ಸಂಕೇಶ್ವರ

ಗ್ರಾಮೀಣ ವಿದ್ಯಾರ್ಥಿಗಳ ಪಾಲಿನ ಕಲ್ಪವೃಕ್ಷ ಅಪ್ಪಣ್ಣಗೌಡ ಪಾಟೀಲ

ಗ್ರಾಮೀಣ ವಿದ್ಯಾರ್ಥಿಗಳ ಪಾಲಿನ ಕಲ್ಪವೃಕ್ಷ ಅಪ್ಪಣ್ಣಗೌಡ ಪಾಟೀಲ


ಗ್ರಾಮೀಣ ವಿದ್ಯಾರ್ಥಿಗಳ ಪಾಲಿನ ಕಲ್ಪವೃಕ್ಷ ಅಪ್ಪಣ್ಣಗೌಡ ಪಾಟೀಲ

ಸಂಕೇಶ್ವರ 23: ಗಡಿನಾಡಿನಲ್ಲಿ ಶಿಕ್ಷಣ ಮತ್ತು ಸಹಕಾರ ರಂಗದಲ್ಲಿ ಕ್ರಾಂತಿ ಮಾಡಿದ ಸಮಾಜದ ಏಳಿಗೆಗೆ ತಮ್ಮ ಇಡಿ ಜೀವನವನ್ನು ಮುಡುಪಾಗಿಟ್ಟ ಸಹಕಾರ ಮಹರ್ಷಿ ಶಿಕ್ಷಣ ಶಿಲ್ಪಿ ಲಿಂಗೈಕ್ಯ ಅಪ್ಪಣ್ಣಗೌಡ ಪಾಟೀಲರು ಕಟ್ಟಿ ಬೆಳೆಸಿದ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘದ ಶಿಕ್ಷಣ ಸಂಸ್ಥೆ ಇರದೆ ಹೋಗಿದ್ದರೆ ನಾನು ಎಮ್ಮೆ ಮೇಯಿಸಿಕೊಂಡು ಇರಬೇಕಾಗಿತ್ತು. ನನ್ನಂಥ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಪಾಲಿನ ಕಲ್ಪವೃಕ್ಷ ಎಂದು ಪ್ರೊ.ಕೆ.ಬಿ.ಗುಡಸಿಹೇಳಿದರು. 

 ಸಂಕೇಶ್ವರದ ಎಸ್‌.ಡಿ.ವಿ.ಎಸ್‌. ಸಂಘದ ವತಿಯಿಂದ ಬುಧವಾರ ದಿ.23ರಂದು ಸಹಕಾರ ಮಹರ್ಷಿ, ಸ್ವಾತಂತ್ರ್ಯ ಸೇನಾನಿ, ಶಿಕ್ಷಣಶಿಲ್ಪಿ ಲಿಂ. ಆಪ್ಪಣ್ಣಗೌಡ ಪಾಟೀಲರ 50ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಈ ಸಂಘದ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ, ಕರ್ನಾಟಕ ವಿಶ್ವ ವಿದ್ಯಾಲಯದ ಧಾರವಾಡದ ವಿಶ್ರಾಂತ ಕುಲಪತಿ ಪ್ರೊ. ಕೆ. ಬಿ. ಗುಡಸಿ ‘ವಿಜ್ಞಾನ ವಿಕಾಸ ರತ್ನ’ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು. 

 ಅವರು ನನ್ನ ಮಾತೃ ಸಂಸ್ಥೆ ನನ್ನ ಬದುಕಿನ ಹೆದ್ದಾರಿಯನ್ನು ರೂಪಿಸಿದ ಶಿಕ್ಷಣ ಸಂಸ್ಥೆ, ಸಂಸ್ಥೆಯನ್ನು ಸ್ಥಾಪಿಸಿದ ಅದನ್ನು ಕಟ್ಟಿಬೆಳೆಸಿದ ಮಹಾನ್ ಚೇತನಗಳಾದ ದಿವಂಗತ ಅಪ್ಪಣ್ಣಗೌಡ ಪಾಟೀಲ, ಬಸಗೌಡ ಪಾಟೀಲ ಹಾಗೂ ಎ. ಬಿ. ಪಾಟೀಲರ ಪ್ರೀತಿ ಹಾಗೂ ನನಗೆ ವಿದ್ಯೆ ಕಲಿಸಿದ ಗುರುವೃಂದದ ಮಾರ್ಗದರ್ಶನ ನನ್ನ ಬೆಳವಣಿಗೆಗೆ ಕಾರಣವಾಗಿದೆ ಎಂದು ಸ್ಮರಿಸಿಕೊಂಡರು. 

