ದೇಹಚೈತನ್ಯತೆಗೆ ಮಲ್ಲಗಂಬ ಆಟ ಸಾಕ್ಷಿ; ಪ್ರೊ.ಕಲಮರಹಳ್ಳಿ
ಲೋಕದರ್ಶನ ವರದಿ
ಶಿಗ್ಗಾವಿ 15: ನಮ್ಮ ಜನಪದರು ತಮ್ಮ ಆರೋಗ್ಯ ಕಾಪಾಡಿಕೊಳ್ಳವಲ್ಲಿ ವಿವಿಧ ಮಾರ್ಗೋಪಾಯಗಳನ್ನು ಕಟ್ಟಿಕೊಂಡಿದ್ದರು ಎಂದು ದಾವಣಗೆರೆಯ ನಿವೃತ್ತ ಪ್ರಾಂಶುಪಾಲರು ಮತ್ತು ಜಾನಪದ ತಜ್ಞರಾದಂತಹ ಪ್ರೊಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು.
ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ಹೊಸದಾಗಿ ನಿರ್ಮಾಣ ವಾಗಿರುವ ಮಲ್ಲಗಂಬವನ್ನು ಪೂಜಿಸಿ ಶುಭ ಹಾರೈಸಿದ ಮಾತನಾಡಿದ ಅವರು, ವಿವಿಧ ಮಾರ್ಗೋಪಾಯಳನ್ನು ನಾವು ದೈಹಿಕ ಮಾರ್ಗೋಪಾಯಗಳು ಮತ್ತು ಮಾನಸಿಕ ಮಾರ್ಗೋಪಾಯಗಳು ಎಂದು ವಿಂಗಡಿಸಿಕೊಳ್ಳಬಹುದು. ಮಾನಸಿಕ ಮಾರ್ಗೋಪಾಯಕ್ಕಾಗಿ ಮೌಖಿಕ ರೂಪದಲ್ಲಿ ಹೊರಹೊಮ್ಮುವ ಹಾಡು,ಕಥೆ, ಗಾದೆ, ನುಡಿಗಟ್ಟು ಮುಂತಾದವುಗಳು ಸೃಷ್ಟಿಸಿಕೊಂಡರೆ, ದೈಹಿಕ ಮಾರ್ಗೋಪಾಯಗಳಲ್ಲಿ ದೇಹ ಚಲನಶೀಲಗೊಳಿಸುವಂತಹ ಕ್ರೀಡೆಗಳು ಸೃಷ್ಟಿಸಿಕೊಂಡಿದ್ದರು. ಅಂಥವುಗಳಲ್ಲಿ ಮಲ್ಲಗಂಬ ಕ್ರೀಡೆಯೂ ಒಂದಾಗಿದೆ ಎಂದು ಮಲ್ಲಗಂಭದ ಮಹತ್ವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ದಾವಣಗೆರೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ.ಮಂಜಣ್ಣ ಎಂ ಮಾತನಾಡಿ ಮಲ್ಲಗಂಬ ಎನ್ನುವುದು ಅರಸೋತ್ತಿಗೆಯ ಸಂದರ್ಭದಲ್ಲಿ ತುಂಬಾ ಮಹತ್ವವನ್ನು ಪಡೆದುಕೊಂಡಿತ್ತು, ಅರಸರುತಮ್ಮ ಸೈನಿಕರ ಶಕ್ತಿಯನ್ನು ಪರೀಕ್ಷಿಸಲು ಈ ಕ್ರೀಡೆಯನ್ನು ಆಡಿಸುತ್ತಿದ್ದರೂ ಆ ಮೂಲಕ ಆ ಸೈನಿಕನ ದೇಹದ ಚಾಕಚಕ್ಯತೆಯನ್ನು ಪರೀಕ್ಷಿಸುತ್ತಿದ್ದರು ಎಂದು ಹೇಳುವುದರ ಮೂಲಕ ಅರಸರಕಾಲ ಘಟ್ಟದ ಮಲ್ಲಗಂಬದ ಮಹತ್ವವನ್ನು ತಿಳಿಸಿದರು.
ವಿಶ್ವವಿದ್ಯಾಲಯಕ್ಕೆ ಆಗಮಿಸುವ ಗಣ್ಯಮಾನ್ಯ ಅತಿಥಿಗಳಿಂದ ಸಸಿ ನೆಡುವ ಕಾರ್ಯದಲ್ಲಿ ಪಾಲ್ಗೊಂಡರು. ಈ ಸಸಿ ನೆಡುವ ಕಾರ್ಯವನ್ನು ಕಂಡು ತುಂಬಾ ಉತ್ಸಕರಾದ ಈ ಇಬ್ಬರೂ ಮಹನೀಯರು, ಇದೊಂದು ಒಳ್ಳೆಯ ಕಾರ್ಯ. ಈಗ ನೆಟ್ಟ ಈ ಸಸಿಗಳು ಮರವಾಗಿ ಬೆಳದ ಮೇಲೆ ಅವುಗಳ ಬಹು ಉಪಯೋಗ ಸಾರ್ಥಕವಾಗುತ್ತದೆ. ಆಗ ಅದರ ಫಲ ನಮಗಲ್ಲದಿದ್ದರೂ ಮುಂದಿನ ಪೀಳಿಗೆಗೆ, ಸಮಾಜಕ್ಕೆ, ಪಕ್ಷಿ-ಪ್ರಾಣಿ ಸಂಕುಲಕ್ಕೆ, ಪರಿಸರಕ್ಕೆ ತುಂಬಾ ಉಪಕಾರಿಯಾಗುತ್ತದೆ. ಈ ನಿಟ್ಟಿನಕಾರ್ಯ ಹಮ್ಮಿಕೊಂಡಿರಿವ ಕುಲಪತಿಗಳ ಕಾರ್ಯವನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊಟಿ.ಎಮ್ ಭಾಸ್ಕರ್ ಮತ್ತು ಕುಲಸಚಿವ ಪ್ರೊ.ಸಿ.ಟಿ.ಗುರುಪ್ರಸಾದ್ ಉಪಸ್ಥಿತರಿದ್ದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು