ಸಿನಿಮಾ ಡೈಲಾಗ್ ಮೂಲಕ ಹಿಂಸೆಗೆ ಪ್ರಚೋದನೆ ! ಪೊಲೀಸರಿಂದ ಮಿಥುನ್ ವಿಚಾರಣೆ
ಕೋಲ್ಕತಾ, ಜೂನ್16: ಬಾಲಿವುಡ್ ಹಿರಿಯ ನಟ, ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರನ್ನು ಕೋಲ್ಕತಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣಾ ಪ್ರಚಾರದ ಭಾಗವಾಗಿ ಮಿಥುನ್ ಮಾಡಿದ್ದ ಒಂದು ಭಾಷಣ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಮಿಥುನ್ ಅವರನ್ನು ಬುಧವಾರ ಸುಮಾರು 45 ನಿಮಿಷಗಳ ಕಾಲ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ, 71 ವರ್ಷದ ಮಿಥುನ್ ಚಕ್ರವರ್ತಿ ಬಿಜೆಪಿ ತಾರಾ ಪ್ರಚಾರಕರಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. ಅವರು ಹಲವು ಸಾರ್ವಜನಿಕ ಸಭೆಗಳು ಹಾಗೂ ಸಮಾವೇಶಗಳಲ್ಲಿ ಆವೇಶಪೂರಿತವಾಗಿ ಭಾಷಣ ಮಾಡಿದ್ದರು. ಪಶ್ಚಿಮ ಬಂಗಾಳ ಚುನಾವಣೆ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ 16 ಜನರು ಸಾವನ್ನಪ್ಪಿದ್ದರು. ಈ ಹಿಂಸಾಚಾರಗಳ ಮೇಲೆ ಮಿಥುನ್ ಅವರ ಪ್ರಚೋದನಕಾರಿ ಭಾಷಣಗಳು ಪ್ರಭಾವ ಬೀರಿವೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅದರಲ್ಲೂ ' ಪ್ರಮುಖವಾಗಿ “ನನ್ನನ್ನು ಒದ್ದರೆ.. ಅವರ . ಶವ ಸ್ಮಶಾನದಲ್ಲಿ ಬೀಳುತ್ತದೆ” ಎಂದು ತಮ್ಮ ಚಿತ್ರದ ಸಂಭಾಷಣೆ ಬಳಸಿರುವುದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೆ, ತಾವು ಆವೇಶಪೂರಿತವಾಗಿ ಸಿನಿಮಾ ಸಂಭಾಷಣೆ ಹೇಳಿದ್ದೇನೆಯೇ ಹೊರತು ಉದ್ದೇಶಪೂರ್ವಕ ದ್ವೇಷ, ಪ್ರಚೋದನಾಕಾರಿ ಭಾಷಣಮಾಡಿಲ್ಲ ಎಂದು ಮಿಥುನ್ ಕೋಲ್ಕತಾ ನ್ಯಾಯಾಲಯಕ್ಕೆ ತಿಳಿಸಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ವಜಾಗೊಳಿಸಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದರು. ಆದರೆ, ಮಿಥುನ್ ಚಕ್ರವರ್ತಿ ಅವರನ್ನು ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿತ್ತು.