 ‘ಶಿಕ್ಷಣ ಸೇವಾರತ್ನ’ ಪ್ರಶಸ್ತಿ ಪುರಸ್ಕೃತ ಗಜಾನನ ಮನ್ನೀಕರಿ ಅವರು ಅಪ್ಪಣ್ಣಗೌಡ ಪಾಟೀಲರ ಕಾರ್ಯಕ್ಷಮತೆ ಮತ್ತು ಮಾನವೀಯತೆಯ ಗುಣಗಳು, ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಕಾಳಜಿ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದರು.  

ಮಾಜಿ ಸಚಿವ ಶಶಿಕಾಂತ ನಾಯಿಕ ಅವರು ಮಾತನಾಡಿ ಈ ಭಾಗದ ಶ್ರೇಷ್ಠ ಸಂಸ್ಕಾರ ನೀಡಬಲ್ಲ ಏಕೈಕ ಸಂಸ್ಥೆ ಎಂದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಸಚಿವ, ಎಸ್‌.ಡಿ.ವಿ.ಎಸ್‌. ಸಂಘದ ಅಧ್ಯಕ್ಷ ಎ. ಬಿ. ಪಾಟೀಲ ಅವರು ಮಾತನಾಡಿ ಗಡಿ ಭಾಗದ ರೈತರ ಏಳಿಗೆಯನ್ನೇ ಗುರಿಯಾಗಿಸಿಕೊಂಡು ಶಿಕ್ಷಣ ಕೈಗಾರಿಕೆ ಮಾರುಕಟ್ಟೆ ಸಂಘ ಸಂಸ್ಥೆಗಳನ್ನು ಕಟ್ಟಿದ ಮಹಾನ್ ಚೇತನ ಅಪ್ಪಣ್ಣಗೌಡ ಪಾಟೀಲರು ಕಂಡ ಕನಸು ಗಡಿಭಾಗದ ರೈತರ ಮಕ್ಕಳು ಎ.ಸಿ. ರೂಮಿನಲ್ಲಿ ಕುಳಿತು ಕೆಲಸ ಮಾಡಬೇಕೆಂಬುವುದು ಇಂದು ಕೆ. ಬಿ. ಗುಡಸಿಯಂತವರ ಪ್ರತಿಭಾವಂತರಿಂದ ಸಾಕಾರಗೊಂಡಿದೆ ಎಂದು ಹೆಮ್ಮೆಯಿಂದ ಸಂಘದ ಶಿಕ್ಷಣ ಸಂಸ್ಥೆಗಳು ಮತ್ತು ಸಿಬ್ಬಂದಿಯವರನ್ನು ಕೊಂಡಾಡಿದರು. 

  ದಿವ್ಯ ಸಾನಿದ್ಯವನ್ನು ವಹಿಸಿದ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠ, ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಗಡಿಭಾಗದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ನಾಡನ್ನು ಸುಂದರಗೊಳಿಸುವ ಅಪ್ಪಣ್ಣಗೌಡರ ಕನಸು ಸ್ಮರಣೀಯವಾದದ್ದು ಹಿಂದಿನ ಹೆಜ್ಜೆ ಅರಿತು ಮುಂದೆ ನಡೆಯಬೇಕು. ಇತಿಹಾಸದ ಅರಿವು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ನಮ್ಮ ಹಿರಿಯರ ಮಾರ್ಗದರ್ಶನ ಮುಂದಿನ ಬಾಳಿಗೆ ಬೆಳಕು ತೋರುವ ದೀಪ ಎಂದು ಆಶೀರ್ವಚನ ನೀಡಿದರು. ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯವನ್ನು ಕರುಣಿಸಿದ್ದರು. ಪ್ರತಿವರ್ಷದಂತೆ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಮತ್ತು ವಿಶೇಷ ಸಾಧನೆ ಮಾಡಿದ ಶಿಕ್ಷಕ ಹಾಗೂ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಎಲ್ಲ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಪ್ರಾಧ್ಯಾಪಕರು, ಮುಖ್ಯೋಪಾಧ್ಯಾಯರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯವರು ಹಾಗೂ ಅಪ್ಪಣ್ಣಗೌಡರ ಅಭಿಮಾನಿ ಬಳಗದವರು ಹಾಜರಿದ್ದರು.  

ಪಿ.ಬಿ.ಬುರ್ಜಿ ಪ್ರಾಚಾರ್ಯರು ಸ್ವಾಗತಿಸಿದರು. ಜಿ. ಸಿ. ಕೋಟಗಿ ಕಾರ್ಯದರ್ಶಿಗಳು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಗೂ ಪ್ರೊ. ಡಾ. ವಿ. ಡಿ.ನಾಗನೂರಿ ನಿರೂಪಿಸಿದರು. ಡಾ.ಎಂ.ವಾಯ್‌.ಹಿರೇಮಠ ವಂದಿಸಿದರು. ಸಂಘದ ಆಡಳಿತಾಧಿಕಾರಿ ಡಾ. ಬಿ ಎ  ಪೂಜಾರಿ ಇವರ ಮಾರ್ಗದರ್ಶನದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. 


ಸುದ್ದಿ ಓದಿ