ವೀಲ್ ಚೇರ್ ನಲ್ಲಿ ಕಾಮೆಡಿಯನ್ ಕಪಿಲ್ ಶರ್ಮ, ಅಭಿಮಾನಿಗಳ ಕಳವಳ
ಮುಂಬೈ ಫೆ 23:ಬಾಲಿವುಡ್ ನಟ, ಸ್ಟಾರ್ ಕಾಮೆಡಿಯನ್ ಕಪಿಲ್ ಶರ್ಮಾ ಗಾಲಿಕುರ್ಚಿಯಲ್ಲಿರುವ ಚಿತ್ರಗಳು ವೈರಲ್ ಆಗುವ ಮೂಲಕ ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಕಪಿಲ್ ಶರ್ಮಾ ಆರೋಗ್ಯ ಪರಿಸ್ಥಿತಿ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಕಳವಳದಿಂದ ವಿಚಾರಿಸುತ್ತಿದ್ದಾರೆ. ಅತ್ಯಂತ ಜನಪ್ರಿಯತೆ ಪಡೆದುಕೊಂಡಿರುವ ಹಾಸ್ಯ ಕಾರ್ಯಕ್ರಮ 'ದಿ ಕಪಿಲ್ ಶರ್ಮಾ ಶೋ'ಗೆ ಬಿಡುವು ನೀಡುತ್ತಿರುವುದಾಗಿ ಕಪಿಲ್ ಇತ್ತೀಚೆಗೆ ಘೋಷಿಸಿದ್ದರು. ಪತ್ನಿ ಗಿನ್ನಿ ಚರಾತ್ ಎರಡನೇ ಮಗುವಿಗೆ ಜನ್ಮ ನೀಡುತ್ತಿರುವುದರಿಂದ ಆಕೆಯ ಹತ್ತಿರ ಇರಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಎಂದು ಅವರು ಹೇಳಿದ್ದರು. ಇನ್ನೂ ಈ ದಂಪತಿಗೆ ಫೆಬ್ರವರಿ 1 ರಂದು ಗಂಡು ಮಗು ಜನಿಸಿದೆ ಈ ಸಿಹಿ ಸುದ್ದಿಯನ್ನು ಸಹ ಕಪಿಲ್ ಶರ್ಮಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗ ..
ಮುಂಬೈ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿಯಲ್ಲಿ ಕಪಿಲ್ ಶರ್ಮಾ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕಳವಳಕ್ಕೆ ಕಾರಣವಾಗಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ "ನಾನು ಚೆನ್ನಾಗಿದ್ದೇನೆ. ಜಿಮ್‌ನಲ್ಲಿ ತಾಲೀಮು ಮಾಡುವಾಗ ಬೆನ್ನಿಗೆ ಗಾಯವಾಗಿದ್ದು, ತ್ವರಿತವಾಗಿ ಚೇತರಿಸಿಕೊಂಡಿರುವುದಾಗಿ, ನನ್ನ ಯೋಗಕ್ಷೇಮ ವಿಚಾರಿಸಿ, ನನ್ನ ಬಗ್ಗೆ ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ಕಪಿಲ್ ಶರ್ಮಾ ಕಿರುತೆರೆಯಲ್ಲಿ ಕಾರ್ಯಕ್ರಮವೊಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನೆಂದೂ ಹೆಸರುವಾಸಿಯಾಗಿದ್ದಾರೆ. ಡಿಸೆಂಬರ್ 2018 ರಲ್ಲಿ, ಅವರು ತಮ್ಮ ದೀರ್ಘಕಾಲದ ಗೆಳತಿ ಗಿನ್ನಿ ಚಾರತ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ 2019 ರಲ್ಲಿ ಅನೈರಾ ಶರ್ಮಾ ಎಂಬ ಮಗಳು ಜನಿಸಿದ್ದಾಳೆ.