ದರ್ಶನ್ ಇನ್ನಾದರೂ ಮೌನ ಮುರಿಯಲಿ : ಮುಖ್ಯಮಂತ್ರಿ ಚಂದ್ರು
ಬೆಂಗಳೂರು, ಫೆ 23:ಜಗ್ಗೇಶ್ ಮೇಲಿನ ಮುತ್ತಿಗೆ ಕುರಿತು ನಟ ದರ್ಶನ್ ಇನ್ನಾದರೂ ಮೌನ ಮುರಿಯಬೇಕು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟಿದ್ದಾರೆ. ಚಂದನವನದ ಜನಪ್ರಿಯ ನಟರಾದ ಜಗ್ಗೇಶ್ ಹಾಗೂ ದರ್ಶನ್ ಇಬ್ಬರೂ ಬಹಳ ಎತ್ತರಕ್ಕೆ ಬೆಳೆದವರು. ಪರಸ್ಪರ ಮಾತುಕತೆ ನಡೆಸಿ ಬಗೆಹರಿಸಿಕೊಂಡು ಅಭಿಮಾನಿಗಳಿಗೂ ತಿಳಿಹೇಳಬೇಕು ಎಂದಿದ್ದಾರೆ.
ನೆಚ್ಚಿನ ನಟರ ಬಗ್ಗೆ ಏನಾದರೂ ಆಕ್ಷೇಪಾರ್ಹ ಮಾತುಗಳು ಹೊರಬಂದಾಗ ಅಭಿಮಾನಿಗಳು ಗರಂ ಆಗುವುದು ಸಹಜ. ಹಾಗೆಂದ ಮಾತ್ರಕ್ಕೆ ಏಕಾಏಕಿ ಮುತ್ತಿಗೆ ಹಾಕುವುದು ಸರಿಯಲ್ಲ. ಈ ವಿಚಾರದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದಾರೆ.ಚಿತ್ರರಂಗದಲ್ಲಿ ‘ನಾನು’ ಎಂಬುದು ಯಾವ ಕಲಾವಿದರಿಗೂ ಇರಕೂಡದು. ತಮ್ಮ ಮೂಲದ ಬಗ್ಗೆ, ಬೆಳೆದುಬಂದ ಹಾದಿಯ ಬಗ್ಗೆ ಅವಲೋಕನ ಮಾಡಿಕೊಳ್ಳುತ್ತಾ, ಡಾ. ರಾಜ್ ಕುಮಾರ್ ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ಉದ್ಯಮದ ಪ್ರಗತಿಗೆ ಮನಸ್ಸು ಮಾಡಬೇಕು ಎಂದು ಮುಖ್ಯಮಂತ್ರಿ ಚಂದ್ರು ಸಲಹೆ ನೀಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ನವರಸನಾಯಕ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದರೆ ಜಗ್ಗೇಶ್ ಫ್ಯಾನ್ಸ್ ಕಿಡಿಕಾರಿದ್ದಾರೆ.ನವರಸನಾಯಕ ಜಗ್ಗೇಶ್ ಅವರು ಕಳೆದ 40 ವರ್ಷಗಳಿಂದ ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂತಹವರನ್ನು ಮುತ್ತಿಗೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಗ್ಗೇಶ್ ಅಭಿಮಾನಿಗಳು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ ದೂರು ನೀಡಿದ್ದಾರೆ.ಒಟ್ಟಾರೆ, ಘಟನೆಯ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಚಿತ್ರರಂಗದಲ್ಲಿ 40 ವರ್ಷಗಳಿಂದ ಕಲಾಸೇವೆ ಮಾಡಿಕೊಂಡು ಬಂದ ಒಬ್ಬ ಹಿರಿಯ ನಟನನ್ನು ಹೀಗೆ ಅವಮಾನಿಸಬಾರದಿತ್ತು, ಇಬ್ಬರ ನಡುವೆ ಏನೇ ಮನಸ್ತಾಪವಿದ್ದರೂ ಕುಳಿತು ಮಾತನಾಡಬಹುದಿತ್ತು, ಎಂಬ ಮಾತು ಕೇಳಿಬರುತ್ತಿದೆ.