ಚಿತ್ರಮಂದಿರಗಳಿಗೆ ಶೇ.100ರಷ್ಟು ಪ್ರವೇಶಕ್ಕೆ ಅನುಮತಿ: ಜಾವಡೇಕರ್
ನವದೆಹಲಿ, ಜನವರಿ 31 : ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸಂಖ್ಯೆಯಲ್ಲಿ ಕಡಿತ ಕಂಡಿದ್ದ ಚಿತ್ರಮಂದಿರಗಳಿಗೆ ಫೆ.1 ರಿಂದ ಶೇ .100 ರಷ್ಟು ಪ್ರವೇಶ ಕಲ್ಪಿಸಲಾಗುವುದು ಎಂದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಹೇಳಿದ್ದಾರೆ.ಈ ಕುರಿತು ಮಾರ್ಗಸೂಚಿ ಬಿಡುಗಡೆಗೊಳಿಸಿದ ಜಾವಡೇಕರ್, ಚಿತ್ರಮಂದಿರಗಳು ಎಲ್ಲಾ ಕೋವಿಡ್ -19 ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಸ್ಯಾನಿಟೈಸೇಶನ್ ನಿರ್ವಹಣೆ ಅತಿ ಅಗತ್ಯ. ಆದರೆ ಜನರು ಚಿತ್ರಮಂದಿರಗಳೊಳಗಿನ ಸ್ಟಾಲ್ಗಳಿಂದ ಆಹಾರವನ್ನು ಖರೀದಿಸಬಹುದು ಎಂದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿನೆಮಾ ಪ್ರಿಯರಿಗೆ ಒಳ್ಳೆಯ ಸುದ್ದಿ. ಇಂದು, ಚಲನಚಿತ್ರ ಪ್ರದರ್ಶನಕ್ಕಾಗಿ ಪರಿಷ್ಕೃತ ಎಸ್ಒಪಿ ನೀಡಲಾಗಿದೆ. ಫೆಬ್ರವರಿ 1 ರಿಂದ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಪ್ರವೇಶಾತಿಯನ್ನು ಅನುಮತಿಸಲಾಗುವುದು. ಆದರೆ ಎಲ್ಲಾ ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ ಎಂದಿದ್ದಾರೆ.