ಬಿಜೆಪಿಗೆ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ...?
ಕೋಲ್ಕತಾ, ಮಾ 6 : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ದಿನ ದಿನಕ್ಕೂ ರಂಗುಪಡೆದುಕೊಳ್ಳುತ್ತಿದೆ. ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಂದಿ ಗ್ರಾಮ್ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಟಿಎಂಸಿ ಪರಮೋಚ್ಛ ನಾಯಕಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ. ಅದೇ ರೀತಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಒಂದೇ ಬಾರಿ ಘೋಷಿಸಿದ್ದಾರೆ.ಮಮತಾ ಬ್ಯಾನರ್ಜಿ ಗೇಮ್ ಗೆ ಚೆಕ್ ಇಡಲು ಬಿಜೆಪಿ ನಾಯಕರು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾ ತಾರೆಯರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಬಿಜೆಪಿ ನಾಯಕರು ... ಸ್ಟಾರ್ ಹೀರೋ ಮಿಥುನ್ ಚಕ್ರವರ್ತಿ ಅವರಿಗೂ ಕೇಸರಿ ಶಾಲು ಹೊದಿಸಿ ಬರಮಾಡಿಕೊಳ್ಳಲು ಸಜ್ಜುಗೊಂಡಿದೆ. ಭಾನುವಾರ ಕೊಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಬೃಹತ್ ಬಹಿರಂಗ ಸಭೆಯಲ್ಲಿ ಮಿಥುನ್ ಚಕ್ರವರ್ತಿ ಬಿಜೆಪಿ ಸೇರುವ ಸಾಧ್ಯತೆ ಇದೆ. ಅಲ್ಲದೆ, ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಬಿಜೆಪಿಗೆ ಸೇರಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು, ನಾಯಕರ ಉತ್ಸಾಹ ಹೆಚ್ಚಿಸಲು ಎಲ್ಲಾ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರನ್ನು ಜಮಾಯಿಸುವ ಮೂಲಕ ಪ್ರಧಾನಿ ಮೋದಿ ಬಹಿರಂಗ ಸಭೆಯನ್ನು ಪಶ್ಚಿಮ ಬಂಗಾಳ ಬಿಜೆಪಿ ನಾಯಕರು ಆಯೋಜಿಸಿದ್ದಾರೆ. ಭಾನುವಾರ ಸಂಜೆ ಕೋಲ್ಕತ್ತಾದ ಬ್ರಿಗೇಡಿಯರ್ ಮೈದಾನದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಈ ನಡುವೆ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರಲು ಸಿದ್ದವಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಇದೇ ಸಮಯದಲ್ಲಿ ಸೌರವ್ ಗಂಗೂಲಿ ಕೂಡ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳಿವೆ.
ಕಳೆದ ತಿಂಗಳು ಮಿಥುನ್ ಚಕ್ರವರ್ತಿ ಮುಂಬೈನಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದರು. ಅಂದಿನಿಂದ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದಕ್ಕೂ ಮೊದಲು ಮಿಥುನ್ ಚಕ್ರವರ್ತಿ ನಾಗ್ಪುರದಲ್ಲಿ ಭಾಗವತ್ ಅವರನ್ನು ನಾಲ್ಕೈದು ಬಾರಿ ಭೇಟಿಯಾಗಿದ್ದರು. ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಗೊಂಡರೆ ಅದಕ್ಕಿಂತ ಇನ್ನೇನು ಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಹೇಳಿದ್ದಾರೆ. ಅವರು ಎಲ್ಲಿಂದ ಸ್ಪರ್ಧಿಸಲು ಬಯಸಿದರೂ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಹೇಳಿದರು. ಮಿಥುನ್ ಚಕ್ರವರ್ತಿ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳುವುದರಿಂದ ಬಿಜೆಪಿಗೆ ಮಾತ್ರವಲ್ಲದೆ ಪಶ್ಚಿಮ ಬಂಗಾಳಕ್ಕೂ ಕೂಡಾ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.
ಚಕ್ರವರ್ತಿ ಮಿಥುನ್ ಅವರನ್ನು ಗೌರವಿಸಿ ಆಡಳಿತಾರೂಢ ಟಿಎಂಸಿ ಸರ್ಕಾರ 2014 ರಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಅವರು 2016 ಡಿಸೆಂಬರ್ 29 ರಂದು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದಲೂ ಬ್ಯಾನರ್ಜಿ ಅವರಿಂದ ದೂರ ಉಳಿದಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣ ಪ್ರಕರಣದಲ್ಲಿ ಮಿಥುನ್ ಚಕ್ರವರ್ತಿಯ ಹೆಸರು ತಗುಲಿಕೊಂಡಿದೆ.