ಬಳ್ಳಾರಿ

ಕೋಳೂರು ಏತನೀರಾವರಿ ಯೋಜನೆ ಪುನಶ್ಚೇತನ ಕಾಮಗಾರಿ ಸಚಿವ ಶ್ರೀರಾಮುಲು ಲೋಕಾರ್ಪಣೆ

ಕೋಳೂರು ಏತನೀರಾವರಿ ಯೋಜನೆ  ಪುನಶ್ಚೇತನ ಕಾಮಗಾರಿ ಸಚಿವ ಶ್ರೀರಾಮುಲು  ಲೋಕಾರ್ಪಣೆ

ಬಳ್ಳಾರಿ 01: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಬಳಿ 7.13 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೋಳೂರು ಏತನೀರಾವರಿ (ಡಿ-7 ಕಾಲುವೆ) ಪುನಶ್ಚೇತನಾ ಕಾಮಗಾರಿಯನ್ನು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಗುರುವಾರ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು ಅವರು ಈ ಕೋಳೂರು ಏತನೀರಾವರಿ ಯೋಜನೆಯ ವಿತರಣಾ ಕಾಲುವೆ-07ರ ಕೊನೆಯ ಭಾಗದ ನೀರಾವರಿ ಭಾದಿತ ಅಚ್ಚುಕಟ್ಟು ಪ್ರದೇಶವಾಗಿರುವ ಬೈಲೂರು,ಸಿಂಧಿಗೇರಿ, ಶಾನವಾಸಪುರ,ಡಿ.ಕಗ್ಗಲ್ಲು,ಕೊಂಚಿಗೇರಿ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಸುಮಾರು 3750 ಎಕರೆ ಜಮೀನು ಪ್ರದೇಶಕ್ಕೆ ಜುಲೈನಿಂದ ಡಿಸೆಂಬರ್ವರೆಗೆ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ಈ ಭಾಗದ ರೈತರ ಬಹುದಿನಗಳ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ ಎಂದರು.

ತುಂಗಾಭದ್ರಾ ಬಲದಂಡೆ ಮೇಲ್ಪಟ್ಟ ಕಾಲುವೆಯ ವಿತರಣಾ ಕಾಲುವೆ-07ರ ಕೊನೆಯ ಭಾಗದ ನೀರಾವರಿ ಬಾಧಿತ ಜಮೀನುಗಳಿಗೆ ಸಮರ್ಪಕ ನೀರು ಒದಗಿಸಲು ಅನಾನುಕೂಲವಾಗುತ್ತಿರುವುದನ್ನು ಮನಗಂಡು ಮತ್ತು ಐದು ಗ್ರಾಮಗಳ 3750 ಎಕರೆ ಜಮೀನು ಪ್ರದೇಶಕ್ಕೆ ನೀರು ಸರಬರಾಜು ವ್ಯತ್ಯಯ ಉಂಟಾಗಿರುವುದನ್ನು ಗಮನಿಸಿ ಕೋಳೂರು ಹಳ್ಳ(ತುಂಗಾಭದ್ರಾ ಯೋಜನೆಯ ಪುನರುತ್ಪತ್ತಿ ನೀರು)ದಲ್ಲಿ ಹರಿಯುತ್ತಿರುವ ಪುನರುತ್ಪತ್ತಿ ನೀರನ್ನು ಬಳಸಿಕೊಂಡು ಏತನೀರಾವರಿ ಪುನಶ್ಚೇತನಾ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ 50 ಕ್ಯೂಸೆಕ್ ನೀರು ಬೇಕಾಗಲಿದೆ ಎಂದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅನೇಕ ಏತನೀರಾವರಿ ಯೋಜನೆಗಳ ಮೂಲಕ ರೈತರ ಜಮೀನುಗಳಿಗೆ ನೀರಾವರಿಗೆ ಒಳಪಡಿಸುವ ಕೆಲಸ ನಮ್ಮ ಸರಕಾರ ಮಾಡುತ್ತಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಅನೇಕ ಏತನೀರಾವರಿ ಯೋಜನೆಗಳಿಗೆ ಸಾಕಷ್ಟು ಪ್ರಮಾಣದ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡುವುದರ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಮೂಲಕ ರೈತರ ಕಲ್ಯಾಣಕ್ಕೆ ಶ್ರಮಿಸುತ್ತಿದೆ.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ,ರೈತ ವಿದ್ಯಾನಿಧಿ ಸೇರಿದಂತೆ ಅನೇಕ ರೈತಪರ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸಿವೆ ಎಂದು ಅವರು ಹೇಳಿದರು.


ಸುದ್ದಿ ಓದಿ