"ಕಲಾವಿದ" ಫೆ. 12 ರಂದು ತೆರೆಗೆ
ಬೆಂಗಳೂರು, ಫೆ 03 :ವ್ಯಂಗ್ಯಚಿತ್ರಕಾರನ ಜೀವನ ಆಧರಿಸಿದ ಸಿನಿಮಾ “ಕಲಾವಿದ“ ಇದೇ 12ರಂದು ತೆರೆಗೆ ಬರಲಿದೆ. ಪದ್ಮರಾಜ್ ಫಿಲಂಸ್ ನಿರ್ಮಿಸಿರುವ 'ಕಲಾವಿದ' ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡಗಡೆ ಇತ್ತೀಚೆಗೆ ನೆರವೇರಿದ್ದು, ವ್ಯಂಗ್ಯ ಚಿತ್ರಕಾರನ ಸುತ್ತ ನಡೆಯುವ ಕಥೆ ಆಧರಿಸಿರುವ ಈ ಚಿತ್ರವನ್ನು ಶಿವಾನಂದ್ ಹೆಚ್ ಡಿ ನಿರ್ದೇಶಿಸಿದ್ದಾರೆ.ನಾನು ಈ ಮೈಕ್ ಹಿಡಿಯಬೇಕೆಂದು ತುಂಬಾ ದಿನಗಳ ಹಿಂದೆ ಕನಸು ಕಂಡವನು. ಆ ಕನಸು ಈಗ ನನಸಾಗಿದೆ. ನನ್ನ ಕನಸಿಗೆ ಜೀವ ತುಂಬಿದ್ದ, ನಿರ್ಮಾಪಕ - ನಾಯಕ ಪ್ರದೀಪ್ ಕುಮಾರ್ ಅವರಿಗೆ ನಾನು ಆಭಾರಿ. ಯಾವುದಾದರೂ ವಿಭಿನ್ನಕಥೆಯ ಮೂಲಕ ನಾನು ಜನರನ್ನು ತಲುಪಬೇಕು ಅಂದುಕೊಂಡೆ. ಕಾರ್ಟೂನಿಸ್ಟ್ ಕುರಿತ ಕಥೆ ಸಿದ್ದಮಾಡಿಕೊಂಡೆ. ಆ ಕಥೆ ಸಿನಿಮಾ ರೂಪದಲ್ಲಿ ನಿಮ್ಮ ಮುಂದೆ ಮೂಡಿ ಬರುತ್ತಿದೆ.ನನಗೆ ಸಹಕಾರ ನೀಡಿದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಧನ್ಯವಾದ ಎಂದು ನಿರ್ದೇಶಕ ಶಿವಾನಂದ್ ಹೆಚ್ ಡಿ ತಿಳಿಸಿದ್ದಾರೆ.
ನಿರ್ಮಾಪಕ, ನಾಯಕ ನಟ ಪ್ರದೀಪ್ ಕುಮಾರ್, “ನಾನು ಮೂಲತಃ ಇಂಜಿನಿಯರ್. ನಂತರ ರಂಗ್ ದೇ ಬಸಂತಿ ಎಂಬ ಹೋಟೆಲ್ ತೆಗೆದು ಹೋಟೆಲ್ ಉದ್ಯಮಕ್ಕೂ ಬಂದೆ. ಈಗ ನಿರ್ಮಾಪಕ - ನಟನಾಗಿ ನಿಮ್ಮ ಮುಂದೆ ಬಂದಿದ್ದೇನೆ. 'ನಿರ್ಮಾಪಕ ಆಗಬೇಕೆಂದುಕೊಂಡಾಗ ನನ್ನ ಬಳಿ ನೂರು ರೂಪಾಯಿ ಇರಲಿಲ್ಲ.ನಂತರ ಹೋಟೆಲ್ ಉದ್ಯಮದಿಂದ ಬಂದ ದುಡ್ಡಿನಿಂದ ಚಿತ್ರ ನಿರ್ಮಿಸಲು ಮುಂದಾದೆ. ನಾವೇ ಒಂದು ತಂಡಕಟ್ಟಿಕೊಂಡು ಸಿನಿಮಾ ನಿರ್ಮಾಣ ಕಾರ್ಯ ಆರಂಭಿಸಿದ್ದೆವು. ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಎಲ್ಲರ ಸಹಕಾರದಿಂದ ಚಿತ್ರ ಇದೇ 12 ರಂದು ತೆರೆಗೆ ಬರಲಿದೆ” ಎಂದಿದ್ದಾರೆ. ಈ ಹಿಂದೆ "ರಣರಣಕ" ಚಿತ್ರದಲ್ಲಿ ಹಾಗೂ ಕೆಲವು ಪ್ರಸಿದ್ದ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಸಂಭ್ರಮ ಈ ಚಿತ್ರದ ನಾಯಕಿ. ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂ ಗು ಸುರೇಶ್, ವರ್ಷ ಮಲ್ಲೇಶ್, ಗೀತ( ಗುಂಡಮ್ಮ) ಶ್ರೀಧರ್, ಜಗದೀಶ್, ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿವೇಕ್ ಚಕ್ರವರ್ತಿ - ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ದಿನಪತ್ರಿಕೆಯೊಂದರಲ್ಲಿ ವ್ಯಂಗ್ಯಚಿತ್ರಕಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾಂತೇಶ್ ಬಡಿಗೇರ್ ಈ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಹ ನಿರ್ಮಾಪಕ ಸುರೇಶ್, ಕಾರ್ಟುನಿಸ್ಟ್ ಪ್ರಪುಲ್(ಒಡಿಶಾ) ನಟರಾದ ಮೈತ್ರಿ ಜಗ್ಗಿ ಹಾಗೂ ಲೋಕೇಶ್ ಅವರ ಸಹಕಾರವೂ ಇದ್ದು, ಚಿದಾನಂದ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಂಕಿ ಯು ಡಿ ವಿ ಸಂಕಲನ ಹಾಗೂ ಆರ್ಯ ರೋಷನ್ ನೃತ್ಯ ನಿರ್ದೇಶನವಿದೆ.