ವಿಜಯಪುರ

ಪಟ್ಟಣದಲ್ಲಿ ಕಾರ ಹುಣ್ಣಿಮೆ ಸಂಭ್ರಮ

ಪಟ್ಟಣದಲ್ಲಿ ಕಾರ ಹುಣ್ಣಿಮೆ ಸಂಭ್ರಮ

ಲೋಕದರ್ಶನ ವರದಿ 

ದೇವರಹಿಪ್ಪರಗಿ : ಕಾರ ಹುಣ್ಣಿಮೆ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರೈತರು ಬುಧವಾರದಂದು ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಿ ಹಬ್ಬ ಆಚರಿಸಿ ಸಂಭ್ರಮಿಸಿದರು. ಪಟ್ಟಣದಲ್ಲಿ ಎತ್ತುಗಳಿಗೆ ಅಲಂಕಾರಿಕ ಬಣ್ಣಗಳನ್ನು ಹಚ್ಚಿ, ಕೋಡಣಸು, ಜೂಲುಗಳನ್ನು ಹಾಕಿ ಸಿಂಗರಿಸಲಾಗಿತ್ತು. ಸಂಜೆ ಪಟ್ಟಣದ ಕರಿದೇವರ ದೇವಸ್ಥಾನದಿಂದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮೇನ್ ಬಜಾರ್ ರಥದ ಮುಂದೆ ಸಾಂಪ್ರದಾಯಿಕವಾಗಿ ಎತ್ತುಗಳನ್ನು ಒಟ್ಟುಗೂಡಿಸಿ ಎತ್ತಿನ ಕೋಡು ಮತ್ತು ಕೊರಳಿಗೆ ಕಡುಬು, ವಡೆ, ಕರಚಿಕಾಯಿ, ಶೇಂಗಾಕಾಯಿ , ಕೊಬ್ಬರಿ ಬಟ್ಟಲು ಸೇರಿದಂತೆ ವಿವಿಧ ಖಾದ್ಯ ಪದಾರ್ಥಗಳನ್ನು ಕಟ್ಟಿ ಸಾಲಾಗಿ ನಿಲ್ಲಿಸಲಾಗಿತ್ತು. ಎತ್ತುಗಳಿಗೆ ಪೂಜೆ ಸಲ್ಲಿಸಿದ ನಂತರ ಎತ್ತುಗಳಿಗೆ ಮುಂಗಾರು ಮತ್ತು ಹಿಂಗಾರು ಎಂದು ನಾಮಕರಣ ಮಾಡಿ ಐದು ಬಾರಿ ಓಡಿಸಲಾಯಿತು. ಇದೇ ಸಂದರ್ಭದಲ್ಲಿ  ರೈತ ಮುಖಂಡರುಗಳಾದ ಸಂಗು ಯಂಬತ್ನಾಳ,ನಿಂಗು ಅವಟಿ, ರಾಚಯ್ಯ ಹಿರೇಮಠ,ಸಂಪತ್ ಜಮಾದಾರ, ವೀರೇಶ ಕುದರಿ, ಕಾಶಿನಾಥ ಕೋರಿ, ಅಪ್ಪು ಪಾಟೀಲ ಸೇರಿದಂತೆ ಯುವಕರು, ಪ್ರಮುಖರು, ಗಣ್ಯರು ಹಾಗೂ ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