ಮುಂಡರಗಿ

ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ

ಮುಂಡರಗಿ 29:  ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರ ಜೊತೆಗೆ ಯಾವುದೇ ಸಂದರ್ಭದಲ್ಲಿಯೂ ತಮ್ಮ ಬರವಣಿಗೆಯಿಂದ ಪ್ರತಿಯೊಬ್ಬರಿಗೂ ಪತ್ರಿಕೆಯ ಮೂಲಕ ಸುದ್ದಿಯನ್ನು ಹಂಚಿಕೊಳ್ಳುವ ಒಂದು ನೈಜತೆಯನ್ನು ಪ್ರಕಟಿಸುವ ಮಾಧ್ಯಮ ಪತ್ರಿಕೆಯಾಗಿದೆ. ಆ ನೈಜತೆಯನ್ನು ಮುಂಡರಗಿ ತಾಲೂಕಿನ ಪತ್ರಕರ್ತರಲ್ಲಿ ಕಾಣುತ್ತೇವೆ ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಭರವಸೆ ನೀಡಿದರು.

ಪಟ್ಟಣದ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಮುಂಡರಗಿ ಹಾಗೂ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿರಹಟ್ಟಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಏನೇ ಬರೆದರೂ ಸಹ ತಾವು ಅದಕ್ಕೆ ತಕ್ಷಣವೇ ಸ್ಪಂದಿಸುತ್ತಿದ್ದು, ನೈಜ ಹಾಗೂ ನಿಷ್ಠುರ ವರದಿಗಾರಿಕೆಗೆ ಇಲ್ಲಿನ ಪತ್ರಕರ್ತರು ಹೆಸರಾಗಿದ್ದಾರೆ. ಇಲ್ಲಿನ ಪತ್ರಿಕಾ ಭವನಕ್ಕೆ ಶೀಘ್ರದಲ್ಲಿಯೇ ನಿವೇಶನ ಗುರುತಿಸಿ, ಅನುದಾನ ನೀಡುತ್ತೇನೆ. ಅಲ್ಲದೇ ಶಿರಹಟ್ಟಿ ಮತಕ್ಷೇತ್ರದಲ್ಲಿನ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ಶೀಘ್ರವಾಗಿ ರೈತರಿಗೆ ಸದುಪಯೋಗವಾಗಿಸಲು ಪ್ರಯತ್ನಿಸುವೆ. ಕ್ಷೇತ್ರದಲ್ಲಿನ ಶಾಲೆಗಳ ಅಭಿವೃದ್ದಿಪಡಿಸುವುದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಶೌಚಾಲಯಗಳ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ತಿಳಿದು ಬಂದಿದ್ದು, ಈಗಾಗಲೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವದು. ಅನ್ನದಾನೀಶ್ವರ ಸ್ವಾಮೀಜಿ ಪತ್ರಕರ್ತರ ಪ್ರಶಸ್ತಿಗೂ ಸಹ ಧನ ಸಹಾಯ ಮಾಡಲೂ ಮುಂದಾಗಿದ್ದು, ಇಂತಹ ಶ್ರೀಗಳು ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.

     ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಇತ್ತೀಚಗೆ ಸ್ಮಾಟ್ ಪೋನ್ ಇದ್ದವರೆಲ್ಲರೂ ಪತ್ರಕರ್ತರಾಗಿದ್ದಾರೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳು ಮಾತ್ರ ನಿಜವಾದ ಸುದ್ದಿಗಳು ಎನ್ನುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಇತರೆ ಸುದ್ದಿಗಳಿಗೆ ಮಾನ್ಯತೆ ನೀಡಬಾರದು. ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲ. ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿಗಳಿವೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕೆನ್ನುವುದು ಬಹುವರ್ಷಗಳ ಬೇಡಿಕೆಯಾಗಿದ್ದು, ಸರ್ಕಾರ ಬಸ್ ಪಾಸ್ ನೀಡಲು ಮುಂದಾಗಬೇಕು. ಅನೇಕ ವರ್ಷಗಳಿಂದ ಮುಂಡರಗಿ ಘಟಕ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಜಿಲ್ಲೆಯ ಪತ್ರಕರ್ತರ ಪ್ರೋತ್ಸಾಹಕ್ಕಾಗಿ ಪ್ರಶಸ್ತಿ ನೀಡಲು ಅನ್ನದಾನೀಶ್ವರ ಸ್ವಾಮೀಜಿಯವರು ತನು, ಮನ, ಧನದಿಂದ ಆಶಿರ್ವದಿಸಬೇಕು ಎಂದರು. 

     ಅತಿಥಿಯಾಗಿದ್ದ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ  ಡಿ.ಡಿ.ಮೋರನಾಳ, ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ ಮಾತನಾಡಿ, ಪತ್ರಿಕೆ ನಮ್ಮ ಸಮಾಜಕ್ಕೆ ಎಷ್ಟು ಮುಖ್ಯೆ. ಇದರ ಮಹತ್ವವೇನು ಎನ್ನುವುದರ ಕುರಿತು ತಿಳಿಸಿಕೊಡುವುದೇ ಪತ್ರಿಕಾ ದಿನಾಚರಣೆಯ ಪ್ರಮುಖ ಉದ್ದೆಶ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖವಾಗಿತ್ತು. ಪತ್ರಿಕೆಗಳು ನಮ್ಮ ದೇಶ, ರಾಜ್ಯದ ಅಭಿವೃದ್ದಿಗೆ ಪೂರಕವಾಗಿವೆ. ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯಗಳನ್ನು ತಲುಪಿಸಲು ಮುಂದಾಗಬೇಕು ಎಂದರು.

    ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ರಾಜಕಾರಣ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರಿಗೆ ಪತ್ರಿಕೆಗಳ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದಲು ಮುಂದಾಗಬೇಕು. ಅಂದಾಗ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಪೂರಕವಾಗುತ್ತದೆ. ಅದರಿಂದ ಹೆಚ್ಚಿನ ವಿಷಯಗಳನ್ನು ಮನನ ಮಾಡಿಕೊಳ್ಳಬಹುದು. ನಮ್ಮಜಿಲ್ಲೆ ಹಾಗೂ ತಾಲೂಕಿನ ಪತ್ರಕರ್ತರು ಒಳ್ಳೆಯ ಕಾರ್ಯಕ್ಕೆ ಬೆಂಬಲಿಸುವ, ಕೆಟ್ಟ ಕೆಲಸಕ್ಕೆ ಕಿವಿ ಹಿಂಡುವ ಕಾರ್ಯಾವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದರು. 

     ಸಾನಿಧ್ಯವಹಿಸಿದ್ದ ಜ.ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ,ಇಡೀ ಜಗತ್ತಿನ ಸುದ್ದಿಯನ್ನು ನಮ್ಮ ಕೈಗೆ ಇಡುವ ಪ್ರಯತ್ನವನ್ನು ಪತ್ರಿಕೆಗಳು ನಿರಂತರವಾಗಿ ಮಾಡುತ್ತಾ ಬಂದಿವೆ. ಇಂದು ಪತ್ರಕರ್ತರು ಮಾಡುವ ಸೇವೆ ಬಹಳ ಮಹತ್ವಪೂರ್ಣವಾದುದು. ಶ್ರೀಮಠಕ್ಕೂ ಪತ್ರಕರ್ತರಿಗೂ ಅವಿನಾಭಾವ ಸಂಬಂದವಿದ್ದು ಜಿಲ್ಲಾಧ್ಯಕ್ಷರ ಬೇಡಿಕೆಯಂತೆ ತಮ್ಮ ಸಂಘಕ್ಕೆ 1.ಲಕ್ಷ ರೂ.ಗಳನ್ನು ಶ್ರೀಮಠದಿಂದ ನೀಡುವುದಾಗಿ ಘೋಷಿಸಿ, ಅದರಿಂದ ಬರುವ ಬಡ್ಡಿಹಣದಲ್ಲಿ ಪ್ರತಿವರ್ಷ ಉತ್ತಮ ಸೇವೆ ಸಲ್ಲಿಸುವ ಪತ್ರಕರ್ತರಿಗೆ ಪ್ರಶಸ್ತಿ ನೀಡಬೇಕು ಎಂದರು.   

     ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹು.ಬಾ.ವಡ್ಡಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂಜುಮನ್ ಎ ಇಸ್ಲಾಂ ಕಮೀಟಿ ಪದಾಧಿಕಾರಿಗಳು ಹಾಗೂ ಶಾಸಕ ಡಾ.ಚಂದ್ರು ಲಮಾಣಿಯವರು ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಕವಿ ಬಂಕಾಪೂರ, ಸಿ.ಕೆ.ಗಣಪ್ಪನವರ, ಶರಣು ಸೊಲಗಿ, ಕಾಶೀನಾಥ ಬಿಳಿಮಗ್ಗದ ಸಂತೋಷ ಮುರುಡಿ, ಶಿವು ಹೊಂಬಳಗಟ್ಟಿ, ಮಂಜುನಾಥ ಜಾಗಟಗೇರಿ, ಲಕ್ಷ್ಮಣ ದೊಡ್ಡಮನಿ, ರಿಯಾಜ್ಅಹ್ಮದ ದೊಡ್ಡಮನಿ, ವಿಜಯ ಸೊರಟೂರು, ಪುರಸಭೆ ಸದಸ್ಯ ಜ್ಯೋತಿ ಹಾನಗಲ್, ಉದಯಕುಮಾರ ಯಲಿವಾಳ, ಸುವರ್ಣ ಕೋಟಿ, ಬಿ.ಬಾಬು, ಕೊಟ್ರೇಶ ಅಂಗಡಿ, ಎಸ್.ಎಸ್.ಗಡ್ಡದ, ಪಾಲಾಕ್ಷಿ ಗಣದಿನ್ನಿ, ಮಂಜು ಮುಧೋಳ, ಪವನ್ ಚೋಪ್ರಾ, ದೇವು ಹಡಪದ, ಅಡಿವೆಪ್ಪ ಛಲವಾದಿ, ಲಕ್ಷ್ಮಣ ತಗಡಿನಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

    ಪ್ರಾ.ಸಿ.ಎಸ್.ಅರಸನಾಳ ಸ್ವಾಗತಿಸಿ. ಕಾಶೀನಾಥ ಬಿಳಿಮಗ್ಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣ ಮೂಲಿಮನಿ, ಶಿವಕುಮಾರ ಹಳ್ಳಿಹುಡೇದ ನಿರೂಪಿಸಿದರು. ಮಲ್ಲಿಕಾರ್ಜುನಗೌಡ ಪಾಟೀಲ್ ವಂದಿಸಿದರು 

ಸುದ್ದಿ ಓದಿ