ್ಞತೆ ಸಲ್ಲಿಸಿದ ಹೃದಯಸ್ಪರ್ಶಿ ಘಟನೆ ಮಂಗಳವಾರ ತಿಕೋಟಾ ತಾಲೂಕಿನ ಸಿದ್ದಾಪುರ ಬಳಿಯ ಮಾನೇನದೊಡ್ಡಿಯಲ್ಲಿ ನಡೆಯಿತು.  

ಮಾನೇನದೊಡ್ಡಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಸಚಿವ ಎಂ.ಬಿ. ಪಾಟೀಲರನ್ನು ಅದೇ ಗ್ರಾಮದ ರೈತ ವಸಂತ ಬೀರ​‍್ಪ ಅವರು ಪ್ರೀತಿಯಿಂದ ತಮ್ಮ ತೋಟಕ್ಕೆ ಆಹ್ವಾನಿಸಿದರು. ಸಚಿವರು ರೈತನ ಆಹ್ವಾನ ಸ್ವೀಕರಿಸಿ ತೋಟಕ್ಕೆ ಭೇಟಿ ನೀಡಿದರು.

ಈ ವೇಳೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಹೂವುಗಳನ್ನು ಸಚಿವರಿಗೆ ತೋರಿಸಿ, “ನನ್ನ ತಂದೆ-ತಾಯಿ ನನಗೆ ಜನ್ಮ ನೀಡಿದರೆ, ನೀವು ನೀರಾವರಿ ಮೂಲಕ ಬದುಕು ಹಸನಾಗಲು ಕಾರಣರಾಗಿದ್ದೀರಿ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.  

 “ಈ ಹಿಂದೆ ಬರದ ಪರಿಸ್ಥಿತಿ ಇದ್ದರೂ ನೀರಾವರಿಯಿಂದ ಅದರ ಅನುಭವವಾಗುತ್ತಿಲ್ಲ. ಇಂದು ಜಮೀನಿನಲ್ಲಿ ಹೂವುಗಳು ಅರಳುತ್ತಿವೆ. ತೆಂಗಿನಕಾಯಿ ಬೆಳೆದಿದೆ. ಶ್ರಾವಣ ಮಾಸದಲ್ಲಿ ಹೂವುಗಳಿಂದ ಪ್ರತಿನಿತ್ಯ ಉತ್ತಮ ಆದಾಯ ಗಳಿಸುತ್ತಿದ್ದೇನೆ. ಇದರೊಂದಿಗೆ ಕಬ್ಬು, ತೆಂಗು ಹಾಗೂ ತರಕಾರಿಗಳನ್ನು ಬೆಳೆದು ಸ್ವಾವಲಂಬಿ ಬದುಕು ನಡೆಸುತ್ತಿದ್ದೇನೆ” ಎಂದು ಅವರು ತಿಳಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲರು, ಕೆಲ ವರ್ಷಗಳ ಹಿಂದೆ ರೈತನ ಹೊಲಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದರು. ಆಗ ಕಂಡಿದ್ದ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳು ಇಂದು ಇನ್ನಷ್ಟು ಅಭಿವೃದ್ಧಿಯಾಗಿರುವುದನ್ನು ಕಂಡು ಅಪಾರ ಸಂತಸವಾಗಿದೆ ಎಂದರು.  

ರೈತನ ಆತ್ಮೀಯ ಸ್ವಾಗತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ರೈತರು ತಾವು ಬೆಳೆದ ಹೂವು ಹಾಗೂ ತೋಟದ ಎಳನೀರಿನಿಂದ ಸತ್ಕರಿಸಿದ ಆತ್ಮೀಯತೆ ಮತ್ತು ಕೃತಜ್ಞತಾಭಾವ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು. 


ಸುದ್ದಿ ಓದಿ